ಬಸವಕಲ್ಯಾಣದ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಮುಂಗಾರು ಬಿತ್ತನೆ ಬೀಜ ವಿತರಣೆಗೆ ಶಾಸಕ ಶರಣು ಸಲಗರ ಚಾಲನೆ ನೀಡಿದರು. ಉಪ ಕೃಷಿ ನಿರ್ದೇಶಕ ಸೂರ್ಯಕಾಂತ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಗೌತಮ, ಕಾರ್ಯನಿರ್ವಾಹಣಾಧಿಕಾರಿ ರಮೇಶ ಸುಲ್ಫಿ, ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವರಾಜ ಪಲ್ಲೇರಿ ಇತರರಿದ್ದರು.
- ಶಾಸಕ ಸಲಗರ ಹೇಳಿಕೆ
- ಕಲ್ಯಾಣದಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟದ ಉದ್ಘಾಟನೆ
ಬಸವಕಲ್ಯಾಣ: ಮುಂಗಾರು ಹಂಗಾಮು ಬಿತ್ತನೆ ಕಾರ್ಯಕ್ಕೆ ಅಗತ್ಯವಾದ ಬೀಜ ಮತ್ತು ರಸಗೊಬ್ಬರದ ಯಾವುದೇ ಕೊರತೆ ಇಲ್ಲ. ಬಿತ್ತನೆಗೆ ಸಮರ್ಪಕ ಮಳೆ ಆದ ನಂತರ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು ಎಂದು ಶಾಸಕ ಶರಣು ಸಲಗರ ಸಲಹೆ ನೀಡಿದರು.
ಬುಧವಾರ ನಗರದ ಬಂದವರ ಒಣಿ ಬಳಿ ನೂತನ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡದ ಉದ್ಘಾಟಿಸಿ, ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬೇಕಾದಷ್ಟು ದಾಸ್ತಾನು ಲಭ್ಯವಿದೆ. ಕೆಲವು ವದಂತಿಗಳಿಗೆ ಕಿವಿಗೊಡದೆ ರೈತರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ರೈತರಿಗೆ ಬೀಜ ಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಸೋಯಾಅವರೆ, ತೊಗರಿ, ಉದ್ದು ಮತ್ತು ಹೆಸರು ಪ್ರಮುಖ ಬೆಳೆಗಳಾಗಿದ್ದು, 16,300 ಕ್ವಿಂಟಾಲ್ ಸೋಯಾಅವರೆ ಬೇಡಿಕೆಯಿದೆ. ಇದುವರೆಗೆ 13,500 ಕ್ವಿಂಟಾಲ್ ತಾಲೂಕಿನ 6 ರೈತ ಸಂಪರ್ಕ ಕೇಂದ್ರ ಮತ್ತು 20 ಹೆಚ್ಚುವರಿ ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿ ದಾಸ್ತಾನು ಆಗಿದೆ. ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಉಪ ಕೃಷಿ ನಿರ್ದೇಶಕ ಸೂರ್ಯಕಾಂತ ಬಿರಾದಾರ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಗೌತಮ, ಕಾರ್ಯನಿರ್ವಾಹಣಾಧಿಕಾರಿ ರಮೇಶ ಸುಲ್ಫಿ, ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವರಾಜ ಪಲ್ಲೇರಿ, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಶ್ರೀಮಂತ ಚಿಲ್ಲಾಬಟ್ಟೆ, ವೀರಾರೆಡ್ಡಿ ಪಾಟೀಲ್ ಇತರರು ಪಾಲ್ಗೊ ಂಡಿದ್ದರು.