ಕಲಬುರಗಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್​ ಅಧ್ಯಕ್ಷತೆಯಲ್ಲಿ ಗುರುವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಮಾನಪ್ಪ ಕಟ್ಟಿಮನಿ, ಶೈಲೇಂದ್ರಸಿಂಗ್​ ಇದ್ದರು. 
ರಾಜ್ಯ

ಕುಡಿಯುವ ನೀರಿನ ಸಮಸ್ಯೆ ಆಗಕೂಡದು

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಲ್ಲಮಪ್ರಭು ಪಾಟೀಲ್​ ಖಡಕ್​ ಸೂಚನೆ
  • ತಾಲೂಕು ಪಂಚಾಯಿತಿಯಲ್ಲಿ ಪ್ರಗತಿ ಪರಿಶೀಲನೆ
ಕಲಬುರಗಿ: ನಗರದ ದಕ್ಷಿಣ ಮತಕ್ಷೇತ್ರದಲ್ಲಿ ಬರುವ 33 ವಾರ್ಡ್​ ಹಾಗೂ ಎಲ್ಲಾ 28 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್​ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಲಬುರಗಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಗ್ರಾಮೀಣ ಭಾಗದ 28 ಹಳ್ಳಿಗಳಲ್ಲಿ ನೀರಿನ ತೊಂದರೆ ಇದೆ. ನಗರದ ಹಲವು ವಾರ್ಡ್​ಗಳಲ್ಲೂ ಸಮಸ್ಯೆ ಉಲ್ಬಣಿಸಿದೆ. ಜನ ಟ್ಯಾಂಕರ್​ ಮೊರೆ ಹೋಗಿದ್ದಾರೆ. ನಗರದಲ್ಲಿ ಶೇ.60ರಷ್ಟು ಕೊಳವೆ ಬಾವಿ ಬತ್ತಿವೆ. ಇವನ್ನೆಲ್ಲ ಗಮನಿಸಿ ಜನ, ಜಾನುವಾರುಗಳಿಗೆ ಸಮಸ್ಯೆ ಕಾಡದಂತೆ ಕೆಲಸ ಮಾಡಬೇಕು ಎಂದು ಹೇಳಿದರು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಒಳ್ಳೆಯ ನೀರಿನ ಮೂಲ ಇರುವ ಕೊಳವೆಬಾವಿ ಹುಡುಕಿ ಅದನ್ನು ಬಾಡಿಗೆ ಪಡೆದು ಪೈಪ್​ಲೈನ್​ ಮಾಡಿ ನೀರು ಪೂರೈಸಿ. ನೀರಿನ ಕೆಲಸಕ್ಕೆ ಹಣದ ಕೊರತೆ ಇಲ್ಲ. ಗುಳೆ ಹೋಗುವುದನ್ನು ತಪ್ಪಿಸಿ, ಬೇಗ ಕಾರ್ಮಿಕರಿಗೆ ಕೆಲಸ ಕೊಡಲು ಖಾತ್ರಿ ರೋಜಗಾರ್​ ಯೋಜನೆ ಅಡಿ ಕೆಲಸ ಆರಂಭಿಸಿ ಎಂದು ಸೂಚಿಸಿದರು.
ರೈತರು ಹವಾಮಾನ ಆಧಾರಿತ ಬೆಳೆವಿಮೆಗೆ ಹೆಸರು ನೋಂದಣಿಗೆ ಮನವಿ ಮಾಡಿದ ಶಾಸಕರು ಬೆಳೆವಿಮೆ ಉಳಿದ 365 ಕೋಟಿ ರೂ. ಪೈಕಿ 225 ಕೋಟಿ ರೂ. ಶೀಘ್ರ ಬಿಡುಗಡೆಗೆ ಸಿಎಂ ಆಶ್ವಾಸನೆ ನೀಡಿದ್ದಾರೆ. ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ರೈತರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು.
ಕುಡಾ ಆಯುಕ್ತ ಶೈಲೆಂದ್ರಸಿಂಗ್​, ತಾಪಂ ಇಒ ಮಾನಪ್ಪ ಕಟ್ಟಿಮನಿ, ಗ್ರಾಮೀಣ ಕುಡಿಯುವ ನೀರು ಎಇಇ ರಾಮಚಂದ್ರ ಇತರರಿದ್ದರು.
"

ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಯೋಗ್ಯ ಮತದಾರರು ಯಾವ ಕಾರಣಕ್ಕೂ ಕೈ ಬಿಟ್ಟು ಹೋಗದಂತೆ ಸೂಕ್ತ ಕಾಳಜಿ ವಹಿಸಬೇಕು. ಜನತೆಗೆ ತಿಳಿವಳಿಕೆ ನೀಡಿ ಎಸ್​ಐಆರ್​ ಪ್ರಕ್ರಿಯೆ ನಡೆಸಬೇಕು.

— ಅಲ್ಲಮಪ್ರಭು ಪಾಟೀಲ್​, ಶಾಸಕ, ಕಲಬುರಗಿ.