RAMESH-JIGAJINAGI 
ರಾಜ್ಯ

ಕಾಂಗ್ರೆಸ್‌ನಂತೆ ದೇಶದ ಹೆಸರಲ್ಲಿ ಚಿನ್ನ ಕಿತ್ತುಕೊಂಡಿಲ್ಲ...! ಕೈ ನಾಯಕರಿಗೆ ಸಂಸದ ರಮೇಶ ಜಿಗಜಿಣಗಿ ಚಾಟಿ ಏಟು

ಪ್ರಮುಖ ಮುಖ್ಯಾಂಶಗಳು

  • ಪ್ರತಿಪಕ್ಷಗಳ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ
  • ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಲ್ಲ
  • ಭೀಕರ ಬರದಲ್ಲೂ ಚಿನ್ನ ದೇಣಿಗೆ ಪಡೆದಿಲ್ಲ
  • ಕರೋನಾದಲ್ಲೂ ದೇಶದ ಜನರ ಕೈ ಬಿಟ್ಟಿಲ್ಲ
ವಿಜಯಪುರ: ಅಂತಾರಾಷ್ಟ್ರೀಯ ಮಟ್ಟದ ವಿದ್ಯಮಾನಗಳು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ವೆಚ್ಛ ಕಡಿತದ ಜೊತೆಯಲ್ಲಿ ಪೆಟ್ರೋಲ್-ಡಿಸೇಲ್ ವಾಹನಗಳ ಬಳಕೆ ತಗ್ಗಿಸಲು ಮತ್ತು ಚಿನ್ನಾಭರಣ ಖರೀದಿ ಮಿತಗೊಳಿಸಲು ಕರೆ ನೀಡಿದ್ದಾರೆ ವಿನಃ ಕಾಂಗ್ರೆಸ್‌ನಂತೆ ದೇಶದ ಹೆಸರಲ್ಲಿ ಜನರ ಚಿನ್ನಾಭರಣ ಕಿತ್ತುಕೊಂಡಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ದೇಶದ ಆರ್ಥಿಕತೆ ಕುಸಿದಿದೆ ಎಂದು ಕಾಂಗ್ರೆಸ್‌ನಂತೆ ಬಿಜೆಪಿ ಎಂದೂ ಕೈಚೆಲ್ಲಿ ಕುಳಿತಿಲ್ಲ, ತುರ್ತು ಪರಿಸ್ಥಿತಿ ಹೇರಿಲ್ಲ, ಭೀಕರ ಬರದಲ್ಲೂ ದೇಶದ ಹೆಸರಲ್ಲಿ ಚಿನ್ನದ ತುಲಾಭಾರ ಮಾಡಿಸಿಕೊಂಡಿಲ್ಲ, ದೇಣಿಗೆ ಕೇಳಿಲ್ಲ, ರಕ್ಷಣಾ ನಿಧಿ ಸಂಗ್ರಹಿಸಿಲ್ಲ ಎಂದು ಅವರು ಹರಿಹಾಯ್ದಿದ್ದಾರೆ.

ಭೀಕರ ಬರದಲ್ಲೂ ಚಿನ್ನದ ತುಲಾಭಾರ

1962ರಲ್ಲಿ ಭಾರತ ಚೀನಾ ಯುದ್ದದ ಸಂದರ್ಭದಲ್ಲಿ ಪಂಡಿತ ಜವಾಹರಲಾಲ್ ನೆಹರುವ ಅವರ ವಿವೇಚನಾ ರಹಿತ ನಿರ್ಧಾರದಿಂದಾಗಿ ಭಾರತ ಸೋಲುಕಂಡಿತ್ತು. ಪರಿಣಾಮ ದೊಡ್ಡ ಪ್ರಮಾಣದಲ್ಲಿ ರಕ್ಷಣಾ ನಿಧಿ ಸಂಗ್ರಹಿಸಲು ಮುಂದಾಗಿತ್ತು. 1963ರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ರಾಜ್ಯಾದ್ಯಂತ ಸಂಚರಿಸಿ ರಕ್ಷಣಾ ನಿಧಿ ಸಂಗ್ರಹಿಸಿ ಕೊಡುವುದಾಗಿ ವಾಗ್ದಾನ ಮಾಡಿದ್ದರು. ಪರಿಣಾಮ ವಿಜಯಪುರದಲ್ಲಿ ಕೆ.ಬಿ. ಚೌಧರಿ ಸಂಸದರಾಗಿದ್ದಾಗ ವಿಜಯಪುರ ನಗರದಲ್ಲಿ ಜುಲೈ 2 ರಂದು ಇಂದಿರಾ ಗಾಂಧಿ ಹಾಗೂ ಎಸ್.ನಿಜಲಿಂಗಪ್ಪ ಅವರಿಗೆ ಜನ ಚಿನ್ನದಿಂದ ತುಲಾಭಾರ ನೆರವೇರಿಸಿದ್ದರು. ಆಗ ಜಿಲ್ಲೆಯಲ್ಲಿ ಭೀಕರ ಬರಗಾಲವಿತ್ತು. ಆದರೂ ನಮ್ಮ ಜನ ಉದಾರ ಮನೋಭಾವದವರು. ದೇಶಕ್ಕಾಗಿ ಮೈಮೇಲಿನ ಚಿನ್ನಾಭರಣವನ್ನೇ ರಕ್ಷಣಾ ನಿಧಿಗೆ ಅರ್ಪಿಸಿದ್ದರು. ಆದರೆ, ಇಂದು ಅಂಥ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಅವರು ಚಾಟಿ ಬೀಸಿದ್ದಾರೆ.

ತುರ್ತು ಪರಿಸ್ಥಿತಿ ಹೇರಿಲ್ಲ

ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರಿಂದ ನಯಾಪೈಸೆ ನಿಧಿ ಸಂಗ್ರಹಿಸಿಲ್ಲ. ದೇಶದ ಹೆಸರಲ್ಲಿ ಚಿನ್ನದ ತುಲಾಭಾರ ನೆರವೇರಿಸಿಕೊಂಡಿಲ್ಲ. ತುರ್ತು ಪರಿಸ್ಥಿತಿ ಹೇರಿ ಜನರನ್ನು ಬಂಧಿಸಿಲ್ಲ, ವ್ಯಾಪಾರು-ವಹಿವಾಟು ಮೇಲೆ ನಿಷೇಧ ಹೇರಿಲ್ಲ. ಬೀದಿಗಿಳಿದು ಹೋರಾಟ ಮಾಡುವವರನ್ನು ಜೈಲಿಗಟ್ಟಿಲ್ಲ. ಪೆಟ್ರೋಲ್-ಡಿಸೇಲ್ ಕೊರತೆ ಉಂಟಾಗಿಲ್ಲ, ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತಗೊಳಿಸಿಲ್ಲ. ಬದಲಾಗಿ ಖರೀದಿಯನ್ನು ಮಿತಗೊಳಿಸಿ ಎಂದಿದ್ದಾರೆ. ಎಂಥದ್ದೇ ಬಿಕ್ಕಟ್ಟು ಎದುರಾದರೂ ದೇಶ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ವಿನಃ ಜನರಿಗೆ ತೊಂದರೆಯಾಗಲು ಬಿಟ್ಟಿಲ್ಲ ಎಂದು ಟಾಂಗ್ ನೀಡಿದ್ದಾರೆ.

ಮೋದಿಗೆ ಜನ ಬೆಂಬಲ

ಕರೋನಾ ಸಂದರ್ಭದಲ್ಲಿ ಮೋದಿ ಬದಲು ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದೇ ಆದರೆ ದೇಶ ಸ್ಮಶಾನವಾಗಿರುತ್ತಿತ್ತು. ಸಕಾಲಕ್ಕೆ ಆಮ್ಲಜನಕ, ಲಸಿಕೆ ಒದಗಿಸಿದರು. ಇಡೀ ದೇಶದ ಜನ ಮೋದಿಗೆ ಬೆಂಬಲವಾಗಿ ನಿಂತರು. ಕರೋನಾ ವಾರಿಯರ್ಸ್‌ಗಳಿಗೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಹೀಗೆ ಸಂಕಷ್ಟದ ಸ್ಥಿತಿಯಲ್ಲಿ ಪ್ರಧಾನಿ ಮೋದಿ ಬೆನ್ನಿಗೆ ದೇಶದ ಜನ ನಿಲುತ್ತಿರುವುದನ್ನು ಸಹಿಸಲಾಗದ ಕಾಂಗ್ರೆಸ್ಸಿಗರು ಹೊಟ್ಟೆಕಿಚ್ಚಿನಿಂದ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮೋದಿ ಚಪ್ಪಾಳೆ ತಟ್ಟಿ, ಗಂಟೆ ಭಾರಿಸಿ ಎಂದಿದ್ದು ಕರೋನಾ ವಾರಿಯರ್ಸ್‌ಗೆ ಅಭಿನಂದಿಸುವುದಕ್ಕೋಸ್ಕರವೇ ವಿನಃ ಅಸಹಾಯಕತೆಯಿಂದಲ್ಲ. ಹಾಗೆ ಅಸಹಾಯಕತೆಯಿಂದ ಜನರಿಂದ ಚಿನ್ನದ ತುಲಾಭಾರ ನೆರವೇರಿಸಿಕೊಳ್ಳಲು, ರಕ್ಷಣಾ ನಿಧಿ ಸಂಗ್ರಹಿಸಲು ಇಂದು ದೇಶದಲ್ಲಿ ಅಸಮರ್ಥ ಕಾಂಗ್ರೆಸ್ ಆಡಳಿತಾವಧಿಯಿಲ್ಲ. ಸಬ್ ಕಾ ಸಾಥ್, ಸಬ್‌ಕಾ ವಿಕಾಸ, ಮೇಕ್ ಇನ್ ಇಂಡಿಯಾ ಹೆಸರಲ್ಲಿ ಸದೃಢ ಭಾರತ ನಿರ್ಮಿಸಲು ಕಂಕಣಬದ್ಧರಾಗಿರುವ ಸದೃಢ ನಾಯಕ ನರೇಂದ್ರ ಮೋದಿ ಆಡಳಿತ ಎಂಬುದು ನೆನಪಿರಲಿ ಎಂದು ಅವರು ಪ್ರಕಟಣೆ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.