ಆಳಂದನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಕಣ್ಣೀರಿಟ್ಟ ಗೋವಿಂದ ಪೂಜಾರಿ&ಚತುರಾಬಾಯಿ ವೃದ್ಧ ದಂಪತಿ.
- ಹೆತ್ತ ಮಕ್ಕಳ ಕಿರುಕುಳಕ್ಕೆ ಕಣ್ಣೀರಿಟ್ಟ ವೃದ್ಧ ದಂಪತಿ ಗೋವಿಂದ-ಚತುರಾಬಾಯಿ
ಆಳಂದ: ನಮಗೆ ನಾಲ್ವರು ಮಕ್ಕಳಿದ್ದು, ನಿತ್ಯವೂ ಅವಾಚ್ಯ ಪದಗಳಿಂದ ನಿಂದಿಸುತ್ತಾರೆ, ಹೊಡೆಯುತ್ತಾರೆ, ಕುತ್ತಿಗೆ ಹಿಡಿದು ಕೊಲ್ಲಲು ಪ್ರಯತ್ನಿಸುತ್ತಾರೆ. ಹೀಗಾಗಿ ನಮಗೆ ಮಕ್ಕಳಿಂದ ಮುಕ್ತಿ ಕೊಡಿಸಿ ಎಂದು ವೃದ್ಧ ದಂಪತಿ ಗೋವಿಂದ ಪೂಜಾರಿ, ಚತುರಾಬಾಯಿ ಕಣ್ಣೀರಿಟ್ಟು ಬೇಡಿಕೊಂಡರು.
ನಮ್ಮದು ಮಹಾರಾಷ್ಟ್ರದ ಗಡಿಭಾಗವಾದ ತಡೋಳ ಗ್ರಾಮವಾಗಿದ್ದು, ಬೀರಪ್ಪ ಪೂಜಾರಿ, ಈರಣ್ಣ ಪೂಜಾರಿ, ನಿಂಗಪ್ಪ ಪೂಜಾರಿ, ಯಲ್ಲಪ್ಪ ಪೂಜಾರಿ ಎಂಬ ನಾಲ್ವರು ಮಕ್ಕಳಿದ್ದಾರೆ. ಯಲ್ಲಪ್ಪ ಎಂಬಾತ ಹೊರತು ಪಡಿಸಿ ಇನ್ನುಳಿದವರು ನಿತ್ಯವೂ ಹಿಂಸೆ ನೀಡುತ್ತಿದ್ದಾರೆ. ಇವರ ಕಾಟ ತಾಳಲಾರದೆ ಮನೆ ಬಿಟ್ಟು ಹೊಲದಲ್ಲಿಯೇ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದೇವೆ. ಆಳಂದ ಠಾಣೆಯಲ್ಲಿ ಕೇಸ್ ದಾಖಲಿಸಲು ಹೋದರೆ ಪೊಲೀಸರು ದೂರು ತೆಗೆದುಕೊಳ್ಳಿತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ಮಕ್ಕಳ ಕಾಟ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ, ಪೊಲೀಸರೇ ಬಂದು ರಕ್ಷಣೆ ಮಾಡಿದ್ದಾರೆ. ಆದರೆ ನಮ್ಮ ದೂರು ತೆಗೆದುಕೊಂಡಿಲ್ಲ. ಇದ್ದ 6 ಎಕರೆ ಆಸ್ತಿಯನ್ನು ಮಕ್ಕಳಿಗೆ ಕೊಟ್ಟಿದ್ದೇನೆ. ಆದರೂ ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಗ್ರಾಮದ ಹಿರಿಯರೆಲ್ಲರೂ ಕರೆದು ಬುದ್ಧಿವಾದ ಹೇಳಿದರೂ ಕೇಳಿಲ್ಲ. ಮಕ್ಕಳಿಂದ ನಮಗೆ ಯಾವುದೇ ತೊಂದರೆ ಆಗದ ಹಾಗೆ ವ್ಯವಸ್ಥೆ ಮಾಡಿಕೊಡಿ, ಸೂಕ್ತ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ನಾವಿಬ್ಬರೂ ಆತ್ಮಹತ್ಯೆ ದಾರಿ ಹಿಡಿಯುತ್ತೇವೆ ಎಂದು ಹೇಳಿದರು.
ಆಳಂದ ತಾಲೂಕಿನ ತಡೋಳದ ಗೋವಿಂದ ಪೂಜಾರಿ ಹಾಗೂ ಅವರ ಮಕ್ಕಳ ಮಧ್ಯೆ ಕೌಟುಂಬಿಕ ಕಲಹವಿದ್ದು, ಸುಮಾರು ಒಂದು ವರ್ಷದಿಂದ ಸಮಸ್ಯೆಯಿದೆ. ಈಗಾಗಲೇ ಮಕ್ಕಳಾದ ಬೀರಪ್ಪ, ಈರಣ್ಣ, ನಿಂಗಪ್ಪ ಅವರನ್ನು ಕರೆಸಿ ತಿಳಿವಳಿಕೆ ಹೇಳಿದ್ದೇವೆ. ಇವರ ತಂದೆ -ತಾಯಿಗೂ ತಿಳಿಹೇಳಿದ್ದೇವೆ. ಈವರೆಗೂ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಇದೀಗ ಮತ್ತೆ ಕಲಹ ಉಂಟಾಗಿದ್ದು, ಮತ್ತೊಮ್ಮೆ ಮಕ್ಕಳನ್ನು ಕರೆದು ತಂದೆ-ತಾಯಿಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ತಿಳಿಹೇಳುತ್ತೇವೆ.