D.K. Shivakumar | ಡಿಸಿಎಂ ಡಿ.ಕೆ.ಶಿವಕುಮಾರ್ ( ಕೃಪೆ-ಸಾಮಾಜಿಕ ಜಾಲತಾಣ)
- ಜೆಡಿಎಸ್ನವರ ಯೋಗ್ಯತೆಗೆ ಒಂದು ಕೆಲಸ ಮಾಡಲು ಆಗಿಲ್ಲ
- ಬಿಜೆಪಿ ಸಂಸದರನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ನಡೆಸಿ, ಅಗತ್ಯ ಅನುದಾನ ತೆಗೆದುಕೊಂಡು ಬರಲಿ
- ಬ್ಲೂ ಪೋರ್ಸ್ ಹಾಗೂ ರೋಬೋಟಿಕ್ ತಂತ್ರಜ್ಞಾನ ಬಳಕೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ
ಬೆಂಗಳೂರು: ಜೆಡಿಎಸ್ನವರ ಯೋಗ್ಯತೆಗೆ ಒಂದು ಕೆಲಸ ಮಾಡಲು ಆಗಿಲ್ಲ, ತುಂಗಭದ್ರಾ ಅಣೆಕಟ್ಟಿನ ಗೇಟ್ ಕಿತ್ತು ಹೋದಾಗ ನಮ್ಮ ಸರ್ಕಾರ ಒಂದೇ ವಾರದಲ್ಲಿ ಗೇಟ್ ದುರಸ್ತಿ ಮಾಡಲಾಗಿದೆ. ಈಗ ಆ ಪಕ್ಷದ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹರಿಹಾಯ್ದಿದ್ದಾರೆ.
ಬ್ಲೂ ಪೋರ್ಸ್ ಹಾಗೂ ರೋಬೋಟಿಕ್ ತಂತ್ರಜ್ಞಾನ ಬಳಕೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ಎರಡನೇ ಬೆಳೆಗೆ ತುಂಗಭದ್ರಾ ನೀರು ಹರಿಸುವ ವಿಚಾರವಾಗಿ ರೈತರ ಜೊತೆ ಸೇರಿ ಜೆಡಿಎಸ್ ಹೋರಾಟದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಭಟನೆ ಮಾಡಿದಾಗಲೇ ನಾವು ಏನು ಕೆಲಸ ಮಾಡಿದ್ದೇವೆ ಎಂಬುದು ಜನರಿಗೆ ತಿಳಿಯಲಿದೆ. ಈಗ ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ನಾನು ಒಂದಷ್ಟು ಯೋಜನೆಗಳ ಬಗ್ಗೆ ಅರ್ಜಿ ಹಾಕಿದ್ದು ಅವುಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಪಡೆಯಲಿ. ಬಿಜೆಪಿ ಸಂಸದರನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ನಡೆಸಿ, ಅಗತ್ಯ ಅನುದಾನ ತೆಗೆದುಕೊಂಡು ಬರಲಿ. ನಮ್ಮ ಪಾಲಿನ 28-30 ಟಿಎಂಸಿ ತುಂಗಭದ್ರಾ ನೀರು ಆಂದ್ರಕ್ಕೆ ಸೇರುತ್ತಿದೆ. ಚಂದ್ರಬಾಬು ನಾಯ್ಡು ಅವರು ಇದರ ಸಭೆಗೆ ಬರುತ್ತಿಲ್ಲ. ಮೊದಲು ಅವರಿಂದ ಒಪ್ಪಿಗೆ ಕೊಡಿಸಲಿ ಎಂದರು.
ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋದರೆ ಭೇಟಿಯಾಗಬಹುದು ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ, ಹೆಚ್ಡಿಕೆ ಅವರೇ ಇದಕ್ಕೆ ಸಮಯ ನಿಗದಿ ಮಾಡಲಿ ನಾನು ಹೋಗಲು ತಯಾರಿದ್ದೇನೆ" ಎಂದರು.
ಅಕ್ರಮ ನಡೆದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ
ಕಸ ಗುಡಿಸುವ ಯಂತ್ರ ಬಾಡಿಗೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆಶಿ, ಈ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಶೋಭಾ ಕರಂದ್ಲಾಜೆ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಲೋಕಾಯುಕ್ತ ಅಥವಾ ಸೂಕ್ತ ತನಿಖಾ ಸಂಸ್ಥೆಗೆ ದೂರು ನೀಡಲಿ. ನಾನು ಕೇಂದ್ರ ಶೋಭಾ ಕರಂದ್ಲಾಜೆ ಅವರಿಗೆ ಉತ್ತರಿಸುತ್ತೇನೆಯೇ ಹೊರತು ನಿಖಿಲ್ಗಲ್ಲ. ಕಸ ಗುಡಿಸುವ ಯಂತ್ರಗಳ ಬಗ್ಗೆ ಅಧ್ಯಯನ ನಡೆಸಿಯೇ ಮುಂದುವರೆಯಲಾಗುವುದು.
ಇದು ಕೇವಲ ಒಂದು ವರ್ಷದ ಯೋಜನೆಯಲ್ಲ. ಏಳು ವರ್ಷಗಳ ಯೋಜನೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ನಾವು ತನಿಖೆ ನಡೆಸಲು ಸಿದ್ಧರಿದ್ದೇವೆ. ಶೋಭಾ ಕರಂದ್ಲಾಜೆ ಅವರ ಟೀಕೆಗಳನ್ನು ನಾನು ಸ್ವಾಗತ ಮಾಡುತ್ತೇನೆ. ಅವರ ಪ್ರಶ್ನೆಗಳಿಗೆ ಉತ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಈ ವಿಚಾರದಲ್ಲಿ ನಾವು ಪಾರದರ್ಶಕವಾಗಿದ್ದೇವೆ. ಈ ಮೊತ್ತ ದೊಡ್ಡದಾಗಿ ಕಾಣುತ್ತಿರಬಹುದು. ಇದು ಕೇವಲ ವಾಹನದ ವಿಚಾರವೊಂದೇ ಇಲ್ಲ. ಚಾಲಕ, ಸಹಾಯಕ, ಸ್ವಚ್ಛ ಮಾಡುವವರು ಸೇರಿದಂತೆ ಅನೇಕ ವಿಚಾರಗಳಿವೆ. ಎಲ್ಲಾ ಆಯಾಮಗಳಿಂದ ಆಲೋಚಿಸಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.