- ಸಿಲಿಕಾನ್ ಸಿಟಿಯ ಲೈಫ್‌ಲೈನ್ ಆಗಿರುವ ನಮ್ಮ ಮೆಟ್ರೋ ಸೇವೆಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ
- ಮೆಟ್ರೋ ವೈಫಲ್ಯದಿಂದಾಗಿ ಐಟಿ ಉದ್ಯೋಗಿಗಳು ಮನೆ ಸೇರಲು ಲಾರಿ, ಟ್ರಕ್ ಹತ್ತಿಕೊಂಡು ಮನೆ ಸೇರಲು ಪ್ರಯತ್ನಿಸಿರುವ ವಿಡಿಯೋ ವೈರಲ್
- ಈ ಘಟನೆ ಕುರಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು: ಸಿಲಿಕಾನ್ ಸಿಟಿಯ ಲೈಫ್‌ಲೈನ್ ಆಗಿರುವ ನಮ್ಮ ಮೆಟ್ರೋ ಸೇವೆಗಳಲ್ಲಿ ಪದೇ ಪದೇ ಉಂಟಾಗುತ್ತಿರುವ ತಾಂತ್ರಿಕ ವ್ಯತ್ಯಯ ಮತ್ತು ಅದರಿಂದ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆ ಇದೀಗ ರಾಜಕೀಯ ಜಿದ್ದಾಜಿದ್ದಿಗೆ (Tejasvi Surya) ಕಾರಣವಾಗಿದೆ.
ಮೆಟ್ರೋ ವೈಫಲ್ಯದಿಂದಾಗಿ ಐಟಿ ಉದ್ಯೋಗಿಗಳು ಮನೆ ಸೇರಲು ಲಾರಿ, ಟ್ರಕ್ ಹತ್ತಿಕೊಂಡು ಮನೆ ಸೇರಲು ಪ್ರಯತ್ನಿಸುತ್ತಿರುವ ವರದಿಗಳು ಹೊರಬಿದ್ದ ಬೆನ್ನಲ್ಲೇ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬುಧವಾರ (ಜೂ.24) ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ!
ನಮ್ಮ ಹೆಮ್ಮೆಯ ಮೆಟ್ರೋ ರೈಲು ಸೇವೆಗಳಲ್ಲಿನ ತೊಂದರೆಗಳು ಇತ್ತೀಚಿನ ದಿನಗಳಲ್ಲಿ ಆತಂಕಕಾರಿ ಎಂಬಂತೆ ಪದೇ ಪದೇ ಸಂಭವಿಸುತ್ತಿವೆ. ಹೀಗಿದ್ದಾಗಲೂ, ಮೆಟ್ರೋ ವ್ಯವಸ್ಥೆ ಪ್ರತಿ ಬಾರಿ ಕೈಕೊಟ್ಟಾಗಲೂ ಇಡೀ ನಗರವೇ ಸಂಪೂರ್ಣವಾಗಿ ಸಂಚಾರ ಅಡಚಣೆ ಉಂಟಾಗುತ್ತದೆ. ಈ ಸಮಯದಲ್ಲಿ ಓಲಾ, ಉಬರ್ ಕ್ಯಾಬ್‌ಗಳು ಆ್ಯಪ್‌ಗಳಿಂದ ದಿಢೀರ್ ಮಾಯವಾಗುತ್ತವೆ, ಆಟೋ ಚಾಲಕರು ಸವಾರಿ ಮಾಡಲು ನಿರಾಕರಿಸುತ್ತಾರೆ. ಅಂತಿಮವಾಗಿ ಇಡೀ ನಗರದ ನಾಗರಿಕರು ಬೀದಿಯಲ್ಲಿ ಅಸಹಾಯಕರಾಗಿ ನಿಲ್ಲುವಂತಾಗುತ್ತದೆ.
ನಿನ್ನೆ ಸಂಜೆ ಸಂಭವಿಸಿದ ಮೆಟ್ರೋ ಸೇವೆಯ ವೈಫಲ್ಯದಿಂದಾಗಿ, ಹಗಲಿರುಳು ಕಷ್ಟಪಟ್ಟು ದುಡಿಯುವ ಐಟಿ ವೃತ್ತಿಪರರು ಮತ್ತು ನೌಕರರು ಆಫೀಸ್ ಮುಗಿಸಿ ಮನೆಗೆ ಮರಳಲು ಬೇರೆ ಯಾವುದೇ ದಾರಿಯಿಲ್ಲದೆ, ರಸ್ತೆಯಲ್ಲಿ ಹೋಗುತ್ತಿದ್ದ ಟ್ರಕ್ ಹಾಗೂ ಲಾರಿಗಳನ್ನು ಕೈಯೊಡ್ಡಿ ನಿಲ್ಲಿಸಿ, ಅವುಗಳ ಹಿಂಭಾಗದಲ್ಲಿ ಹತ್ತಿ ಪ್ರಯಾಣಿಸಬೇಕಾದ ದಯನೀಯ ಪರಿಸ್ಥಿತಿ ನಿರ್ಮಾಣವಾಗಿತ್ತು.
ದುರಂತವೆಂದರೆ, ಇಷ್ಟೆಲ್ಲಾ ನರಕಯಾತನೆ ಅನುಭವಿಸಿದ ಈ ನಾಗರಿಕರು ನಾಳೆ ಬೆಳಿಗ್ಗೆ ಮತ್ತೆ ಬೇಗ ಎದ್ದು, ಎಂದಿನಂತೆ ಆಫೀಸ್‌ಗೆ ಓಡಬೇಕು, ಪ್ರಾಮಾಣಿಕವಾಗಿ ತಮ್ಮ ಕಷ್ಟದ ಗಳಿಕೆಯಿಂದ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕು ಮತ್ತು ಇದೇ ಮುರಿದುಬಿದ್ದಿರುವ ಆಡಳಿತ ವ್ಯವಸ್ಥೆಯಡಿಯಲ್ಲಿ ಎಲ್ಲವನ್ನೂ ಮೂಗ ಮುಚ್ಚಿಕೊಂಡು ಮತ್ತೆ ಸಹಿಸಬೇಕು ಎಂದು ಬರೆದುಕೊಂಡಿದ್ದಾರೆ.
ಘಟನೆ ಏನು?
ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ನೇರಳೆ ಮಾರ್ಗದ ಮೆಟ್ರೋ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಸಾವಿರಾರು ಪ್ರಯಾಣಿಕರು ಮನೆಗೆ ತೆರಳಲು ಸಾಧ್ಯವಾಗದೇ ಪರದಾಡಿದರು. ಈ ಸಮಯದಲ್ಲಿ ಮೆಟ್ರೋ ಕೈ ಕೊಟ್ಟ ಕಾರಣ ಕ್ಯಾಬ್, ಆಟೋ, ಬಸ್ ಸಿಗದೆ ಸಾಫ್ಟ್ವೇರ್ ಎಂಜಿನಿಯರ್ಗಳು ಲಾರಿಗಳಲ್ಲಿ ಪ್ರಯಾಣಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆದವು.
ಎಂದಿನಂತೆ ಕಾರ್ಯಾಚರಣೆ
ಇಂದು (ಜೂ.24)ರ ಬೆಳಗ್ಗೆ 5 ರಿಂದಲೇ ಮೆಟ್ರೋ ಸಂಚಾರ ಸಾಮಾನ್ಯ ವೇಳಾಪಟ್ಟಿಯಿಂದ ಸಂಚರಿಸುತ್ತಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ಹೊರಡಿಸಿದೆ. ಆದಾಗ್ಯೂ, 'ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷವನ್ನು ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ಯಶಸ್ವಿಯಾಗಿ ಸರಿಪಡಿಸಿದ್ದಾರೆ. ಇಂದು ಬೆಳಿಗ್ಗೆ 5:00 ಗಂಟೆಯಿಂದ ನೇರಳೆ ಮಾರ್ಗದಾದ್ಯಂತ ಮೆಟ್ರೋ ರೈಲು ಸಂಚಾರವು ನಿಯಮಿತ ವೇಳಾಪಟ್ಟಿಯಂತೆ ಸಂಪೂರ್ಣವಾಗಿ ಪುನರಾರಂಭಗೊಳ್ಳಲಿದೆ. ಪ್ರಯಾಣಿಕರು ಈ ಮಾಹಿತಿಯನ್ನು ಗಮನಿಸಿ, ನಮ್ಮ ಮೆಟ್ರೋದ ಸುರಕ್ಷಿತ, ವಿಶ್ವಾಸಾರ್ಹ ಮತ್ತು ದಕ್ಷ ಸೇವೆಗಳನ್ನು ಎಂದಿನಂತೆ ಬಳಸಿಕೊಳ್ಳುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).