ಡೆನ್ಮಾರ್ಕ್ ಮೂಲದ ಒಬ್ಬ ಅಜ್ಞಾತ ವ್ಯಕ್ತಿ ಅಲ್ಲಿನ ‘ಯುರೋಪಿಯನ್ ವೀರ್ಯ ಬ್ಯಾಂಕ್’ನ ನೋಂದಾಯಿತ ವೀರ್ಯದಾನಿ. ಎಲ್ಲ ಸುರಕ್ಷಾ ಕ್ರಮ ಮತ್ತು ತಪಾಸಣೆ ಮಾನದಂಡಗಳ ಮಟ್ಟಗಳನ್ನು ತಲುಪಿ ಬ್ಯಾಂಕ್ಗೆ ಜಮಾ ಮಾಡಲಾದ ಆತನ ವೀರ್ಯವನ್ನು ಬಳಸಿದ 197 ಫಲಾನುಭವಿಗಳ ಮಕ್ಕಳ ಮೇಲೆ ಕ್ಯಾನ್ಸರ್ನ ತೂಗುಗತ್ತಿ ನೇತಾಡುತ್ತಿರುವುದು ಇದೀಗ ತನಿಖೆಯಿಂದ ಬಯಲಾಗಿದೆ. ಇಷ್ಟೊಂದು ಶಿಶುಗಳಿಗೆ ಕ್ಯಾನ್ಸರ್ನ ಜಾಡ್ಯವನ್ನು ಅಂಟಿಸಿರುವ ಆ ದಾನಿ ಮಾತ್ರ ಕ್ಯಾನ್ಸರ್ ರೋಗಿಯಲ್ಲ ಎನ್ನುವುದು ಮತ್ತೊಂದು ಆಶ್ಚರ್ಯದ ವಿಷಯ.
ದಾನಿಯೊಬ್ಬನ ವೀರ್ಯವು ವೀರ್ಯದಾನಕ್ಕೆ ಅರ್ಹವಾಗಲು ಹಲವು ನಿಯಮಗಳನ್ನು ಪೂರೈಸಬೇಕಾಗುತ್ತದೆ. ಮೊದಲಿಗೆ ವಯಸ್ಸಿನ ಮಿತಿ. ಇದು ಒಂದೊಂದು ದೇಶದಲ್ಲಿ ಒಂದೊಂದು ರೀತಿಯಾಗಿದ್ದರೂ ಸಾಮಾನ್ಯವಾಗಿ 21ರಿಂದ 35 ವರ್ಷದ ಪುರುಷರಿಗೆ ಹೆಚ್ಚಿನ ಪ್ರಾಶಸ್ಱ. ಈ ಮಿತಿಯನ್ನು ಕೆಲವೊಮ್ಮೆ 55 ವರ್ಷದವರೆಗೂ ಸಡಿಲಿಸುವುದುಂಟು. ತದನಂತರ ದಾನಿಯ ಕುಟುಂಬದಲ್ಲಿ ಯಾವುದೇ ಸಾಂಕ್ರಾಮಿಕ ಮತ್ತು ಆನುವಂಶಿಕ ರೋಗಗಳ ಚರಿತ್ರೆಯಿಲ್ಲದಿರುವುದನ್ನು ದೃಢಪಡಿಸಿಕೊಳ್ಳಲಾಗುತ್ತದೆ. ದಾನಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢನಾಗಿದ್ದು ಧೂಮ್ರಪಾನ, ಮಾದಕ ವಸ್ತುಗಳ ಚಟವಿರಬಾರದು. ಇವೆಲ್ಲವೂ ಒಪ್ಪಿಗೆಯಾದ ಮೇಲೆ ದಾನಿಯ ವೀರ್ಯವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಲಾಗುತ್ತದೆ. ಅಲ್ಲಿ ಆತನ ವೀರ್ಯದ ವೀರ್ಯಾಣುಗಳ ಸಂಖ್ಯೆಯ ಜೊತೆಗೆ ಅವುಗಳ ಆಕಾರ ಹಾಗೂ ಹೇಗೆ ಈಜುತ್ತವೆ ಎಂಬುದನ್ನೆಲ್ಲ ಗಮನಿಸಲಾಗುತ್ತದೆ. ಕೊನೆಯಲ್ಲಿ ಈ ಎಲ್ಲ ಪರೀಕ್ಷೆಗಳಲ್ಲಿ ಪಾಸಾದ ವೀರ್ಯವನ್ನು ಶೈತ್ಯಾಗಾರದಲ್ಲಿಟ್ಟು ಅತಿಶೀತಲ ವಾತಾವರಣದಲ್ಲಿ ವೀರ್ಯಾಣುಗಳು ಬದುಕುತ್ತವೆ ಎಂಬುದನ್ನು ಖಾತ್ರಿಪಡಿಸಿಕೊಂಡ ಮೇಲೆಯೇ ಆ ದಾನಿಗೆ ವೀರ್ಯದಾನಿಯ ಪಟ್ಟ ದಯಪಾಲಿಸಲಾಗುತ್ತದೆ.
ಈ ಎಲ್ಲ ಪರೀಕ್ಷೆಗಳು ಸಮಯ ಮತ್ತು ಶ್ರಮವನ್ನು ಬೇಡುತ್ತವೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ನೀವು ಹತ್ತು ಮಕ್ಕಳ ತಂದೆಯಾಗಿದ್ದರೂ ನಿಮ್ಮ ವೀರ್ಯವು ಈ ಎಲ್ಲ ಪರೀಕ್ಷೆಗಳಲ್ಲಿ ಪಾಸಾಗುತ್ತದೆ ಎಂಬುದಕ್ಕೆ ಖಾತ್ರಿಯೇನಿಲ್ಲ. ಪರಿಣತರು ಹೇಳುವಂತೆ ಪ್ರತಿ ನೂರು ಜನರಲ್ಲಿ ಐವರು ಮಾತ್ರ ವೀರ್ಯದಾನಿಯಾಗಿ ಆಯ್ಕೆಯಾಗುವ ಸಂಭವವಿರುತ್ತದೆ. ಅಂತಹುದರಲ್ಲಿ ವೀರ್ಯದಾನದ ವಿಷಯವೇ ಇನ್ನೂ ಭ್ರೂಣಾವಸ್ಥೆಯಲ್ಲಿರುವ ಭಾರತದಂತಹ ದೇಶಗಳಲ್ಲಿ ವೀರ್ಯವನ್ನು ಪಡೆಯುವುದು ಎಷ್ಟು ಕಷ್ಟಕರ ಎಂಬುದನ್ನು ನೀವೇ ಊಹಿಸಿಕೊಳ್ಳಿ.
ಇನ್ನು ಆ ಡೆನ್ಮಾರ್ಕ್ ದಾನಿಯ ವಿಷಯಕ್ಕೆ ಬರೋಣ. ಬಿಬಿಸಿಯೂ ಸೇರಿದಂತೆ 14 ಸುದ್ದಿ ಸಂಸ್ಥೆಗಳು ಸೇರಿ ಜಂಟಿಯಾಗಿ ನಡೆಸಿರುವ ಕಾರ್ಯಾಚರಣೆಯಲ್ಲಿ ಹಲವು ಆಶ್ಚರ್ಯಕರ ವಿಷಯಗಳು ಹೊರಬಂದಿವೆ. ಅವರು ಪ್ರಕಟಿಸಿರುವ ವರದಿ ಪ್ರಕಾರ, ಆ ವೀರ್ಯದಾನಿಯು 2005ರಿಂದ ತನ್ನ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಜನೆಗೆ ಕಾಸು ಹೊಂದಿಸಲು ವೀರ್ಯದಾನ ಮಾಡುತ್ತಿದ್ದ. ಆ ಸಮಯದಲ್ಲೇ ವೀರ್ಯಬ್ಯಾಂಕ್ ಮೂಲಕ ಆತನ ವೀರ್ಯವನ್ನು ಐವಿಎಫ್ಗೆ ಬಳಸಲಾಗಿತ್ತು. ವೀರ್ಯಬ್ಯಾಂಕ್ ಕೂಡ ಚಾಲ್ತಿಯಲ್ಲಿರುವ ಎಲ್ಲ ಪರೀಕ್ಷೆಗಳನ್ನು ಮತ್ತು ಕಟ್ಟಳೆಗಳನ್ನು ಪೂರ್ಣಗೊಳಿಸಿದ ನಂತರವೇ ಆತನ ವೀರ್ಯವನ್ನು ತನ್ನ ಬ್ಯಾಂಕಿನಲ್ಲಿ ಜಮಾ ಮಾಡಿಕೊಂಡಿತ್ತು. ಅತಿ ಮುಖ್ಯವಾಗಿ ಈ ಎಲ್ಲ ಪರೀಕ್ಷೆಗಳಲ್ಲಿ ಕ್ಯಾನ್ಸರ್ ಸೇರಿದಂತೆ ಇನ್ಯಾವ ರೋಗಗಳ ಕುರುಹುಗಳೂ ಪತ್ತೆಯಾಗಿರಲಿಲ್ಲ. ಹೀಗಿರುವಾಗ ಆತನಿಂದ ಹುಟ್ಟಿದ ಶಿಶುಗಳಿಗೆ ಕ್ಯಾನ್ಸರ್ ಬಂದಿದ್ದು ಹೇಗೆ?
ಸುದ್ದಿ ಸಂಸ್ಥೆಗಳು ಕಂಡುಕೊಂಡ ಪ್ರಕಾರ, ಆ ವೀರ್ಯದಾನಿ ಹುಟ್ಟುವ ಮೊದಲೇ ಅಂದರೆ ಭ್ರೂಣಾವಸ್ಥೆಯಲ್ಲಿಯೇ ಆತನ ಕೆಲವು ಕೋಶಗಳಲ್ಲಿ ಡಿಎನ್ಎ ರೂಪಾಂತರಗೊಂಡಿತ್ತು. ಇದರ ಪರಿಣಾಮವಾಗಿ ಆತನ ಟಿಪಿ53 ಎಂಬ ವಂಶವಾಹಿಗೆ ಹಾನಿಯುಂಟಾಯಿತು. ಅಂದಹಾಗೆ ಟಿಪಿ53 ವಂಶವಾಹಿಯು ಮಾನವನ ದೇಹದಲ್ಲಿ ಕ್ಯಾನ್ಸರ್ ಹರಡುವಿಕೆಯ ಪ್ರತಿರೋಧದಲ್ಲಿ ಬಲು ಮುಖ್ಯ ಪಾತ್ರ ವಹಿಸುತ್ತದೆ. ವೀರ್ಯದಾನಿಯ ದೇಹದಲ್ಲಿ ಟಿಪಿ53 ಹಾನಿಯ ಪ್ರಮಾಣ ಆತನಲ್ಲಿ ಕಾನ್ಸರ್ ಉಂಟಾಗುವ ಮಟ್ಟದಲ್ಲಿ ಇರದ ಕಾರಣ ಆತ ಆರೋಗ್ಯವಂತನಾಗಿಯೇ ಇದ್ದ. ಆದರೆ ಆತನ ವೀರ್ಯವನ್ನು ಐವಿಎಫ್ ಅರ್ಥಾತ್ ಕೃತಕ ಗರ್ಭಧಾರಣೆಯಲ್ಲಿ ಬಳಸಿ ಜನ್ಮ ತಾಳಿದ ಎಲ್ಲ ಶಿಶುಗಳ ದೇಹದಲ್ಲಿ ರೂಪಾಂತರಗೊಂಡ ಟಿಪಿ53 ವಂಶವಾಹಿಯ ಹಾಜರಿಯಿರುವ ಕಾರಣ ಅವರಿಗೆ ಕ್ಯಾನ್ಸರ್ ಹರಡುವ ಸಾಧ್ಯತೆ ತೀರಾ ಹೆಚ್ಚು. ಹೀಗೆ ಕ್ಯಾನ್ಸರ್ಪೀಡಿತನಲ್ಲದ, ಆದರೆ ರೂಪಾಂತರಗೊಂಡ ಡಿಎನ್ಎಯ ಕಾರಣ ಆತನ ಮುಂದಿನ ಪೀಳಿಗೆಗೆ ಕಾನ್ಸರ್ ಹರಡುವ ಪ್ರಕ್ರಿಯೆಗೆ ‘ಲಿ ಫ್ರಾಮೆನಿ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇಂತಹ ರೋಗಲಕ್ಷಣದ ಶಿಶು ತನ್ನ ಜೀವಮಾನದಲ್ಲಿ ಸ್ತನ ಕ್ಯಾನ್ಸರ್, ಮೂಳೆ ಕ್ಯಾನ್ಸರ್, ಲ್ಯುಕೇಮಿಯಾದಂತಹ ರೋಗಗಳಿಗೆ ತುತ್ತಾಗುವ ಸಾಧ್ಯತೆ ಶೇ. 99ಕ್ಕಿಂತ ಹೆಚ್ಚು!
ಬಿಬಿಸಿ ತನಿಖಾ ವರದಿ ಪ್ರಕಾರ, ಈ ರೂಪಾಂತರಗೊಂಡ ಟಿಪಿ53 ವಂಶವಾಹಿಯುಳ್ಳ ವೀರ್ಯವನ್ನು ಬಳಸಿದ 197 ಮಕ್ಕಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದ್ದು ಈ ಸಂಖ್ಯೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಯಿದೆ. ಆತಂಕದ ವಿಷಯವೇನೆಂದರೆ, ಅಂಥವರ ಪೈಕಿ ಹಲವರಲ್ಲಿ ಈಗಾಗಲೇ ಕ್ಯಾನ್ಸರ್ ಪತ್ತೆಯಾಗಿದ್ದು ಕೆಲವು ಮಕ್ಕಳು ಅಸು ನೀಗಿದ್ದಾರೆ. ವಿಷಯ ತಿಳಿದ ಉಳಿದವರು ಕ್ಯಾನ್ಸರ್ ಎದುರಿಸಲು ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ. ಅದೆಲ್ಲ ಸರಿ, ಆದರೆ ‘ಅಷ್ಟೊಂದು ಮಡಿಲುಗಳನ್ನು ತುಂಬಲು ಒಬ್ಬ ವೀರ್ಯದಾನಿಯ ವೀರ್ಯವನ್ನು ಹೇಗೆ ಬಳಸಲಾಯಿತು’ ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗಿದೆ. ತನಿಖಾ ವರದಿಯಲ್ಲಿ ಆ ಕುರಿತೂ ಬೆಳಕು ಚೆಲ್ಲಲಾಗಿದೆ. ತನಿಖಾ ತಂಡ ಕಂಡುಕೊಂಡಂತೆ ಈ ಒಬ್ಬ ವೀರ್ಯದಾನಿಯ ವೀರ್ಯವನ್ನು 14 ದೇಶಗಳ 67 ಕೃತಕ ಗರ್ಭಧಾರಣಾ ಕೇಂದ್ರಗಳಲ್ಲಿ ಬಳಸಲಾಗಿದೆ. ಓರ್ವ ವ್ಯಕ್ತಿಯ ವೀರ್ಯವನ್ನು ಎಷ್ಟು ಬಾರಿ ಕೃತಕ ಗರ್ಭಧಾರಣೆಗೆ ಬಳಸಬಹುದೆಂಬ ನಿಯಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪಷ್ಟವಾಗಿಲ್ಲ. ಈ ನಿಟ್ಟಿನಲ್ಲಿ ಒಂದೊಂದು ದೇಶವೂ ತನ್ನದೇ ಆದ ಕಾನೂನುಗಳನ್ನು ಬಳಸುತ್ತಿದೆ. ಉದಾಹರಣೆಗೆ ಬೆಲ್ಜಿಯಂನಲ್ಲಿ ಓರ್ವ ವೀರ್ಯದಾನಿಯಿಂದ ಆರು ಕುಟುಂಬಗಳ ಸದಸ್ಯರುಗಳಲ್ಲಷ್ಟೆ ಆ ವೀರ್ಯವನ್ನು ಬಳಸಬಹುದೆಂಬ ಮಿತಿಯಿದ್ದರೆ ಭಾರತ ಮತ್ತು ಅಮೆರಿಕದಲ್ಲಿ ಅದು ಹತ್ತು ಕುಟುಂಬಗಳೆಂದು ನಿರ್ಧರಿಸಲಾಗಿದೆ. ಆನುವಂಶಿಕ ರೋಗಗಳ ಹರಡುವಿಕೆಯನ್ನು ತಡೆಯುವುದು ಇದರ ಮೂಲ ಉದ್ದೇಶ. ಹೀಗಿರುವಾಗ ಬೆಲ್ಜಿಯಂನಲ್ಲಿ ಆರು ಕುಟುಂಬಗಳ ಮಿತಿಯನ್ನು ಉಲ್ಲಂಘಿಸಿ 38 ಮಹಿಳೆಯರಿಗೆ ಈ ಒಬ್ಬ ವೀರ್ಯದಾನಿಯ ವೀರ್ಯವನ್ನು ಬಳಸಿ ಕೃತಕ ಗರ್ಭಧಾರಣೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕೃತಕ ಗರ್ಭಧಾರಣೆಯ ಇತಿಹಾಸದಲ್ಲಿಯೇ ಇದೊಂದು ಅತ್ಯಂತ ಅಪರೂಪದ ಘಟನೆಯಾಗಿದ್ದು ಇದು ಮರುಕಳಿಸದಂತೆ ತಡೆಯಲು ಎಲ್ಲ ದೇಶಗಳೂ ಒಗ್ಗೂಡಿ ಸಮಾನ ಸಂಹಿತೆಯನ್ನು ತರಬೇಕಾಗುತ್ತದೆ ಎಂದು ಈ ಕ್ಷೇತ್ರದ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಲಭ್ಯವಿರುವ ಮಾಹಿತಿಯಂತೆ ಡೆನ್ಮಾರ್ಕ್ ದಾನಿಯ ವೀರ್ಯವು ಭಾರತದಲ್ಲೆಲ್ಲೂ ಬಳಕೆಯಾಗಿಲ್ಲ. ಭಾರತದಂತಹ ಸಾಂಪ್ರದಾಯಿಕ ಮನಸ್ಥಿತಿಯ ದೇಶಗಳಲ್ಲಿ ಕೃತಕ ಗರ್ಭಧಾರಣೆ ಅತಿ ಸೂಕ್ಷ್ಮ ವಿಚಾರವಾಗಿದೆ. ನಮ್ಮಲ್ಲಿಯೂ ಇಂತಹ ಸ್ಥಿತಿ ಬರದೇ ಇರುವಂತೆ ನೋಡಿಕೊಳ್ಳಲು ಹೆಚ್ಚು ಹೆಚ್ಚು ಜನರನ್ನು ವೀರ್ಯದಾನಕ್ಕೆ ಪ್ರೋತ್ಸಾಹಿಸುವ ಅವಶ್ಯಕತೆಯಿದೆ. ನಮ್ಮಲ್ಲಿನ್ನೂ ಈ ಕ್ಷೇತ್ರವು ಭ್ರೂಣಾವಸ್ಥೆಯಲ್ಲಿದ್ದರೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅದೊಂದು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಡೆನ್ಮಾರ್ಕ್ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. 2020ರಲ್ಲಿ 5 ಬಿಲಿಯನ್ ಡಾಲರ್ ಮೌಲ್ಯದಷ್ಟಿದ್ದ ಇದರ ವ್ಯವಹಾರ 2033ರಲ್ಲಿ 8 ಬಿಲಿಯನ್ ಡಾಲರ್ಗೆ ತಲುಪಲಿದೆ ಎಂಬುದು ಅಲ್ಲಿನ ಪಂಡಿತರ ಲೆಕ್ಕಾಚಾರ. ಭಾರತದಲ್ಲಿ ಕೃತಕ ಗರ್ಭಧಾರಣೆಗೆ ಬಳಕೆಯಾದ ವೀರ್ಯದಾನಿಯ ಮಾಹಿತಿಯನ್ನು ಬಳಕೆದಾರರಿಗೆ ತಿಳಿಸುವುದಿಲ್ಲ. ಅದನ್ನು ನಮ್ಮ ಕಾಯಿದೆಗಳೇ ಸ್ಪಷ್ಟವಾಗಿ ಹೇಳಿವೆ. ಆದರೆ ಆತನ ವಿದ್ಯಾರ್ಹತೆ, ಎತ್ತರ, ಮೈಬಣ್ಣದಂತಹ ಕೆಲ ಮಾಹಿತಿಗಳನ್ನಷ್ಟೇ ತಿಳಿಸಲು ಅನುಮತಿಯಿದೆ. ಆದರೆ ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ.
ಅಲ್ಲಿ ವೀರ್ಯಬಳಕೆಗೆ ಡೇಟಿಂಗ್ ಆಪ್ನಂತಹ ವೇದಿಕೆಗಳು ಲಭ್ಯವಿದ್ದು ಫಲಾನುಭವಿಗಳು ಅಲ್ಲಿ ವೀರ್ಯದಾನಿಯ ಚಹರೆ, ಹಿನ್ನೆಲೆಗಳನ್ನೆಲ್ಲ ಅರಿತುಕೊಂಡು ತಮ್ಮಿಷ್ಟದ ದಾನಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಡೆನ್ಮಾರ್ಕ್ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಇದೇ ಕಾರಣ. ಹೊಂಬಣ್ಣದ ಕೂದಲು, ನೀಲಿ ಕಣ್ಣುಗಳು, ಎತ್ತರದ ಸದೃಢ ಮೈಕಟ್ಟು, ಆಕರ್ಷಕ ವ್ಯಕ್ತಿತ್ವ ಇವೆಲ್ಲ ಅಲ್ಲಿನ ಯುವಕರಿಗೆ ಅತಿ ಸುಂದರರೆಂಬ ಹಣೆಪಟ್ಟಿ ಅಂಟಿಸಿವೆ. ಹೀಗಾಗಿ ಹಲವು ಪಾಶ್ಚಿಮಾತ್ಯ ದೇಶಗಳ ತಾಯಂದಿರು ಇಂತಹ ಮಕ್ಕಳನ್ನು ಹೆರಲು ಇಷ್ಟಪಡುತ್ತಾರೆ. ‘ವೈಕಿಂಗ್ ವೀರ್ಯ’ ಎನ್ನಲಾಗುವ ಇಲ್ಲಿನವರ ವೀರ್ಯಕ್ಕೆ ಜಾಗತಿಕವಾಗಿ ಅಪಾರ ಬೇಡಿಕೆಯಿದೆ. ಇದು ಸ್ವಾಭಾವಿಕವಾಗಿ ಇಲ್ಲಿನ ವೀರ್ಯದಾನಿಗಳಿಗೆ ಕೈತುಂಬ ಸಂಪಾದನೆಯನ್ನು ನೀಡುವ ಕಸುಬಾಗಿ ಪರಿಣಮಿಸಿದೆ. ಹೀಗಾಗಿ ಜಗತ್ತಿನ ಅತಿ ದೊಡ್ಡ ವೀರ್ಯಬ್ಯಾಂಕ್ ಮತ್ತು ವೀರ್ಯ ರಫ್ತುದಾರರು ಇಲ್ಲಿದ್ದಾರೆ. ಬೇಡಿಕೆ ಹೆಚ್ಚಾದಂತೆ ಕಾನೂನು, ಕಟ್ಟಳೆ ಗಳನ್ನೆಲ್ಲ ಗಾಳಿಗೆ ತೂರಿ ಒಂದೇ ವೀರ್ಯವನ್ನು ಬಹಳಷ್ಟು ಫಲಾನುಭವಿಗಳಿಗೆ ಹಂಚಿದ ಪರಿಣಾಮವೇ ಈ ಸರಣಿ ಕ್ಯಾನ್ಸರ್. ವೈದ್ಯಕೀಯ ಕ್ಷೇತ್ರವು ನೈತಿಕತೆಯನ್ನು ಗಾಳಿಗೆ ತೂರಿ ಬಂಗಾರದ ಕೋಳಿಯ ಹೊಟ್ಟೆ ಸೀಳ ಹೊರಟರೆ ಮತ್ತೇನು ನಿರೀಕ್ಷಿಸಲು ಸಾಧ್ಯ?
-(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)