ಪ್ರಮುಖ ಮುಖ್ಯಾಂಶಗಳು
ಅರ್ಹತೆ ಇಲ್ಲದವರು ಪಡೆದಿರುವ ಬಿಪಿಎಲ್ ಕಾರ್ಡ್ಗಳ ರದ್ದತಿ ಜತೆಗೆ ಎಪಿಎಲ್ ಕಾರ್ಡ್ಗೆ ವರ್ಗಾಯಿಸುವ ಕಾರ್ಯ ರಾಜ್ಯಾದ್ಯಂತ ಚುರುಕು ಪಡೆದಿರುವ ಹೊತ್ತಲ್ಲೇ ಅರ್ಹ ಫಲಾನುಭವಿಗಳ ಪಡಿತರ ಚೀಟಿಗಳೂ ರದ್ದಾಗುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಸಾಲಕ್ಕಾಗಿ ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್) ಪ್ರಮಾಣ ಪತ್ರ ಸಲ್ಲಿಸಿರುವವರನ್ನೂ ಆದಾಯ ತೆರಿಗೆದಾರರೆಂದು ಪರಿಗಣಿಸಿ ಬಿಪಿಎಲ್ ಕಾರ್ಡ್ ರದ್ದುಪಡಿಸುತ್ತಿರುವ ಪರಿಣಾಮ ಸಾವಿರಾರು ಕುಟುಂಬಗಳು ಚಿಂತೆಗೀಡಾಗಿವೆ.
ಗೃಹ, ದನದ ಕೊಟ್ಟಿಗೆ ಮತ್ತು ಸಣ್ಣ ಉದ್ದಿಮೆ ಆರಂಭ ಸೇರಿ ಜೀವನೋಪಾಯಕ್ಕಾಗಿ ಹಲವರು ರಾಷ್ಟ್ರೀಯ ಅಥವಾ ಸಹಕಾರಿ ಬ್ಯಾಂಕ್ಗಳಲ್ಲಿ ಸಣ್ಣ ಪ್ರಮಾಣದ ಸಾಲ ಪಡೆದಿದ್ದಾರೆ. ಇದಕ್ಕಾಗಿ ಅವರು ಸಲ್ಲಿಸುವ ಟಿಡಿಎಸ್ ಪ್ರಮಾಣ ಪತ್ರಗಳ ಆಧಾರದ ಮೇಲೆ ಇವರನ್ನೂ ಆದಾಯ ತೆರಿಗೆದಾರರು ಎಂದು ಪರಿಗಣಿಸಿ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಅಥವಾ ಎಪಿಎಲ್ ಕಾರ್ಡ್ಗೆ ವರ್ಗಾಯಿಸಲಾಗುತ್ತಿದೆ. ಇದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಬ್ಯಾಂಕ್ಗಳಲ್ಲಿ 50 ಸಾವಿರದಿಂದ ಲಕ್ಷ ರೂ.ವರೆಗೆ ಸಾಲ ಪಡೆಯುವಾಗ ಆದಾಯ ತೆರಿಗೆ (ಶೂನ್ಯ ಮೊತ್ತ) ಪಾವತಿಸಿದ ದಾಖಲೆ ಅಥವಾ ಫಾರಂ 16/16ಎ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಫಾರಂ16 ಎನ್ನುವುದು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಕಂಪನಿಗಳು, ಉದ್ಯೋಗಿಗಳಿಗೆ ನೀಡುವ ಅಧಿಕೃತ ಟಿಡಿಎಸ್ ಪ್ರಮಾಣ ಪತ್ರವಾಗಿದೆ. ಸಾಲ ಪಡೆಯುವಾಗ ಟಿಡಿಎಸ್ ಪ್ರಮಾಣಪತ್ರ, ಪ್ಯಾನ್, ಆಧಾರ್ ಸೇರಿ ಇತರ ದಾಖಲೆ ನೀಡಲಾಗುತ್ತದೆ. ಈ ನಿಯಮವೀಗ ಬಡವರಿಗೆ ಶಾಪವಾಗಿದೆ.
ಖಾಸಗಿ ಕಂಪನಿಗಳಲ್ಲಿ 20ರಿಂದ 25 ಸಾವಿರ ರೂ. ವೇತನ ಪಡೆಯುವವರಿಗೆ ಪ್ರತಿ ತಿಂಗಳು ಶೇ.10 ಟಿಡಿಎಸ್ ಕಡಿತವಾಗುತ್ತದೆ. ಅದನ್ನು ವರ್ಷದ ಕೊನೆಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ವಾಪಸ್ ಪಡೆಯಲಾಗುತ್ತದೆ. ಆಧಾರ್ ಸಂಖ್ಯೆ ನಮೂದಿಸಿದರೆ ಕುಟುಂಬದವರು ಪಡೆಯುತ್ತಿರುವ ಸರ್ಕಾರಿ ಸೌಲಭ್ಯ ಮತ್ತು ಪ್ಯಾನ್ ಸಂಖ್ಯೆ ನಮೂದಿಸಿದರೆ ಖಾತೆಯ ಹಣದ ವಹಿವಾಟು, ಟಿಡಿಎಸ್ ಕಡಿತ ಸೇರಿ ಒಟ್ಟು ಸಂಬಳದ ಮಾಹಿತಿ ದೊರೆಯಲಿದೆ. ಇದೇ ಪ್ರಕ್ರಿಯೆಯಲ್ಲಿ ಟಿಡಿಎಸ್ ಕಡಿತವಾಗಿರುವ ಮತ್ತು ಸಾಲ ಪಡೆಯುವಾಗ ಫಾರಂ 16 ದಾಖಲೆ ಸಲ್ಲಿಸಿರುವ ಸಾವಿರಾರು ಬಿಪಿಎಲ್ ಕುಟುಂಬಗಳ ಮಾಹಿತಿ ಸಿಕ್ಕಿದ್ದು, ಅವರನ್ನು ಆದಾಯ ತೆರಿಗೆದಾರರು ಎಂದು ಪರಿಗಣಿಸಿರುವ ಆಹಾರ ಇಲಾಖೆ ಅಧಿಕಾರಿಗಳು, ಅಂತಹ ಕುಟುಂಬಗಳಿಗೆ ವಿತರಿಸಲಾಗಿರುವ ಕಾರ್ಡ್ ರದ್ದುಪಡಿಸುತ್ತಿದ್ದಾರೆ.
ಆಹಾರ ಇಲಾಖೆ ಕಳೆದ 3 ವರ್ಷಗಳಿಂದ ಸರ್ಕಾರದ ಮಾನದಂಡ ನೆಪವಾಗಿಸಿ ಲಕ್ಷಾಂತರ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ಗೆ ಪರಿವರ್ತಿಸುತ್ತಿದೆ. ಪ್ರಸ್ತುತ ಶಂಕಾಸ್ಪದ ಪಟ್ಟಿಗೆ ಸೇರಿಸಲಾಗಿದ್ದ 7,76,206 ಬಿಪಿಎಲ್ ಪೈಕಿ 4,32,295 ಬಿಪಿಎಲ್ ಕಾರ್ಡ್ ಎಪಿಎಲ್ಗೆ ಪರಿವರ್ತನೆಗೊಂಡಿದೆ. ಉಳಿದ ಕಾರ್ಡ್ಗಳ ಪರಿಶೀಲನೆ ನಡೆದಿದೆ. ಬಿಪಿಎಲ್ನಿಂದ ಎಪಿಎಲ್ಗೆ ಪರಿವರ್ತನೆಯಾಗಿರುವ ಲಕ್ಷಾಂತರ ಫಲಾನುಭವಿಗಳ ಪೈಕಿ ಶೇ.75 ನೈಜ ಫಲಾನುಭವಿಗಳ ಹೆಸರನ್ನೇ ಡಿಲೀಟ್ ಮಾಡಲಾಗಿದೆ. ನೈಜ ಕಾರ್ಡ್ ರದ್ದಾಗಿದ್ದರೆ ಆಯಾ ತಾಲೂಕಿನ ಸಂಬಂಧಪಟ್ಟ ತಹಸೀಲ್ದಾರ್ಗೆ 45 ದಿನದೊಳಗೆ ಅಗತ್ಯ ದಾಖಲೆ ಜತೆ ಅರ್ಜಿ ಸಲ್ಲಿಸಿದಲ್ಲಿ ಬಿಪಿಎಲ್ ಚೀಟಿ ಮರುಸ್ಥಾಪನೆ ಮಾಡುವುದಾಗಿ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಸಾಕಷ್ಟು ಬಾರಿ ಹೇಳಿದ್ದಾರೆ. ಆದರೆ, ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಕಾರ್ಡ್ ರದ್ದಾಗಿರುವ ಫಲಾನುಭವಿಗಳು,ಈ ಬಗ್ಗೆ ತಹಶೀಲ್ದಾರ್ ಅಥವಾ ಇಲಾಖೆಯ ಉಪ ಆಯುಕ್ತರ ಕಚೇರಿಗಳಲ್ಲಿ ವಿಚಾರಿಸಿದರೆ ಗೊಂದಲದ ಉತ್ತರ ಸಿಗುತ್ತಿದೆ.