ವಿಧಾನಸೌಧ 
ರಾಜ್ಯ

ಮೂರು ವರ್ಷ ಪೂರೈಸಿದವರು ನಿಗಮ, ಮಂಡಳಿಗಳಿಂದ ಔಟ್

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ನಿಗಮ-ಮಂಡಳಿಗಳ ಅಧ್ಯಕ್ಷರ ಬದಲಾವಣೆಯೂ ಸನ್ನೀಹಿತವಾಗಿದ್ದು, ಹಾಲಿ ಅಧ್ಯಕ್ಷರು ಮತ್ತು ಸದಸ್ಯರಿಗೆ ರಾಜೀನಾಮೆಗೆ ಸೂಚನೆ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
2023ರಲ್ಲಿ ಸರ್ಕಾರ ರಚನೆಯಾದ ವೇಳೆ ವಿಧಾನಸಭಾ ಟಿಕೆಟ್ ವಂಚಿತರು, ಸಚಿವ ಸ್ಥಾನ ಕೈತಪ್ಪಿದ ಶಾಸಕರಿಗೆ, ಚುನಾವಣೆಗೆ ದುಡಿದ ಮುಖಂಡರು, ಕಾರ್ಯಕರ್ತರನ್ನು ನಿಗಮ- ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಎರಡೂವರೆ ವರ್ಷಕ್ಕೆ ಬದಲಾವಣೆ ಮಾಡುವ ಷರತ್ತು ಸಹ ವಿಧಿಸಿತ್ತು. 73ರಲ್ಲಿ ಪ್ರಮುಖ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ 35 ಶಾಸಕರನ್ನು ನೇಮಕ ಮಾಡಲಾಗಿತ್ತು. ಕೆಲ ತಿಂಗಳ ಹಿಂದೆ 35 ನಿಗಮ-ಮಂಡಳಿಗಳಿಗೂ ನೇಮಕ ಪ್ರಕ್ರಿಯೆ ಮುಗಿಸಲಾಗಿತ್ತು.
ಅಧಿಕಾರ ಹಸ್ತಾಂತರ ಮತ್ತು ಸಚಿವ ಸಂಪುಟ ಪುನಾರಚನೆ ಗೊಂದಲ ಹಿನ್ನೆಲೆಯಲ್ಲಿ 3 ವರ್ಷ ಕಳದರೂ ಅಧ್ಯಕ್ಷರನ್ನು ಮುಂದುವರಿಸಲಾಗಿತ್ತು. ಇದೀಗ ಅಧಿಕಾರ ಹಸ್ತಾಂತರ ಮತ್ತು ಹೊಸ ಸಂಪುಟ ರಚನೆ ಆಗಿರುವ ಹಿನ್ನೆಲೆಯಲ್ಲಿ ಸ್ಥಾನ ತೆರವುಗೊಳಿಸಲು ಸೂಚಿಸಲಾಗಿದೆ.
ಸಚಿವ ಸ್ಥಾನ ವಂಚಿತರು ಮತ್ತು ಪಕ್ಷದ ಸಂಘಟನೆಗೆ ದುಡಿದವರಿಗೆ ಒಳ್ಳೆಯ ನಿಗಮ-ಮಂಡಳಿ ಸ್ಥಾನಗಳನ್ನು ಕೊಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಕೆಲ ಶಾಸಕರನ್ನು ಮುಂದುವರಿಸುವ ಮಾತುಗಳು ಕೇಳಿಬಂದಿದೆ.

ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೇಮಕದಲ್ಲಿಯೂ ಕಾಂಗ್ರೆಸ್ 2028ರ ವಿಧಾನಸಭಾ ಚುನಾವಣೆ ಮುಂದಿಟ್ಟುಕೊಂಡು ಲೆಕ್ಕಚಾರ ನಡೆಸುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಸಿಗದೆ ಇದ್ದವರನ್ನು ಮತ್ತು ಸಚಿವ ಸ್ಥಾನ ಸಿಗದೆ ಇದ್ದವರನ್ನು ಸಕ್ರಿಯವಾಗಿ ಇಟ್ಟುಕೊಳ್ಳಲು ಅಧ್ಯಕ್ಷ ಸ್ಥಾನದ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಉಳಿದ ಎರಡೂ ವರ್ಷದಲ್ಲಿ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರು, ಮುಖಂಡರನ್ನು ಜನ ಸಂಪರ್ಕದಲ್ಲಿ ಇರುವಂತೆ ಮಾಡುವುದೇ ಟಾರ್ಗೆಟ್ ಆಗಿದೆ.

ಸದ್ಯ ಅಧ್ಯಕ್ಷರಾಗಿರುವ ಶಾಸಕರು

ಸೋಪ್ಸ್ ಮತ್ತು ಡಿಟರ್ಜೆಂಟ್ ನಿಗಮ- ಅಪ್ಪಾಜಿ ಸಿ.ಎಸ್. ನಾಡಗೌಡ
ವಾಯುವ್ಯ ಸಾರಿಗೆ ನಿಗಮ- ಭರಮಗೌಡ ಅಲಗೌಡ ಕಾಗೆ
ರಾಜ್ಯ ರಸ್ತೆ ಅಭಿವೃದ್ಧಿ ನಿಗಮ- ಎಸ್.ಆರ್. ಶ್ರೀನಿವಾಸ(ವಾಸು)
ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ- ಬಸವರಾಜ್ ನೀಲಪ್ಪ ಶಿವಣ್ಣನವರ್
ಆಹಾರ ಮತ್ತು ನಾಗರಿಕ ಸರಬರಾಜು ನಿಗಮ- ಬಿ.ಜಿ. ಗೋವಿಂದಪ್ಪ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ- ಎನ್.ಎ. ಹ್ಯಾರಿಸ್
ಹಟ್ಟಿ ಚಿನ್ನದ ಗಣಿ ನಿಗಮ- ಜಿ.ಟಿ. ಪಾಟೀಲ್
ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ- ಬಿ.ಕೆ. ಸಂಗಮೇಶ್ವರ್
ಕೊಳಚೆ ಅಭಿವೃದ್ಧಿ ಮಂಡಳಿ- ಅಬ್ಬಯ್ಯ ಪ್ರಸಾದ್
ರಾಜ್ಯ ಅರಣ್ಯ ಕೈಗಾರಿಕಾ ನಿಗಮ- ಬಿ.ಕೆ. ಗೋಪಾಲಕೃಷ್ಣ ಬೇಳೂರು
ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ- ಎಸ್.ಎನ್. ನಾರಾಯಣಸ್ವಾಮಿ,
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ- ಎ.ಬಿ. ರಮೇಶ್ ಬಂಡಿ ಸಿದ್ದೇಗೌಡ
ಜಂಗಲ್ ಲಾಡ್ಜ್- ಅನಿಲ್ ಚಿಕ್ಕಮಾದು
ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ- ಬಸವನಗೌಡ ದದ್ದಲ್
ರೇಷ್ಮೆ ಉದ್ದಿಮೆಗಳ ನಿಗಮ- ಕನೀಜ್ ಾತಿಮಾ
ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ- ಟಿ.ಡಿ. ರಾಜೇಗೌಡ
ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ- ಎಂ. ರೂಪಕಲಾ
ಮಾರ್ಕೇಟಿಂಗ್ ಕನ್ಸಲೈಂಟ್ ಆ್ಯಂಡ್ ಏಜೆನ್ಸಿಸ್- ಸತೀಶ್ ಕೃಷ್ಣ ಸೈಲ್
ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ- ಶರತ್‌ಕುಮಾರ್ ಬಚ್ಚೇಗೌಡ
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ- ಬಸವನಗೌಡ ತುರುವಿಹಾಳ

ಸಚಿವರಾದ ಶಾಸಕರು

ಪ್ರಮುಖ ನಿಗಮ-ಮಂಡಳಿ ಅಧ್ಯಕ್ಷರಾಗಿದ್ದ ಐವರು ಶಾಸಕರು ಸಚಿವ ಸ್ಥಾನ ಅಲಂಕರಿಸಿರುವ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ಬಿಟ್ಟುಕೊಡಲಿದ್ದಾರೆ. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಸಿ. ಬಾಲಕೃಷ್ಣ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಟಿ. ರಘುಮೂರ್ತಿ, ಕರ್ನಾಟಕ ಗೃಹ ಮಂಡಳಿಯ ಕೆ.ಎಂ. ಶಿವಲಿಂಗೇಗೌಡ ಮತ್ತು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್‌ನ ಸಿ. ಪುಟ್ಟರಂಗಶೆಟ್ಟಿ ಸಚಿವರಾಗಿದ್ದಾರೆ. ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಜಿ.ಎಸ್. ಪಾಟೀಲ್, ವಿಧಾನಸಭೆ ಸ್ಪೀಕರ್ ಸ್ಥಾನ ಸಿಕ್ಕಿದ್ದು, ಅವರ ಸ್ಥಾನವೂ ತೆರವಾಗಲಿದೆ.