- ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹೇಳಿಕೆ
- ಜಿಲ್ಲೆಯಲ್ಲಿ 8.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ
ಕಲಬುರಗಿ: ಜಿಲ್ಲೆಯಲ್ಲಿ ಪ್ರಸಕ್ತ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಪ್ರಮುಖವಾಗಿ ತೊಗರಿ, ಹೆಸರು, ಉದ್ದು, ಹತ್ತಿ, ಸೋಯಾಬೀನ್ ಬೆಳೆ ಸೇರಿ ಒಟ್ಟು 8.90 ಲ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ತೊಗರಿ 6.3 ಲ ಹೆಕ್ಟೇರ್, ಹೆಸರು 54ಸಾವಿರ ಹೆಕ್ಟೇರ್, ಉದ್ದು 25 ಸಾವಿರ ಹೆಕ್ಟೇರ್, ಸೋಯಾಬೀನ್ 23 ಸಾವಿರ ಹೆಕ್ಟೇರ್ ಹಾಗೂ ಹತ್ತಿ 1.22 ಲ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಮುಂಗಾರು ಬಿತ್ತನೆಗೆ ಕೃಷಿ ಇಲಾಖೆಯಿಂದ ವ್ಯಾಪಕ ಸಿದ್ಧತೆ ಕೈಗೊಳ್ಳಲಾಗಿದ್ದು, ಮುಂಗಾರು ಹಂಗಾಮಿಗೆ ಜಿಲ್ಲೆಗೆ ಒಟ್ಟು 22,828.03 ಕ್ವಿಂಟಲ್ ಬಿತ್ತನೆ ಬೀಜ ಹಂಚಿಕೆ ಮಾಡಲಾಗಿದೆ. ಇದರಲ್ಲಿ ತೊಗರಿ 6,011.17 ಕ್ವಿಂಟಲ್, ಹೆಸರು 535.93 ಕ್ವಿಂಟಲ್, ಉದ್ದು 379.40 ಕ್ವಿಂಟಲ್ ಹಾಗೂ ಸೋಯಾಬೀನ್ 15,681.64 ಕ್ವಿಂಟಲ್ ಸೇರಿದೆ. ಈಗಾಗಲೇ ಒಟ್ಟು 22,608.14 ಕ್ವಿಂಟಲ್ ಬೀಜಗಳ ಇಂಡೆಂಟ್ ನೀಡಲಾಗಿದ್ದು, ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ (ಆರ್ಎಸ್ಕೆ) ಸಮರ್ಪಕ ದಾಸ್ತಾನು ಮಾಡಲಾಗಿದ್ದು, ಯಾವುದೇ ರೀತಿಯ ಕೊರತೆ ಇಲ್ಲ. ಹೀಗಾಗಿ ರೈತರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಕ್ರಮ
ಜಿಲ್ಲೆಯಲ್ಲಿ ಯಾವುದೇ ಕೃಷಿ ಪರಿಕರ ಮಾರಾಟ ಅಂಗಡಿಯವರು ರಸಗೊಬ್ಬರವನ್ನು ಹೆಚ್ಚಿನ್ ದರದಲ್ಲಿ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೆ ಕಳೆದ ವಾರ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಜಿಲ್ಲೆಯ ಜೇವರ್ಗಿ, ಯಡ್ರಾಮಿ, ಚಿತ್ತಾಪುರ, ಸೇಡಂ ತಾಲೂಕಿನಲ್ಲಿ ದಾಳಿ ಮಾಡಿ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ 26 ಅಂಗಡಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಜತೆಗೆ ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿದ್ದ ರಸಗೊಬ್ಬರವನ್ನು ಶಂಕಾಸ್ಪಗೊಂಡು ಪ್ರಸ್ತುತ ಮಾರಾಟ ಮಾಡದಂತೆ ತಡೆ ಆದೇಶ ನೀಡಿದೆ. ಇದು ನಿರಂತರವಾಗಿ ನಡೆಯುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಪ್ರಸಕ್ತ 2026&27ನೇ ಸಾಲಿಗೆ ಜಿಲ್ಲೆಗೆ ಒಟ್ಟು 99,863 ಮೆಟ್ರಿಕ್ ಟನ್ ರಸಗೊಬ್ಬರ ಹಂಚಿಕೆ ಮಾಡಲಾಗಿದೆ. ಜೂನ್ ಅಂತ್ಯದವರೆಗೆ ಒಟ್ಟು 50,297 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದ್ದು, ಆರಂಭಿಕ ಶುಲ್ಕ ಒಳಗೊಂಡಂತೆ ಒಟ್ಟು 59,402 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದೆ. ಇದರಲ್ಲಿ ಈಗಾಗಲೇ 21,051 ಮೆಟ್ರಿಕ್ ಟನ್ ರಸಗೊಬ್ಬರ ರೈತರಿಗೆ ವಿತರಿಸಲಾಗಿದೆ. ಇನ್ನುಳಿದಂತೆ 11,634 ಮೆ.ಟನ್ ಯೂರಿಯಾ, 9,583 ಮೆ.ಟನ್ ಡಿಎಪಿ ಹಾಗೂ 13,990 ಮೆ.ಟನ್ ಕಾಂಪ್ಲೆಕ್ಸ್ ಸೇರಿ ಒಟ್ಟು 38,351 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ಹೀಗಾಗಿ ಆತಂಕ ಬೇಡ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಂಕನೂರ್, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಇದ್ದರು.
"
ಜಿಲ್ಲೆಯಲ್ಲಿ ರಸಗೊಬ್ಬರದ ಅಭಾವವಿಲ್ಲದಿದ್ದರೂ, ಡಿಎಪಿ ಹಾಗೂ ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ಗೊಬ್ಬರ ಬಳಸಲು ರೈತರಲ್ಲಿ ಜಾಗೃತಿ ಮೂಡಿಸಲು ಗ್ರಾಮವಾರು ವ್ಯಾಪಕ ಪ್ರಚಾರ ಕಾರ್ಯ ಕೃಷಿ ಇಲಾಖೆ ಕೈಗೊಳ್ಳುತ್ತಿದೆ.
— ಇಕ್ರಮ್ ಶರೀಫ್, ಜಿಲ್ಲಾಧಿಕಾರಿ, ಕಲಬುರಗಿ.