ಪ್ರಿಕೆಜಿಗೂ ಎಸ್ಸೆಸ್ಸೆಲ್ಸಿಯಷ್ಟೇ ಮಹತ್ವ
- ಒಟ್ಟು 4,056 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಜಾರಿಯಾಗಲಿದೆ. ಅವಶ್ಯವಿದ್ದಲ್ಲಿ ಮತ್ತಸ್ಟು ಶಾಲೆಗಳಿಗೂ ವಿಸ್ತರಿಸಲಿದೆ.
- ಎಸ್‌ಎಸ್‌ಎಲ್‌ಸಿಯಲ್ಲಿ ಮಾತ್ರ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ. ಈ ಕಾರಣದಿಂದ ಕಲಿಕೆಯನ್ನು ಬಾಲ್ಯಾವಸ್ಥೆಯಿಂದಲೇ ಕಲಿಸಲು ಸರ್ಕಾರ ಮುಂದಾಗಿದೆ.
- ಪರೀಕ್ಷಾ ದೃಷ್ಟಿಯಿಂದ ಮಾತ್ರ ಮಕ್ಕಳ ಕಲಿಕೆಯನ್ನು ಪರಿಶೀಲಿಸುವುದಲ್ಲ. ಕಲಿಕಾ ದೃಷ್ಟಿಯಿಂದ ಮಕ್ಕಳ ಶೈಕ್ಷಣಿಕ ರಿಪೋರ್ಟ್ ಏನಿದೆ ಎಂಬುದನ್ನು ತಿಳಿಯುವ ಹೊಸ ಪ್ರಯತ್ನ ಮಾಡುತ್ತಿದೆ.
ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ಕಲಿಸುವುದನ್ನೇ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಲ್ಲಿ ಹೇಳಿಕೊಡುತ್ತಾರೆ. ಸರ್ಕಾರಿ ಶಾಲೆ ಮಕ್ಕಳು ಎರಡು ವರ್ಷ ಹಿಂದುಳಿಯಲಿದ್ದಾರೆ ಎಂಬ ಖಾಸಗಿ ಶಾಲೆಗಳ ಅಪವಾದಕ್ಕೆ ಸೆಡ್ಡು ಹೊಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಬಾಲ್ಯಾವಸ್ಥೆಯಿಂದಲೇ ಗುಣಾತ್ಮಕ ಶಿಕ್ಷಣ ನೀಡಲು ಶಾಲಾ ಶಿಕ್ಷಣ ಇಲಾಖೆಯು ಸಿದ್ಧತೆ ಆರಂಭಿಸಿದೆ.
ದೇಶಾದ್ಯಂತ ಪ್ರೌಢ ಶಾಲೆಗಳಲ್ಲಿಯೂ ಮಕ್ಕಳು ಗಣಿತ, ಕಾಗುಣಿತ ಓದುವಲ್ಲಿ ಹಿಂದುಳಿಯುತ್ತಿರುವುದು ಸಂಶೋಧನೆಗಳಿಂದ ತಿಳದುಬಂದಿರುವ ಪರಿಣಾಮ, ಶಾಲಾ ಶಿಕ್ಷಣ ಇಲಾಖೆಯು ಪೂರ್ವ ಪ್ರಾಥಮಿಕ ಹಂತದಲ್ಲಿಯೇ ಸಂಖ್ಯಾಶಾಸಕ್ಕೆ ಒತ್ತು ನೀಡಿ ಚಟುವಟಿಕಾ ಪುಸ್ತಕಗಳನ್ನು ಸಿದ್ಧಪಡಿಸಿದೆ.
ಪ್ರಿಕೆಜಿಗೂ ಪಠ್ಯಪುಸ್ತಕಗಳು:
ಆರಂಭಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣ (ಇಸಿಸಿಇ) ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ, ಶಿಕ್ಷಕರ ಕೈಪಿಡಿ ಮತ್ತು ಶಿಕ್ಷಕರ ತರಬೇತಿ ಪುಸ್ತಕಗಳನ್ನು ಪ್ರಕಟಿಸಿದೆ. ಕಳೆದ ವರ್ಷವೇ ಸರ್ಕಾರಿ ಪೂರ್ವ ಪ್ರಾಥಮಿಕ ತರಗತಿ (ಎಲ್‌ಕೆಪ, ಯುಕೆಜಿ) ವಿದ್ಯಾರ್ಥಿಗಳಿಗೆ ಕಲಿಕಾ ಗುಣಮಟ್ಟವನ್ನು ಉತ್ತಮಪಡಿಸಲು ಭಾಷೆ-1- ಕನ್ನಡ, ಭಾಷೆ-2-ಇಂಗ್ಲಿಷ್ ಮತ್ತು ದ್ವಿ ಭಾಷೆಯಲ್ಲಿ ಗಣಿತ ಹಾಗೂ ಪರಿಸರ ಅಧ್ಯಯನ ಅಭ್ಯಾಸ ಪುಸ್ತಕರು, ಶಿಕ್ಷಕರ ಕೈಪಿಡಿ ಮತ್ತು ತರಬೇತಿ ಸಾಹಿತ್ಯಗಳನ್ನು ರಾಜ್ಯದ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಡಿಎಸ್‌ಇಆರ್‌ಟಿ) ಸಿದ್ಧಪಡಿಸಿತ್ತು. ಈ ವರ್ಷ ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದೆ.
ಅಭ್ಯಾಸ ಪುಸ್ತಕಗಳು ಹೇಗೆ ಅನುಕೂಲ:
ಪೂರ್ವ ಪ್ರಾಥಮಿಕ ಹಂತವು ಪ್ರಮುಖ ಘಟ್ಟವಾಗಿದೆ. ಈ ಹಂತದಲ್ಲಿ ಮಕ್ಕಳು ವಿಷಯವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಭಾಷೆಯನ್ನು ಸರಿಯಾಗಿ ಬಳಸುವ ಮೂಲಕ ಸಂವಹನ ಮತ್ತು ಕಲಿಕೆಯನ್ನು ಸುಧಾರಿಸಲು ಸದೃಢ ಅಡಿಪಾಯದ ಅವಶ್ಯಕತೆಯನ್ನು ಮನಗಂಡು ಚಿತ್ರಸಹಿತ ಚಟುವಟಿಕೆ ಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಂವಹನ ಮತ್ತು ಅಭಿವ್ಯಕ್ತಿ ಕೌಶಲವನ್ನು ಉತ್ತಮಪಡಿಸಲು ಅನುಕೂಲವಾಗಲಿದೆ.
4ರಿಂದ 6 ವಯಸ್ಸಿನ ಮಕ್ಕಳ ಕಲಿಕೆಗಾಗಿ ವಿನ್ಯಾಸಗೊಳಿಸಲಾಗಿದ್ದು, ಇವುಗಳಲ್ಲಿ ಅಕ್ಷರ ಮತ್ತು ಪದಗಳನ್ನು ಗುರುತಿಸುವಿಕೆ, ಉಚ್ಚಾರಣೆ ಮತ್ತು ಬರವಣಿಗೆ, ಮೂಲಭೂತ ಸಂಖ್ಯಾಜ್ಞಾನ ಮತ್ತು ಸುತ್ತಲಿನ ಪರಿಸರ ಅರಿವನ್ನು ಮೂಡಿಸಲು ಅರ್ಥಪೂಃರ್ಣ ಹಾಗೂ ಸರಳ ಚಟುವಟಿಕೆಗಳನ್ನು ಅಳವಡಿಸಲಾಗಿದೆ.
ಪುಸ್ತಕಗಳಲ್ಲಿ ಏನೆಲ್ಲ ಅಂಶಗಳಿವೆ?
ಚಟುವಟಿಕೆ ಪುಸ್ತಕಗಳಲ್ಲಿ ಕತೆ, ಹಾಡು, ಪ್ರಾಸಗೀತೆಗಳು, ಸುತ್ತಲಿನ ಸಸ್ಯ ಮತ್ತು ಪ್ರಾಣಿಗಳನ್ನು ಗುರುತಿಸುವುದು, ಕಲೆ ಮತ್ತು ಕರಕುಶಲ ಚಟುವಟಿಕೆಗಳು, ಚಿತ್ರ ಬರೆಯುವುದು, ಬಣ್ಣ ತುಂಬುವುದು, ಪದಗಳನ್ನು ಸ್ಪಷ್ಟವಾಗಿ ಉತ್ತರಿಸುವುದು ಹಾಗೂ ಬರೆಯುವುದು ಒಳಗೊಂಡಂತೆ ಸೃಜನಶೀಲ ಆಟ ಅಥವಾ ರಚನಾತ್ಮಕ ಕಲಿಕಾ ಚಟುವಟಿಕೆಗಳನ್ನು ಅಳವಡಿಸಲಾಗಿದೆ. ಈ ಮೂಲಕ ಕ್ರಿಯಾಶೀಲತೆಯನ್ನು ಕಲಿಕೆಯೊಂದಿಗೆ ಸಮನ್ವಯಗೊಳಿಸುವ ಪ್ರಯತ್ನ ಇದಾಗಿದೆ.
4,056 ಶಾಲೆಗಳಲ್ಲಿ ಎಲ್‌ಕೆಜಿ:
ರಾಜ್ಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 1,105 ಶಾಲೆಗಳು, 126 ಪಿಎಂಶ್ರೀ ಶಾಲೆಗಳು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಯೋಜನೆಯಡಿ 1,105 ಶಾಲೆಗಳು ಮತ್ತು 1,699 ಮ್ಯಾಗ್ನೆಟ್ ಶಾಲೆಗಳು ಹೀಗೆ ಒಟ್ಟು 4,056 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಜಾರಿಯಾಗಲಿದೆ. ಅವಶ್ಯವಿದ್ದಲ್ಲಿ ಮತ್ತಸ್ಟು ಶಾಲೆಗಳಿಗೂ ವಿಸ್ತರಿಸಲಿದೆ.
ಪ್ರಿಕೆಜಿ ಕಲಿಕೆ ಚೆನ್ನಾಗಿದ್ರೆ, ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶ
ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಮಕ್ಕಳನ್ನು ಅನುತ್ತೀರ್ಣ ಮಾಡುವಂತಿಲ್ಲ ಎಂಬ ಅನುಸರಿಸಲಾಗುತ್ತಿದೆ. ಪರಿಣಾಮ, ಮಕ್ಕಳು ಗಂಭೀರವಾಗಿ ಕಲಿಯುವುದು ಮತ್ತು ಶಿಕ್ಷಕರು ಕೂಡ ಶ್ರಮವಹಿಸಿ ಕಲಿಸುವುದನ್ನು ನಿಧಾನವಾಗಿ ಬಿಡುತ್ತಿದ್ದಾರೆ. ಆದರೆ, ಎಸ್‌ಎಸ್‌ಎಲ್‌ಸಿಯಲ್ಲಿ ಮಾತ್ರ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ. ಈ ಕಾರಣದಿಂದ ಕಲಿಕೆಯನ್ನು ಬಾಲ್ಯಾವಸ್ಥೆಯಿಂದಲೇ ಕಲಿಸಲು ಸರ್ಕಾರ ಮುಂದಾಗಿದೆ.
ಪೂರ್ವ ಪ್ರಾಥಮಿಕ ಮಕ್ಕಳಿಗೂ ರಿಪೋರ್ಟ್ ಕಾರ್ಡ್
ಪರೀಕ್ಷಾ ದೃಷ್ಟಿಯಿಂದ ಮಾತ್ರ ಮಕ್ಕಳ ಕಲಿಕೆಯನ್ನು ಪರಿಶೀಲಿಸುವುದಲ್ಲ. ಕಲಿಕಾ ದೃಷ್ಟಿಯಿಂದ ಮಕ್ಕಳ ಶೈಕ್ಷಣಿಕ ರಿಪೋರ್ಟ್ ಏನಿದೆ ಎಂಬುದನ್ನು ತಿಳಿಯುವ ಹೊಸ ಪ್ರಯತ್ನ ಮಾಡುತ್ತಿದೆ. ಹೀಗಾಗಿ, ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೂ ಮಾಸಿಕ ರಿಪೋರ್ಟ್ ಕಾರ್ಡ್ ಅನ್ನು ಜಾರಿಗೊಳಿಸಲಾಗುತ್ತಿದೆ.
ಮಕ್ಕಳನ್ನು ಆರಂಭಿಕ ಹಂತದಿಂದಲೇ ಉತ್ತಮ ಶಿಕ್ಷಣ ದೊರೆತರೆ ಎಸ್‌ಎಸ್‌ಎಲ್‌ಸಿಯಲ್ಲಿ ಖಂಡಿತವಾಗಿಯೂ ಉತ್ತಮ ಲಿತಾಂಶ ದೊರೆಯಲಿದೆ. ಈ ನಿಟ್ಟಿನಲ್ಲಿ ಪೂರ್ವ ಪ್ರಾಥಮಿಕದಿಂದಲೇ ದ್ವಿಭಾಷಾ ಮಾಧ್ಯಮದಲ್ಲಿ ಖಾಸಗಿಗೆ ಸಮಾನವಾಗಿ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ವಹಿಸಲಾಗಿದೆ.
— - ರಶ್ಮಿ ಮಹೇಶ್, ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ