They tore up the existing road and left it in a wretched state! 
ರಾಜ್ಯ

ಇದ್ದ ರಸ್ತೆ ಕಿತ್ತು ಅಧೋಗತಿ ಮಾಡಿಟ್ಟರು!

ಶ್ರೀನಿವಾಸಪುರ:

ಪಟ್ಟಣದಲ್ಲಿ ಸುಮಾರು 1.20 ಕೋಟಿ ರೂ. ವೆಚ್ಚದಲ್ಲಿ ಇತ್ತೀಚೆಗೆ ನಿರ್ಮಿಸಿದ್ದ ಸಿಸಿ ರಸ್ತೆ ಕೆಲವೇ ದಿನಗಳಲ್ಲಿ ಬಿರುಕು ಬಿಟ್ಟಿದ್ದರಿಂದ ಕಳಪೆ ಕಾಮಗಾರಿ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಮಣಿದ ಗುತ್ತಿಗೆದಾರರು ಈಗ ಮತ್ತೆ ರಸ್ತೆ ಅಗೆಯುತ್ತಿದ್ದು, ನಾಗರಿಕರನ್ನು ಮತ್ತಷ್ಟು ಕೆರಳಿಸಿದೆ.

ಚೆನ್ನಾಗಿದ್ದ ರಸ್ತೆಯನ್ನೇಕೆ ಕಿತ್ತರು?

ಪಟ್ಟಣದಲ್ಲಿ ಈಜುಕೊಳ ಸೇರಿ ಇನ್ನಿತರ ಪ್ರಗತಿ ಮಾಡುವುದು ಬಿಟ್ಟು ಚೆನ್ನಾಗಿದ್ದ ರಸ್ತೆಯನ್ನು ಕಿತ್ತು, ಸಿಸಿ ರಸ್ತೆ ನಿರ್ಮಾಣ ಮಾಡುವ ತುರ್ತು ಏನಿತ್ತು?. ಯಾವ ಸಮಸ್ಯೆ ಇದೆ ಅದನ್ನು ಬಗೆಹರಿಸಲು ಹಣ ಖರ್ಚು ಮಾಡಬೇಕಿತ್ತೇ ವಿನ@ ಹಣ ವ್ಯರ್ಥ ಮಾಡದಂತೆ ಕಾಂಗ್ರೆಸ್​ನ ಪ್ರಮುಖರು ಪ್ರತಿಭಟನೆಯನ್ನೂ ನಡೆಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಸಿಸಿ ರಸ್ತೆ ನಿರ್ಮಿಸಿದ ಒಂದು ವಾರದಲ್ಲೇ ಮೇಲ್ಭಾಗದಲ್ಲಿ ಎಂ.ಸ್ಯಾಂಡ್​ ಪೌಡರ್​ ತೆಲುತ್ತಿದ್ದು, ರಸ್ತೆ ಇಡೀ ಧೂಳು ಎದ್ದೇಳುತ್ತಿದೆ.

ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಭೂಮಿಪೂಜೆ ನೆರವೇರಿಸಿದ ಕೆಲವೇ ದಿನಗಳಲ್ಲಿ ರಸ್ತೆ ನಿರ್ಮಿಸಲಾಗಿತ್ತು. ಕೆಎಲ್​ಆರ್​ಡಿಆರ್​ ನಿರ್ಮಿತ ಕೇಂದ್ರ ಇಲಾಖೆಯಿಂದ ನಗರದ ಅಭಿವೃದ್ಧಿಗಾಗಿ ಪವನ್​ ಆಸ್ವತ್ರೆ ಮುಂಭಾಗದಿಂದ 16ನೇ ವಾರ್ಡ್​ನ ಜಾಕೀರ್​ ಹುಸೇನ್​ ಮೊಹಲ್ಲಾ ಸಂಪರ್ಕವಿರುವ ಪ್ರಮುಖ ಮುಖ್ಯ ರಸ್ತೆ ವರೆಗೂ ರಸ್ತೆ ನಿರ್ಮಿಸಲಾಗಿತ್ತು.

ತೇಪೆ ಕೆಲಸ ಸಲ್ಲ

ನವ ಕರ್ನಾಟಕ ಸ್ವಾಭಿಮಾನಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾಧಿಕ್​ ಮಾತನಾಡಿ, ಕಾಮಗಾರಿಗೆ ಕಾರ್ಯಾದೇಶವಿಲ್ಲ. ನಾಮಫಲಕ ಅಳವಡಿಸಿಲ್ಲ. ಈ ಹಿಂದೆ ಸಿಮೆಂಟ್​ ರಸ್ತೆ ನಿರ್ಮಾಣ ಮಾಡಿದಾಗ ಸಿಮೆಂಟ್​ ಬೆರೆಸಿಕೊಂಡು ಬರುವ ಲಾರಿಗಳಿಗೆ ಸಮಯ ನಿಗದಿಪಡಿಸಿಲ್ಲ. ತಡವಾಗಿ ಮಿಶ್ರಣ ಮಾಡಿರುವ ಎಂ ಸ್ಯಾಂಡ್​ ಜೆಲ್ಲಿ, ಸಿಮೆಂಟ್​, ತರಿಸಿ ಕಾಮಗಾರಿ ಮಾಡಿದಾಗ ಸಿಮೆಂಟ್​ ಹಿಡಿದುಕೊಳ್ಳದೆ ಹೊಸ ರಸ್ತೆಗೆ ಈ ದುಸ್ಥಿತಿ ಬಂದಿದೆ. ಕಾಮಗಾರಿ ಗುಣಮಟ್ಟವಿಲ್ಲದೆ ಹರಿದುಹೋದ ಬಟ್ಟೆಗೆ ತೇಪೆ ಹಾಕಿದಂತಾಗಿದೆ ಎಂದರು.

ಇದಕ್ಕೂ ಮುನ್ನ ಈ ಹಿಂದೆ ಇದ್ದ ಡಾಂಬರ್​ರಸ್ತೆ ಎಷ್ಟೋ ಚೆನ್ನಾಗಿತ್ತು. ಡಾಂಬರ್​ ರಸ್ತೆ ಉತ್ತಮವಾಗಿದ್ದರೂ ಹಣ ಬಿಡುಗಡೆ ಮಾಡುವ ಉದ್ದೇಶದಿಂದ ಕೈಗೊಂಡ ಸಿಸಿ ರಸ್ತೆ ಕಾಮಗಾರಿ ಕೆಲವೇ ದಿನಗಳಲ್ಲಿ ಹಳ್ಳ ಹಿಡಿದಿರುವುದು ವ್ಯವಸ್ಥೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂಬುದಕ್ಕೆ ಸಾಯಾಗಿದೆ.

ಕಾಮಗಾರಿಯ ಜವಾಬ್ದಾರಿ ಹೊತ್ತ ಉಪಗುತ್ತಿಗೆದಾರ ಸರಿಯಾಗಿ ಸಿಮೆಂಟ್​ ಮಿಶ್ರಣ ಮಾಡಿಸಿಲ್ಲ. ಇವರಿಗೆ ಕಾಂಕ್ರೀಟ್​ ಸರಬರಾಜು ಮಾಡುವ ಚಿಂತಾಮಣಿ ಮೂಲದ ಕಂಪನಿ ಗುಣಮಟ್ಟದ ಕಾಂಕ್ರೀಟ್​ ಸರಬರಾಜು ಮಾಡಿಲ್ಲ.

— ಶ್ರೀನಿವಾಸ್​ ಇಂಜಿನಿಯರ್​, ಕೆಎಲ್​ಆರ್​ಡಿ ಇಲಾಖೆ

16ನೇ ವಾರ್ಡ್​ ಜಾಕೀರ್​ ಹುಸೇನ್​ ಮೊಹಲ್ಲಾದಲ್ಲಿ ಕಳಪೆ ಕಾಮಗಾರಿ ಮಾಡಿದ್ದಾರೆ. ಚರಂಡಿ ನಿರ್ಮಿಸಿಲ್ಲ. ಹಾಕಿದ ರಸ್ತೆಯ ಮೇಲೆ ಮತ್ತೆ ಕಾಂಕ್ರೀಟ್​ ಹಾಕಲು ಬಂದಾಗ ನಾವು ವಿರೋಧಿಸಿದ್ದೇವೆ. ಹಾಗಾಗಿ ಹಾಕಿರುವ ಸಿಮೆಂಟ್​ ರಸ್ತೆ ಕೆಡವಿ ಹೊಸದಾಗಿ ಸಿಮೆಂಟ್​ ರಸ್ತೆ ನಿರ್ಮಿಸಬೇಕು ಎನ್ನುತ್ತಾರೆ ಶಬೀರ್​ ಖಾನ್​.

ಶಾಸಕರಿಗೆ ಅಪಮಾನ ಆಗುವ ಮೊದಲೇ ಗುಣಮಟ್ಟವಾಗಿ ನಿರ್ಮಾಣ ಮಾಡಬೇಕಾಗಿತ್ತು. ಚರಂಡಿ ನಿರ್ಮಾಣ ಮಾಡಿಲ್ಲ. ಕಾಮಗಾರಿ ನಡೆಯುವಾಗ ಸಂಬಂದಿಸಿದ ಇಲಾಖೆ ಇಂಜಿನಿಯರ್​ಗಳು ಏನು ಮಾಡುತ್ತಿದ್ದರು?

— ಮುನಿವೆಂಕಟಪ್ಪ ದಲಿತ ಸಂರ್ಷ ಸಮಿತಿ ಜಿಲ್ಲಾ ಸಂಚಾಲಕ

ಶ್ರೀನಿವಾಸಪುರದಲ್ಲಿ ಇತ್ತೀಚೆಗೆ ನಿರ್ಮಿಸಿದ್ದ ಸಿಸಿ ರಸ್ತೆಯನ್ನು ಒಂದುವಾರದಲ್ಲೇ ಜೆಸಿಬಿಯಿಂದ ಕಿತ್ತಿ ಹಾಕಿರುವುದು.

ಹಣ ಲಪಟಾಯಿಸಲು ರಸ್ತೆ ನಿರ್ಮಾಣವೇ?

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈಗ ಮತ್ತೊಮ್ಮೆ ಗುಣಮಟ್ಟದಲ್ಲಿ ನಿರ್ಮಾಣ ಮಾಡುತ್ತೇವೆ ಎಂದು ರಸ್ತೆ ಅಗೆದರೆ ಯಾರಪ್ಪನ ಮನೆಯ ಹಣ ಖರ್ಚು ಮಾಡುತ್ತೀರಾ?, ಆರಂಭದಲ್ಲಿ ತಲೆಯಲ್ಲಿ ಏನು ಇಟ್ಟುಕೊಂಡಿದ್ದಿರಿ?. ಕೆಲಸ ಮಾಡುವಾಗ ಗುತ್ತಿಗೆದಾರರು, ಇಂಜಿನಿಯರ್​ಗಳು ಎಲ್ಲಿ ಹೋಗಿದ್ದರು?, ಇದೆಲ್ಲವೂ ಹಣ ಲಪಟಾಯಿಸಲು ನಿರ್ಮಿಸಿದ ಕಾಮಗಾರಿಯೇ ಹೊರತು ಜನರಿಗೆ ಒಳ್ಳೆಯದನ್ನು ಮಾಡಲು ನಿರ್ಮಿಸಿದ ಕಾಮಗಾರಿಯಲ್ಲ. ವೈಜ್ಞಾನಿಕವಾಗಿ ನ್ಯಾಯಯುತವಾಗಿ ಕಾಮಗಾರಿ ನಡೆಸಬೇಕಾದರೆ, ಕ್ರಿಯಾಯೋಜನಾ ಪಟ್ಟಿಯಲ್ಲಿ ಚರಂಡಿಗಳ ನಿರ್ಮಾಣ ಏಕೆ ಸೇರಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.