Thousands witness the memorial service for Dr. Sri Mummadi Nirvanashri 
ರಾಜ್ಯ

ಡಾ.ಶ್ರೀ ಮುಮ್ಮಡಿ ನಿರ್ವಾಣಶ್ರೀಗಳ ಪುಣ್ಯಸ್ಮರಣೆಗೆ ಸಹಸ್ರಾರು ಜನ ಸಾಕ್ಷಿ

ಕನಕಪುರ: : ದೇಗುಲ ಮಠದ ಲಿಂಗೈಕ್ಯ ಡಾ.ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಪುಣ್ಯಸ್ಮರಣೆ ಹಾಗೂ ಗಣ್ಯರಿಂದ ನುಡಿನಮನ ಕಾರ್ಯಕ್ರಮವು ಮಠದ ಶ್ರೀ ನಿರ್ವಾಣೇಶ್ವರ ವೇದಿಕೆಯಲ್ಲಿ ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಹೂವಿನಿಂದ ಅಲಂಕೃತ ರಥದಲ್ಲಿ ಶ್ರೀಗಳ ಗದ್ದುಗೆಯಿಂದ ನಗರದ ಬೂದಿಕೆರೆ, ಚನ್ನಬಸಪ್ಪ ವೃತ್ತ, ಎಂ.ಜಿ. ರಸ್ತೆ, ಅಯ್ಯಪ್ಪಸ್ವಾಮಿ ದೇವಾಲಯದ ಮೂಲಕ ವೇದಿಕೆವರೆಗೂ ಶ್ರೀಗಳ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ವಿವಿಧ ಕಲಾತಂಡಗಳಿಂದ ಮಂಗಳವಾದ್ಯ, ಮಹಿಳೆಯರ ಕುಂಭಕಳಸ ಸಾಥ್ ನೀಡಿದವು. ಅರುಣೋದಯಕ್ಕೂ ಮುನ್ನವೇ ಮಠದಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಸುತ್ತೂರು ಮಠದ ಪರಮಪೂಜ್ಯರು, ಮರಳೇಗವಿ ಮಠದ ಡಾ. ಮುಮ್ಮಡಿ ಶಿವರುದ್ರ ಸ್ವಾಮೀಜಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಹರಗುರು ಚರಮೂರ್ತಿಗಳು ಶ್ರೀಗಳ ಕ್ರಿಯಾಸಮಾಧಿಗೆ ನಮಿಸಿ ದರ್ಶನ ಪಡೆದರು. 20 ಸಾವಿರಕ್ಕೂ ಹೆಚ್ಚು ಜನ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ವೇದಿಕೆ ಖುರ್ಚಿಗಳು ಭರ್ತಿ: ಕಾರ್ಯಕ್ರಮಕ್ಕೆ 5 ಸಾವಿರ ಆಸನ ವ್ಯವಸ್ಥೆ ಮಾಡಲಾಗಿತ್ತು. ಅಧಿಕ ಸಂಖ್ಯೆಯಲ್ಲಿ ಜನರು ಬಂದ ಕಾರಣ ಖುರ್ಚಿಗಳು ಭರ್ತಿಯಾದವು. ಜನ ನಿಂತಿರುವುದನ್ನು ನೋಡಿದ ಚನ್ನಬಸವ ಶ್ರೀಗಳು ಮತ್ತೆ ಖುರ್ಚಿ ವ್ಯವಸ್ಥೆ ಮಾಡಿಸಿದರು. ಆದರೂ ಮತ್ತೆ ಜನ ಬರುತ್ತಲೇ ಇದ್ದರು. ಯಾವುದೇ ಸದ್ದು ಗದ್ದಲವಿಲ್ಲದೆ ಜನರು ಶಾಂತರೀತಿಯಲ್ಲೇ ನಿಂತು ಕಾರ್ಯಕ್ರಮ ವೀಕ್ಷಿಸಿದರು.
ಎಲ್‌ಇಡಿ ವ್ಯವಸ್ಥೆ: ವೇದಿಕೆ ಕಾರ್ಯಕ್ರಮವನ್ನು ಜನರು ನೋಡಲು ಅನುಕೂಲವಾಗುವಂತೆ ಸೂಕ್ತ ರೀತಿಯಲ್ಲಿ ದೊಡ್ಡ ದೊಡ್ಡ ಎಲ್‌ಇಡಿ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ನೂರಾರು ಸಂಖ್ಯೆಯಲ್ಲಿ ನಾಡಿನ ಹಲವು ಮಠಗಳ ಶ್ರೀಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವಾಮೀಜಿಗಳಿಗೆ ಮತ್ತು ಇತರ ಗಣ್ಯರಿಗೆ ಪ್ರತ್ಯೇಕವಾಗಿ ವೇದಿಕೆ ಮುಂಭಾಗ ವಿಶೇಷ ಆಸನ ವ್ಯವಸ್ಥೆ ಮಾಡಲಾಗಿತ್ತು.
ಗಣ್ಯರ ನುಡಿನಮನ: ಮರಳೇ ಗವಿಮಠದ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ, ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿಬಸವ ವೃಷಬೇಂದ್ರ ಸ್ವಾಮೀಜಿ, ಮಾಜಿ ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಎಂ.ಎಲ್.ಸಿ. ಎಸ್. ರವಿ, ಎಚ್.ಕೆ. ಶ್ರೀಕಂಠು, ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ. ರುದ್ರೇಶ್, ಮಾಜಿ ಪೌರಾಯುಕ್ತೆ ಗಂಗಾಂಬಿಕೆ ಮಲ್ಲಿಕಾರ್ಜುನ್, ಮಾಜಿ ಮೇಯರ್ ಪದ್ಮಾವತಿ, ವೀಣಾ ಕಾಶಪ್ಪನವರ್, ಎಂ.ಎಲ್.ಸಿ. ರವಿ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಎಸ್ಪಿ ಶ್ರೀನಿವಾಸಗೌಡ, ಎಂ.ಬಿ. ವಿಜಯದೇವ್, ಶಾಸಕರಾದ ಜ್ಯೋತಿಗಣೇಶ್, ಶಿವಗಂಗ, ಮಾಜಿ ಶಾಸಕ ಅನ್ನದಾನಿ ಇದ್ದರು.
ಅನ್ನದಾಸೋಹ
ದೇಗುಲ ಮಠದಲ್ಲಿ ತ್ರಿವಿಧ ದಾಸೋಹಿ ಡಾ. ಮುಮ್ಮಡಿ ನಿರ್ವಾಣ ಸ್ವಾಮೀಜಿ ಪುಣ್ಯಸ್ಮರಣೆಯನ್ನು ಭಕ್ತಿಯಿಂದ ಆಚರಿಸಲಾಯಿತು. ಸಹಸ್ರಾರು ಮಂದಿಗೆ ಬೆಳಗಿನ ಊಟ ಉಪಹಾರ, ಮಧ್ಯಾಹ್ನ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.