ನೆಲಮಂಗಲದ ಅರಿಶಿನಕುಂಟೆ ಬಳಿ ತಾಲೂಕು ವಕೀಲರ ಸಮೂಹದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ವೃಷಭಾವತಿ ಹೋರಾಟ ಸಮಿತಿ ಅಧ್ಯಕ್ಷ ಅನ್ನದಾನಯ್ಯ, ಪ್ರಧಾನ ಕಾರ್ಯದರ್ಶಿ ಕನಕರಾಜು, ವಕೀಲರಾದ ಸುರೇಂದ್ರನಾಥ್​, ಮಂಜುನಾಥ್​, ರಾಮೇಗೌಡ ಇದ್ದರು.  
ರಾಜ್ಯ

ವೃಷಭಾವತಿಯಲ್ಲ ಇದು ವಿಷದ ಯೋಜನೆ / NELAMANGAL

ನೆಲಮಂಗಲ : ವೃಷಭಾವತಿ ನೀರಿನ ಯೋಜನೆಯಲ್ಲ, ಅದು ವಿಷದ ಯೋಜನೆಯಾಗಿದೆ ಎಂದು ತಾಲೂಕು ವಕೀಲ ಸಂಘದ ಖಜಾಂಚಿ ಲೋಕೇಶ್​ ಹೇಳಿದರು.
ನಗರದ ಅರಿಶಿಣಕುಂಟೆ ಬಳಿ ತಾಲೂಕು ವಕೀಲರ ಸಮೂಹ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಜನಪರ ಯೋಜನೆ ರೂಪಿಸಬೇಕು. ಆದರೆ, ವೃಷಭಾವತಿ ಜನರ ವಿರೋಧಿ ಯೋಜನೆಯಾಗಿದೆ. ವೃಷಭಾವತಿ ಯೋಜನೆ ಮೂಲಕ ತಾಲೂಕಿನ ಕೆರೆಗಳನ್ನು ತುಂಬಿಸಲಾಗುತ್ತಿದ್ದು, ರೈತರು ವಿರೋಧ ಮಾಡುತ್ತಿದ್ದಾರೆ. ಈ ಯೋಜನೆಯಿಂದ ಅನುಕೂಲಕ್ಕಿಂತ ಅನನುಕೂಲಗಳು ಹೆಚ್ಚಾಗಿವೆ ಎಂದರು.
ಜನರ ಆರೋಗ್ಯ ಹಾಗೂ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಜನರಿಗೆ ಪರಿಶುದ್ಧ ಗಾಳಿ, ಬೆಳಕು, ನೀರು ಬೇಕಿದೆ. ಜನರು ಹಾಗೂ ಪರಿಸರದ ಬಗ್ಗೆ ಕಾಳಜಿ ಇಲ್ಲದೇ ಜನರಿಗೆ ವಿಷ ನೀಡಲು ಮುಂದಾಗಿದ್ದಾರೆ. ಜನಪ್ರತಿನಿಧಿಗಳು ಜನರ ಇಚ್ಛೆಗೆ ವಿರುದ್ಧವಾದ ಕಾರ್ಯ ಮಾಡಬಾರದು. ಜನರಿಗೆ ವೃಷಭಾವತಿ ಯೋಜನೆಯಿಂದಾಗುವ ತೊಂದರೆ ಬಗ್ಗೆ ಅರಿವು ಮೂಡಬೇಕು ಎಂದರು.
ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಮಾತನಾಡಿ, ಬೆಂಗಳೂರು ನಗರದ ಕಾರ್ಖಾನೆ, ಆಸ್ಪತ್ರೆ ತ್ಯಾಜ್ಯ, ರಾಸಾಯನಿಕ ತ್ಯಾಜ್ಯ ನೀರನ್ನು ವೃಷಭಾವತಿ ಯೋಜನೆ ಹೆಸರಿಲ್ಲಿ ಕೆರೆಗೆ ತುಂಬಿಸಲು ಮುಂದಾಗಿರುವುದು ಬೇಸರದ ಸಂಗತಿ. ತಾಲೂಕಿನಲ್ಲಿ ಭೂ ಸ್ವಾಧಿನ ಪಡಿಸಿಕೊಂಡು ಕೃಷಿಭೂಮಿ ಇಲ್ಲದ ಪರಿಸ್ಥಿತಿ ನಿಮಾರ್ಣವಾಗಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂದರೂ ಪರವಾಗಿಲ್ಲ, ಜನರ ಜೀವದೊಂದಿಗೆ ಆಟವಾಡುವುದು ಸರಿಯಲ್ಲ. ವೃಷಭಾವರಿ ನೀರಿನ ಬದಲು ಕ್ಷೇತ್ರಕ್ಕೆ ಹೇಮಾವತಿ ಹಾಗೂ ಎತ್ತಿನಹೊಳೆ ಯೋಜನೆ ಜಾರಿಗೊಳಿಸಬೇಕು ಎಂದು ಹೇಳಿದರು.
ವಕೀಲರಾದ ಅನಂದ್​, ವೆಂಕರಮಣಯ್ಯ, ವಸಂತ್​ಕುಮಾರ್​, ಗಣೇಶ್​, ಎಂ.ಆರ್​.ನವೀನ್​ಕುಮಾರ್​, ನಟರಾಜು, ನಾಗರಾಜು, ಬೈಲೇಗೌಡ, ಶ್ರೀನಿವಾಸ್​, ಶಂಕರ್​, ಕೆಂಪೇಗೌಡ್ರು, ಶ್ರೀನಿವಾಸಮೂರ್ತಿ, ಡಿ.ಎನ್​.ಮಹೇಶ್​, ದೇವರಾಜು, ನರೇಂದ್ರ ಮಹೇಶ್​ ಇದ್ದರು.
ಕಾನೂನು ಸಹಕಾರ : ಸಮಾಜದಲ್ಲಿ ಪ್ರಶ್ನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಸಂವಿಧಾನದಡಿ ಅನ್ಯಾಯ ಖಂಡಿಸಿ ಪ್ರತಿಭಟನೆ ಮಾಡುವ ಅವಕಾಶವಿದೆ. ಆದರೆ ಇತ್ತೀಚೆಗೆ ವೃಷಭಾವತಿ ಹೋರಾಟ ವಿಚಾರವಾಗಿ ಪೊಲೀಸರನ್ನು ಬಳಸಿ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಕೀಲರ ತಂಡದಿಂದ ಸಮಿತಿ ರಚಿಸಿ ಪ್ರತಿಭಟನಾಕಾರರಿಗೆ ಕಾನೂನಿನ ಅರಿವು ಹಾಗೂ ಸಹಕಾರ ನೀಡುವುದಾಗಿ ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ತಿಳಿಸಿದರು.