ವಿಧಾನಸೌಧ 
ರಾಜ್ಯ

ಇವ ನಮ್ಮವ ಇವ ನಮ್ಮವ ಕಾಯ್ದೆ ಜಾರಿಗೆ

ಬೆಂಗಳೂರು: ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮಾರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕ ಜಾರಿ ಸಂಬಂಧ ಸರ್ಕಾರ ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಮರ್ಯಾದಾ ಹತ್ಯೆ ನಿಷೇಧಿಸುವ ಇವ ನಮ್ಮವ ಇವ ನಮ್ಮವ ಮಸೂದೆ-2026 ಅಧಿಕೃತವಾಗಿ ಜಾರಿಗೆ ಬಂದಿದೆ.
ಜಾತಿ ಆಧಾರಿತ ಅಪರಾಧಗಳ ಮೂಲಕ ಮಾನವ ಹಕ್ಕು ಉಲ್ಲಂಘನೆ ತಡೆಯಲು, ಅಂತರ್ಜಾತಿ ವಿವಾಹಗಳಿಗೆ ಗೌರವ ನೀಡಲು, ವೈಯಕ್ತಿಕ ಆಯ್ಕೆಗಳ ಮೇಲೆ ಜಾತಿ ಆಧಾರಿತ ಬಲವಂತದ ಭೇದ ಭಾವವನ್ನು ತಡೆಯಲು ಮತ್ತು ಅಂತರ್ಜಾತಿ ವಿವಾಹವನ್ನು ನೆರವೇರಿಸಲು ಇವ ನಮ್ಮವ ಇವ ನಮ್ಮವ ವೇದಿಕೆ ಸ್ಥಾಪಿಸಲು ಮಸೂದೆಯಲ್ಲಿ ನಿಯಮ ರೂಪಿಸಲಾಗಿದೆ. ವಿಧಾನಮಂಡಲ ಅಧಿವೇಶನದಲ್ಲಿ ಎರಡೂ ಸದನದಲ್ಲಿ ಸರ್ವಾನುಮತದಿಂದ ಅಂಗೀಕಾರವಾಗಿತ್ತು. ಇದೀಗ ಅಧಿಸೂಚನೆ ಹೊರಡಿಸಲಾಗಿದೆ.
ಹೊಸ ಮಸೂದೆ ಪ್ರಕಾರ, ಪ್ರತಿ ವ್ಯಕ್ತಿಗೆ ತನ್ನ ಆಯ್ಕೆಯ ವ್ಯಕ್ತಿಯ ಜತೆ ವಿವಾಹವಾಗುವ ಸ್ವಾತಂತ್ರ್ಯ ಇರಲಿದೆ. ಕುಟುಂಬ ಸದಸ್ಯರು, ಪೋಷಕರಿಂದ ಯಾವುದೇ ಅಡೆತಡೆ ಇಲ್ಲದೆ ವಿವಾಹವಾಗುವ ಹಕ್ಕು ಹೊಂದಿರಲಿದೆ. ವಯಸ್ಕ ಗಂಡು ಹೆಣ್ಣು ಒಪ್ಪಿ ಮದುವೆಯಾಗುವುದಾದರೆ ಅದಕ್ಕೆ ಯಾವುದೇ ವ್ಯಕ್ತಿಯ, ಪೋಷಕರ, ಕುಟುಂಬ ಸದಸ್ಯರ ಅನುಮತಿ ಬೇಕಾಗಿಲ್ಲ. ಇದಕ್ಕೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧವಾಗಲಿದೆ.
ಜಾತಿ, ಸಂಸ್ಕೃತಿ, ಸಂಪ್ರದಾಯ, ಗೌರವದಂತಹ ಹೆಸರಲ್ಲಿ ಯಾವುದೇ ವ್ಯಕ್ತಿ ದುಷ್ಕೃತ್ಯಗಳನ್ನು ನಡೆಸುವ ಹಾಗಿಲ್ಲ. ಗೌರವ ಹತ್ಯೆಗಳಂತಹ ಅಪರಾಧಗಳು ಈ ಕಾನೂನಿನಲ್ಲಿ ನಿಷೇಧವಾಗಿದೆ. ಈ ಸಂಬಂಧ ವಿವಾಹಿತ ಅಥವಾ ಪ್ರೇಮಿಗಳಿಗೆ ಸಂಬಂಧಿಕರು, ಸ್ನೇಹಿತರ ಕೊಲೆ, ದೈಹಿಕ ಹಲ್ಲೆ ಮಾಡುವುದು ಮರ್ಯಾದಾ ಅಪರಾಧ ಎಂದು ಪರಿಗಣಿಸಲಾಗುವುದು. ಅಂತರ ಜಾತಿ ವಿವಾಹವಾಗುವ ಅಥವಾ ವಿವಾಹಿತರಿಗೆ ಕಿರುಕುಳ, ಬೇರ್ಪಡಿಸಲು ಯತ್ನಿಸುವುದು ಅಪರಾಧ.
ಅಪಹರಣ ಮಾಡುವುದು, ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರ, ಬಲವಂತವಾಗಿ ಜೋಡಿಗಳು, ಅವರ ಕುಟುಂಬಸ್ಥರು, ಸಂಬಂಧಿಕರನ್ನು ಗ್ರಾಮ, ಮನೆ, ಪ್ರದೇಶಗಳಿಂದ ತೆರವು, ಸ್ಥಳಾಂತರ ಅಪರಾಧವಾಗಿರಲಿದೆ. ಜೋಡಿಗಳ ವಿರುದ್ಧ ತಿಥಿ, ಅಂತ್ಯಕ್ರಿಯೆ ಕೃತ್ಯಗಳು, ಮದುವೆಯಾದ ಜೋಡಿಗಳನ್ನು ಅಣ್ಣ, ತಂಗಿ ಎಂದು ಬಲವಂತವಾಗಿ ಘೋಷಿಸುವುದು, ಒತ್ತಡ ಹಾಕುವುದು, ಅವರ ಆಸ್ತಿ ಹಕ್ಕುಗಳಲ್ಲಿ ಮಧ್ಯ ಪ್ರವೇಶ ಮಾಡುವುದು, ಜೋಡಿಯನ್ನು ಮನೆಯಲ್ಲಿ ಬಂಧಿ ಮಾಡುವುದು, ಜೋಡಿಗಳನ್ನು ಕೆಲಸದಿಂದ ತೆಗೆದು ಹಾಕಿಸುವುದು, ದ್ವೇಷ ಹರಡುವುದು ಅಥವಾ ಮಾನಹಾನಿ ಮಾಡುವುದನ್ನು ಅಪರಾಧವಾಗಲಿದೆ.
- ಮರ್ಯಾದೆ ಹತ್ಯೆ ಮಾಡಿದರೆ ಕನಿಷ್ಠ 5 ವರ್ಷ ಶಿಕ್ಷೆ,
- ಗಂಭೀರ ಹಲ್ಲೆ, ಗಾಯ ಮಾಡಿದರೆ ಕನಿಷ್ಠ 3 ವರ್ಷ ಜೈಲು
- 3 ಲಕ್ಷ ರೂ. ದಂಡ, ಸಣ್ಣಪುಟ್ಟ ಹಲ್ಲೆಗೆ 2 ವರ್ಷಗಳ ಕಠಿಣ ಸೆರೆ
- ಮದುವೆ ಆಮಿಷವೊಡ್ಡಿ ಲೈಂಗಿಕ ಸಂಪರ್ಕ ನಡೆಸಿ ಜಾತಿ ಕಾರಣಕ್ಕೆ ಮದುವೆ ನಿರಾಕರಿಸಿದರೆ ಜೀವಾವಧಿ ಶಿಕ್ಷೆ