ಕಮಲಾಪುರ ತಾಲೂಕಿನ ಮಹಾಗಾಂವ್ ಕ್ರಾಸ್ ಸಮೀಪದ ತೋಟಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಕೃಷಿ ಪರಿಕರಗಳ ಕಳ್ಳತನದ ಬಗ್ಗೆ ಮಾಹಿತಿ ಪಡೆದರು.
- ಕಮಲಾಪುರ ತಾಲೂಕಿನಲ್ಲಿ ಹೆಚ್ಚಿದ ಪ್ರಕರಣ
- ತೋಟಗಾರಿಕೆ ಬೆಳೆಗಳಿಗೆ ಸಂಕಷ್ಟ
ಕಮಲಾಪುರ: ತಾಲೂಕಿನಲ್ಲಿ ಕಳೆದ 2 ತಿಂಗಳಿಂದ ಕಳ್ಳರ ಹಾವಳಿ ಹೆಚ್ಚಾಗಿದ್ದು, ನಿತ್ಯವೂ ಕೃಷಿ ಉಪಯೋಗಿ ವಸ್ತುಗಳು ಮಾಯವಾಗುತ್ತಿವೆ. ಇದರಿಂದ ರೈತಾಪಿ ವರ್ಗ ನಿದ್ದೆಗೆಟ್ಟು ಜಮೀನಿನಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹಾಗಾಂವ್ ವ್ಯಾಪ್ತಿಯಲ್ಲಿ ನೀರಾವರಿ ಜಮೀನು ಹೆಚ್ಚಿದ್ದು, ಹೀಗಾಗಿ ತೋಟಗಾರಿಕೆ ಕೃಷಿಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ಜಮೀನಿನಲ್ಲಿ ಹಾಕಿರುತ್ತಾರೆ. ಈ ವಸ್ತುಗಳ ಮೇಲೆಯೇ ಕಳ್ಳರ ಕಣ್ಣು ಬಿದ್ದಿದ್ದು, ನಿತ್ಯ 2&3 ಹೊಲಗಳಲ್ಲಿನ ಕೃಷಿ ಉಪಯೋಗಿ ಸಾಮಗ್ರಿಗಳನ್ನು ಕದಿಯುತ್ತಿದ್ದಾರೆ.
ಮಹಾಗಾಂವ್ ಕ್ರಾಸ್, ಕುರಿಕೋಟಾ, ಕಟ್ಟೋಳಿ, ಹೊಳಕುಂದಾ, ಹರಕಂಚಿ, ನಾಗೂರ, ಸಿರಗಾಪುರ ಸೇರಿ ಹಲವು ಗ್ರಾಮಗಳಲ್ಲಿ ಕಳ್ಳರ ಉಪಟಳದಿಂದ ಅನ್ನದಾತರು ಚಿಂತಾಕ್ರಾಂತರಾಗಿದ್ದಾರೆ. ಶಿವಶರಣಪ್ಪ ಮಡಕಿ, ಜಗನ್ನಾಥ ಕಟ್ಟೋಳಿ, ನೀಲಕಂಠ ಕುರಿಕೋಟಾ, ರವಿ ಚೇಂಗಟಾ, ಕವಿತಾಬಾಯಿ, ಶಿವರಾಯ ಚೇಂಗಟಾ, ಗುರುನಾಥ ಹರಕಂಚಿ, ಅಂಬಾರಾಯ ಮಾಳಗೆ ಸೇರಿ ಮತ್ತಿತರ ತೋಟಗಳಲ್ಲಿನ ಕೇಬಲ್ ವೈರ್, ಸ್ಟಾಟರ್, ಸ್ಪಿಂಕ್ಲರ್ ಛಡಿ, ಪೈಪ್ ಮುಂತಾದ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಮಹಾಗಾಂವ್ ವ್ಯಾಪ್ತಿಯಲ್ಲಂತೂ ಒಂದೇ ಜಮೀನಿನಲ್ಲೇ 2 ಬಾರಿ ಕಳ್ಳತನ ನಡೆದಿದೆ. ಹೊಸ ವಸ್ತುಗಳನ್ನು ತಂದು ಹಾಕುತ್ತಿದ್ದಂತೆ ಕಳ್ಳರು ಬಂದು ದೋಚಿಕೊಂಡು ಹೋಗುತ್ತಿದ್ದಾರೆ. ಮೋಟಾರ್, ಸ್ಟಾರ್ಟರ್ ಹಾಗೂ ವೈರ್ಗಳನ್ನು ಕದಿಯುತ್ತಿರುವುದರಿಂದ ಜಮೀನುಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ತೋಟಗಾರಿಕೆ ಬೆಳೆಗಳು ಒಣಗುತ್ತಿವೆ ಎಂಬುದು ರೈತರ ಅಳಲಾಗಿದೆ.
ಲೋಡ್ ಶೆಡ್ಡಿಂಗ್ಗೆ ಬೆಸತ್ತ ರೈತರ
ಮಹಾಗಾಂವ್ ಕ್ರಾಸ್ ಜೆಸ್ಕಾಂ ವ್ಯಾಪ್ತಿಯಲ್ಲಿ ಅೂಷಿತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆ. ಒಂದು ವಾರ ಬೆಳಗ್ಗೆ 3&ಫೇಸ್ ವಿದ್ಯುತ್ ನೀಡಿದರೆ, ಇನ್ನೊಂದು ವಾರ ಮಧ್ಯಾಹ್ನ, ರಾತ್ರಿ ವಿದ್ಯುತ್ ನೀಡಲಾಗುತ್ತಿದೆ. ಸೂರ್ಯನ ಬೆಳಕು ಇರುವವರೆಗೆ 3&ಫೇಸ್ ವಿದ್ಯುತ್ ನೀಡಬೇಕು ಎಂಬ ನಿಯಮಾವಳಿ ಇದ್ದರೂ ಸ್ಥಳಿಯ ಸಿಬ್ಬಂದಿ ಪಾಲಿಸುತ್ತಿಲ್ಲ. ರಾತ್ರಿ ಹೊತ್ತು ವಿಷಜಂತುಗಳ ಹಾವಳಿಯಿಂದ ಹೆದರಿ ರೈತರು ಜಮೀನಿನತ್ತ ಹೋಗುತ್ತಿಲ್ಲ. ಇದರಿಂದಾಗಿ ಬೆಳೆಗಳಿಗೆ ನೀರು ಉಣಿಸಲಾಗುತ್ತಿಲ್ಲ ಎಂಬುದು ರೈತರ ದೂರಾಗಿದೆ.
"
ಮಹಾಗಾಂವ್ ವ್ಯಾಪ್ತಿಯಲ್ಲಿ ನಿರಂತರ ಕೃಷಿ ಪರಿಕರಗಳ ಕಳ್ಳತನ ನಡೆಯುತ್ತಿದೆ. ಇದರಿಂದಾಗಿ ತೋಟಗಾರಿಕೆ ಕೃಷಿಗೆ ಹಿನ್ನಡೆ ಆಗುತ್ತಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಳ್ಳತನಕ್ಕೆ ಕಡಿವಾಣ ಹಾಕಬೇಕು.
— > ಶಿವಶರಣಪ್ಪ ಮಡಕಿ, ರೈತ, ಮಹಾಗಾಂವ್ ಕ್ರಾಸ್
"
ಜೆಸ್ಕಾಂನಲ್ಲಿ ಯಾವುದೇ ರೀತಿಯ ಲೋಡ್ ಶೆಡ್ಡಿಂಗ್ ಜಾರಿಯಲ್ಲಿಲ್ಲ. ಸೂರ್ಯನ ಬೆಳಕು ಇರುವ ಹೊತ್ತಿನಲ್ಲೆ ರೈತರ ಪಂಪಸೆಟ್ಗಳಿಗೆ ತ್ರಿಫೇಸ್ ವಿದ್ಯುತ್ ನೀಡಬೇಕು. ರಾತ್ರಿ ಹೊತ್ತು ವಿದ್ಯುತ್ ನೀಡುವುದು ನಿಯಮಬಾಹಿರ. ಈ ಕುರಿತು ಪರಿಶೀಲನೆ ಮಾಡುತ್ತೇನೆ.
— > ಅರವಿಂದ ಧುಮಾಳೆ, ಎಇಇ, ಜೆಸ್ಕಾಂ