DCM D.K. Shivakumar | ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಜಮೀರ್ ಅಹ್ಮದ್​ 
ರಾಜ್ಯ

ನನ್ನ ಹಾಗೂ ಜಮೀರ್ ಮಧ್ಯೆ ಯಾವ ಗಲಾಟೆಯೂ ನಡೆದಿಲ್ಲ; ಇದೆಲ್ಲಾ ಮಾಧ್ಯಮಗಳ ಸೃಷ್ಠಿ : ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ | DCM D.K. Shivakumar

ನವದೆಹಲಿ/ಬೆಂಗಳೂರು: ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನನ್ನ ಹಾಗೂ ಸಚಿವ ಜಮೀರ್ ಅಹ್ಮದ್​ ಮಧ್ಯೆ ಯಾವುದೇ ರೀತಿಯ ಗಲಾಟೆ ನಡೆದಿಲ್ಲ, ಇದೆಲ್ಲಾ ಮಾಧ್ಯಮಗಳ ಸೃಷ್ಠಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆಶಿ, ಈ ವಿಚಾರವಾಗಿ ಪತ್ರಿಕೆಗಳಲ್ಲಿ ಸುಳ್ಳು ಬರೆಯಲಾಗಿದ್ದು, ಪಾಪ, ಜಮೀರ್ ನನ್ನ ಜತೆ ಮಾತನಾಡಿಲ್ಲ, ಈ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯೂ ಆಗಿಲ್ಲ. ನನ್ನ ಕುಟುಂಬದ ಕೆಲಸದ ಹಿನ್ನೆಲೆಯಲ್ಲಿ ಸಂಪುಟ ಸಭೆ ಮುಗಿಸಿಕೊಂಡು ನಾನು ಬೇಗ ಹೋದೆ. ಅದರ ಹೊರತಾಗಿ ಬೇರೆ ಯಾವ ವಿಚಾರವೂ ಇಲ್ಲ. ಹೈಕಮಾಂಡ್ ಯಾವ ತೀರ್ಮಾನ ನೀಡಿರುತ್ತದೋ ಅದರಂತೆ ಸಿಎಂ ಹಾಗೂ ಪಕ್ಷ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ರಕ್ಷಕ

ಅಲ್ಪಸಂಖ್ಯಾತ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿಗಳು, ಪ್ರತಿ ಸಂದರ್ಭದಲ್ಲಿ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಪಕ್ಷದಷ್ಟು ಬೇರೆ ಯಾರೂ ರಕ್ಷಣೆ ಮಾಡಿಲ್ಲ. ಹಿಂದೆಯೂ ಬೇರೆಯವರು ಮಾಡಿಲ್ಲ, ಮುಂದೆಯೂ ಮಾಡಲು ಆಗುವುದಿಲ್ಲ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿರುವುದು ನಿಜ. ಆದರೆ ಕಳೆದ 30-40 ವರ್ಷಗಳಿಂದ ಶಾಮನೂರು ಶಿವಶಂಕರಪ್ಪನವರು ಆ ಕ್ಷೇತ್ರವನ್ನು ಕಾಪಾಡಿಕೊಂಡು ಬಂದಿದ್ದಾರೆ. ಜಮೀರ್, ನಸೀರ್ ಹಾಗೂ ಜಬ್ಬಾರ್ ಅವರ ಒಪ್ಪಿದ ಬಳಿಕವೇ ನಾವು ಟಿಕೆಟ್ ನೀಡಿದ್ದೇವೆ ಎಂದು ತಿಳಿಸಿದರು.
ಫಲಿತಾಂಶ ಬರುವ ಮುಂಚೆಯೇ ಅನೇಕ ನಾಯಕರ ತಲೆದಂಡ ಆಗಿದ್ದು ಯಾಕೆ ಆತುರದ ಕ್ರಮ ಎಂದು ಕೇಳಿದಾಗ, ಕೆಲವು ವರದಿಗಳ ಆಧಾರದ ಮೇಲೆ ಹೈಕಮಾಂಡ್ ನಾಯಕರು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.