ಅನ್ಯ ರಾಜ್ಯಗಳ ಸಿಎಂ, 45 ಸಿನಿ ತಾರೆಯರು: ಈ ಬಾರಿಯ ಜಂಬೂ ಸವಾರಿ ಮೆರವಣಿಗೆಯ ಮೊದಲುಗಳಿವು  
ರಾಜ್ಯ

ಅನ್ಯ ರಾಜ್ಯಗಳ ಸಿಎಂ, 45 ಸಿನಿ ತಾರೆಯರು: ಈ ಬಾರಿಯ ಜಂಬೂ ಸವಾರಿ ಮೆರವಣಿಗೆಯ ಮೊದಲುಗಳಿವು | Mysuru Dasara

ಇಂದು ಮಧ್ಯಾಹ್ನ 1.36ರಿಂದ 1.56ರ ವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಗುವುದು.

ಮೈಸೂರು: ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಮೆರವಣಿಗೆಗಾಗಿ ಇದೀಗ ಅರಮನೆ ನಗರಿ ಮೈಸೂರು ಸಕಲ ರೀತಿಯಲ್ಲಿ ಸಿದ್ಧಗೊಂಡಿದ್ದು, ಪ್ರಪ್ರಥಮ ಬಾರಿಗೆ ನಾಡದೇವತೆ, ತಾಯಿ ಚಾಮುಂಡಿಯನ್ನು ಹೊರಲು ಕ್ಯಾಪ್ಟನ್​ ಪ್ರಶಾಂತ ಆನೆ ಸಜ್ಜಾಗಿದೆ. ಈ ಮಧ್ಯೆ, 2026ರ ದಸರಾ ಮಹೋತ್ಸವದಲ್ಲಿ ಹಲವು ಮೊದಲಗಳನ್ನು ತಂದಿರುವುದು ಇದೀಗ ಜನರ ಗಮನ ಸೆಳೆದಿವೆ.

ಇಂದು ಮಧ್ಯಾಹ್ನ 1.36ರಿಂದ 1.56ರ ವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಗುವುದು. ಬಳಿಕ ಅರಮನೆ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿ, ಗಜಪಡೆಯ ನಾಯಕ ‘ಪ್ರಶಾಂತ’ ಆನೆ ಹೊತ್ತುಕೊಳ್ಳುವ ಅಂಬಾರಿಯಲ್ಲಿ ನಾಡದೇವಿ ಚಾಮುಂಡಿದೇವಿಗೆ ಸಂಜೆ 4.10ರಿಂದ 4.35ರ ಒಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುಷ್ಪ ನಮನ ಸಲ್ಲಿಸಿದ್ದಾರೆ. ಆ ನಂತರ ಮೆರವಣಿಗೆ ಸಾಗಲಿದೆ.

12 ಸಾಲಾಂಕೃತ ಆನೆಗಳು, ಕರುನಾಡಿನ ಪರಂಪರೆ ಅನಾವರಣಗೊಳಿಸುವ ಸ್ತಬ್ಧಚಿತ್ರಗಳು, ವಿವಿಧ ಜಾನಪದ ಕಲಾತಂಡಗಳು ಅರಮನೆಯಿಂದ ಅಂದಾಜು 5 ಕಿ.ಮೀ. ದೂರದ ಬನ್ನಿಮಂಟಪವರೆಗೆ ದಿಬ್ಬಣದೊಂದಿಗೆ ಹೆಜ್ಜೆ ಹಾಕಲಿದೆ. ಇದು ಜಂಬೂಸವಾರಿಯನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಸೇರಿರುವ ಜನರ ಕಣ್ಣಿಗೆ ಹಬ್ಬದ ವೈಭೋಗ ನೀಡಲಿದೆ. ಈ ವಿಜೃಂಭಣೆಯ ಮೆರವಣಿಗೆಯ ಚೆಲುವು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಬಂದಿರುವ ಜನರು ತೀವ್ರ ಕಾತರದಿಂದ ಕಾಯತೊಡಗಿದ್ದಾರೆ.

ಇದೇ ಸಮಯದಲ್ಲಿ ಈ ಬಾರಿಯ ದಸರಾದಲ್ಲಿ ಕೆಲವು ಮೊದಲುಗಳನ್ನು ತಂದಿರುವ ರಾಜ್ಯ ಸರ್ಕಾರ, ಅನ್ಯ ರಾಜ್ಯಗಳ ಮುಖ್ಯಮಂತ್ರಿಗಳು, ಕನ್ನಡ ಚಿತ್ರರಂಗದ 40ಕ್ಕೂ ಹೆಚ್ಚು ಸಿನಿತಾರೆಯರ ದಂಡನ್ನು ಕರೆಸಿರುವುದು ಸೇರಿದಂತೆ ಹೊಸ ಹೊಸ ಗಮನ ಸೆಳೆಯುವಂತೆ ವಿಷಯಗಳನ್ನು ಸೇರಿಸಿರುವುದು ಜನರಲ್ಲಿ ಕುತೂಹಲ ಕೆರಳಿಸಿವೆ.

ಈ ಬಾರಿಯ ದಸರಾದ ಮೊದಲುಗಳೇನು?

  • ದೇಶದ ರಕ್ಷಣೆಯ ಮೂರು ಪಡೆಗಳೂ ಭಾಗಿಯಾಗುತ್ತಿರುವುದು ಈ ಸಲದ ವಿಶೇಷ. ಭೂಸೇನೆ, ನೌಕಾಸೇನೆ, ವಾಯುಸೇನೆಯ ತುಕಡಿಗಳು ಹೆಜ್ಜೆ ಹಾಕಿ ದೇಶದ ಗಮನ ಸೆಳೆಯಲಿವೆ.

  • ಅನ್ಯ ರಾಜ್ಯಗಳ ಸ್ತಬ್ಧಚಿತ್ರಗಳೂ ಭಾಗಿಯಾಗುವುದು ಈ ಸಲ ಮತ್ತೊಂದು ವಿಶೇಷ. ಇಷ್ಟು ದಿನ ನಾಡಿನ ವಿವಿಧ ಜಿಲ್ಲೆಗಳ, ಇಲಾಖೆಯ ಸ್ತಬ್ಧಚಿತ್ರಗಳು ಮಾತ್ರ ಭಾಗಿಯಾಗುತ್ತಿದ್ದವು. ಇದೇ ಪ್ರಥಮ ಬಾರಿಗೆ ಬೇರೆ ರಾಜ್ಯಗಳ ಟ್ಯಾಬ್ಲೋಗಳು ಸಾಗುವ ಮೂಲಕ ಆಯಾಯ ರಾಜ್ಯದ ಸಂಸ್ಕೃತಿಯನ್ನೂ ಪರಿಚಯಿಸಲಾಗುತ್ತಿದೆ

  • ವಿಜಯದಶಮಿ ಮೆರವಣಿಗೆ ದಕ್ಷಿಣ ಭಾರತದ ಮುಖ್ಯಮಂತ್ರಿಗಳೂ ಸಹ ಸಾಕ್ಷಿಯಾಗಲಿದ್ದಾರೆ. ಕೇರಳ, ತೆಲಂಗಾಣ ಸಿಎಂಗಳು ಆಗಮನ ಖಚಿತ ಎನ್ನಲಾಗಿದೆ.

  • ಹೊರ ದೇಶಗಳ ರಾಯಭಾರಿಗಳೂ ಭಾಗಿ. ಇದು ಮೊದಲ ವೈಶಿಷ್ಟವೇ.

  • ಸಿನಿ ತಾರೆಯರ ದಂಡು. 45 ಚಿತ್ರರಂಗದ ನಟ-ನಟಿಯರು ಪಾಲ್ಗೊಳ್ಳುತ್ತಿರುವುದು ಇದೇ ಪ್ರಥಮ.