ಸರಿ. ಅಟ್ಟು ಉಣ್ಣುವ ಪ್ರಸ್ತಾವ ಈಗೇಕೆ ಬಂತೆಂದರೆ, ಕನಕದಾಸರು ಒಂದುವೇಳೆ ಈಗೇನಾದರೂ ನಮ್ಮೊಂದಿಗೆ ಇದ್ದಿದ್ದರೆ ‘ಅಟ್ಟು ಉಣ್ಣದ ವಸ್ತುಗಳಿಲ್ಲ’ ಎನ್ನುವುದಕ್ಕಿಂತ ‘ಅಟ್ಟು ಉಣ್ಣುವುದಕ್ಕೆ ಅಂಡೆಯೊಳು ಅನಿಲವಿಲ್ಲ’ ಎನ್ನುತ್ತಿದ್ದರೇನೋ! ಹಾಗಾಗಿದೆ ಇಂದಿನ ಪರಿಸ್ಥಿತಿ. ಅಪ್ಪ-ಅಮ್ಮ ಜಗಳದಲಿ ಕೂಸು ಬಡವಾಯ್ತಂತೆ; ಇರಾನ್-ಇಸ್ರೇಲ್/ಅಮೆರಿಕ ಯುದ್ಧದಿಂದಾಗಿ ಪ್ರಪಂಚವೆಲ್ಲ ಪರದಾಡಬೇಕಾಯ್ತು. ಅದಿರಲಿ, ಅಂಡೆಯೊಳು ಅನಿಲವಿಲ್ಲ ಅಂದ್ರೇನು? ಸಿಲಿಂಡರ್ನಲ್ಲಿ ಗ್ಯಾಸ್ ಮುಗಿದಿದೆ, ಅಡುಗೆ ಮಾಡಲಿಕ್ಕೆ ಇಂಧನವಿಲ್ಲ ಅಂತ! Cylinder ಎಂದರೆ ಅಂಡೆ. ತುಳು ಭಾಷಿಗರು ಸಾಂದ್ರವಾಗಿರುವ ಕರಾವಳಿ ಪ್ರದೇಶದಲ್ಲಿ ನಿಮಗೆ ಸಿಲಿಂಡರ್ಗಿಂತ ‘ಅಂಡೆ’ಯೇ ಹೆಚ್ಚಾಗಿ ಕೇಳಿಬರುವ ಪದ. ಗ್ಯಾಸ್ ಎಂದು ಇಂಗ್ಲಿಷ್ ಪದ ಬಳಸಿದರೂ ‘ಗ್ಯಾಸ್ದ ಅಂಡೆ’ ಎನ್ನುವಾಗ ಅಂಡೆಯೇ ಹೊರತು ಸಿಲಿಂಡರ್ ಅಲ್ಲ. ಹಾಗಂತ ಅಂಡೆ ಪದ ತುಳುವಿಗಷ್ಟೇ ಸೀಮಿತವೇನಲ್ಲ. ಕಸಾಪ ನಿಘಂಟುವಿನ ಪ್ರಕಾರ ‘ಟೊಳ್ಳಾದ ಬೊಂಬಿನಿಂದ ಅಥವಾ ಲೋಹದಿಂದ ಮಾಡಿದ, ಸಾಧಾರಣವಾಗಿ ಹಿಡಿಯಿಂದ ಕೂಡಿದ, ಉದ್ದವಾದ ಪಾತ್ರೆ’ ಎಂಬ ಅರ್ಥವುಳ್ಳದ್ದು ಕನ್ನಡದ ಅಂಡೆ. ತಮಿಳಿನ ಅಣ್ಡೈ ಮತ್ತು ತುಳುವಿನ ಅಂಡೆ ಇದರ ದ್ರಾವಿಡ ದಾಯಾದಿಗಳು. ಬಿದಿರಂಡೆ ಬಿದಿರಿನಿಂದ ಮಾಡಿದ್ದು. ಹೊನ್ನಂಡೆ ಬಂಗಾರದ್ದು. ಕಿವಿಯ ಆಭರಣದಲ್ಲಿ ತಿರುಪನ್ನು ಗಟ್ಟಿಯಾಗಿ ಹಿಡಿದಿಡುವ ಭಾಗ. ಅದರದೂ ಕೊಳವೆ ಅಥವಾ ಸಿಲಿಂಡರ್ ಆಕಾರವೇ ಇರುತ್ತದೆಂದು ಗಮನಿಸಿ. ಆದ್ದರಿಂದಲೇ ಅದು ಅಂಡೆ. Cylinder ಪದಕ್ಕೆ ‘ಅಂಡೆ’ಯೇ ಸೂಕ್ತವೆಂದವರು: ನಾರಾಯಣ ಯಾಜಿ ಶಿರಾಲಿ, ತ್ರಿವೇಣಿ ಬೆಂಗಳೂರು, ಸಂಧ್ಯಾ ಅಡಿಗ, ಉಷಾಕಿರಣ್ ಅತ್ತಾವರ, ಜ್ಯೋತಿ ಮಹಾದೇವ್, ಎನ್.ಆರ್.ರಮೇಶ್, ಎನ್.ಸುಬ್ರಾಯ ಭಟ್, ಮಮತಾ ಕುಂದಾಪುರ, ಯು. ಪರಮೇಶ್ವರ ಭಟ್, ಗಿರೀಶ ಕೆ.ಎಸ್, ನಿತ್ಯಾನಂದ ಬ್ರಹ್ಮಾವರ, ವಿದ್ಯಾಶಂಕರ ಶರ್ಮ ಮುಂತಾದವರು.
ಇಂಗ್ಲಿಷ್ನಲ್ಲಿ 14ನೆಯ ಶತಮಾನದಿಂದೀಚೆಗೆ ಬಳಕೆಯಲ್ಲಿರುವ Cylinder ಪದ (ಆಕಾರದ ದೃಷ್ಟಿಯಿಂದಷ್ಟೇ; ಅಡುಗೆ ಅನಿಲ ಸಂಗ್ರಾಹಕವಾಗಿ ಅಲ್ಲ) ಮೂಲತಃ ಗ್ರೀಕ್ನ Kylindros. ಅದರ ಅರ್ಥ roller, one which rolls ಎಂದು. ಆಮೇಲೆ ರೇಖಾಗಣಿತದಲ್ಲಿ ‘ಆಯತವು ತನ್ನದೊಂದು ಬಾಹುವನ್ನು ಅಕ್ಷವಾಗಿಟ್ಟುಕೊಂಡು ಭ್ರಮಿಸಿದರೆ ಉಂಟಾಗಬಹುದಾದ ಘನಾಕೃತಿಯೇ ಸಿಲಿಂಡರ್ ಅಥವಾ ಸ್ತಂಭ’ ಎಂಬ ವ್ಯಾಖ್ಯೆ ಹುಟ್ಟಿಕೊಂಡಿತು. ಈ ಆಕೃತಿಯನ್ನು ಉದ್ದಕ್ಕೆ ನಿಲ್ಲಿಸದೆ ಅಡ್ಡಡ್ಡವಾಗಿಟ್ಟರೆ ನೆಲದ ಮೇಲೆ ಉರುಳಿಕೊಳ್ಳುವ ಸಾಧ್ಯತೆಯಿದೆ. one which rolls ಅಂದರೆ ಅದೇ. ಈ ದೃಷ್ಟಿಯಿಂದ ಕನ್ನಡದಲ್ಲಿ ‘ಉರುಳೆ’ ಕೂಡ ಸಿಲಿಂಡರ್ಗೆ ಸೂಕ್ತ ಸಂವಾದಿ ಪದವೆನಿಸುತ್ತದೆ. ಬಹಳಷ್ಟು ಪ್ರವೇಶಿಕೆಗಳು ಇದನ್ನೇ ಸೂಚಿಸಿವೆ: ಶೀಲಾ ಜಿ.ಪಿ, ಶಿವಕುಮಾರ್ ಸಿಂಗಟಗೆರೆ, ದೀಪ್ತಿ ಖಟಾವಕರ್, ಅಂಜನಾ ತುಮಕೂರು, ನಳಿನಿ ಜಿ.ಭಟ್ ಸೇರಾಜೆ, ಕಾಡೇಶ ವಿ.ಬಿ, ಡಾ. ಸಂಗಮೇಶ ಸುರಭಿ, ಕಡೂರು ದೇವೇಂದ್ರ, ಸೀತಾ ವ್ಯಾಸಮುದ್ರಿ, ಚಂಪಾವತಿ ಜೋಶಿ, ಆನಂದರಾಮ ಮಡಿ, ವಿಜಯಲಕ್ಷ್ಮಿ ಎಸ್, ಸುರೇಂದ್ರ ಪೈ, ಗಗನ ಮತ್ತು ಜ್ಯೋತಿಕಾ ಶಿವಮೊಗ್ಗ, ವೀರೇಶ ವಾಲಿ, ಸಿದ್ದನಗೌಡ ಮುದಿಗೌಡ್ರ, ಸುನೀಲಾ ಬರ್ಕಿ, ಶಶಿಕಲಾ ನರೇಂದ್ರನಾಥ, ಎಂ.ಕೆ ರಮೇಶ್, ಜಯಲಕ್ಷ್ಮಿ ಅಡಿಗ, ಕೆ.ಎ. ಭಟ್, ಸಂಜೀವ ಜೋಶಿ, ಅಂಜಲಿ ಬರ್ವೆ, ಬಿ.ಎಸ್ ನಟರಾಜು, ಶೋಭಾ ತಿಪಟೂರು ಮತ್ತಿತರರು.
ಆಕಾರದ ದೃಷ್ಟಿಯಿಂದ ‘ದಿಂಡು’ ಕೂಡ ಸಿಲಿಂಡರ್ಗೆ
ಸಂವಾದಿಯೇ. ಉದಾಹರಣೆಗೆ ಬಾಳೆಯ ದಿಂಡು. ಕಾವ್ಯಾತ್ಮಕವಾಗಿ ಮನುಷ್ಯನ ದೇಹವನ್ನೂ, ಅದರಲ್ಲೂ ತಲೆಯ ಕೆಳಗಿನ ಅಷ್ಟೂ ಭಾಗವನ್ನು ದಿಂಡು ಎನ್ನುವುದಿದೆ. ಅಂಗಪ್ರದಕ್ಷಿಣೆ ಅಥವಾ ಉರುಳುಸೇವೆಯ ಮೂಲಕ ದೇವರಿಗೆ ಹರಕೆ ಒಪ್ಪಿಸುವುದನ್ನು ದಿಂಡುರುಳುವುದು ಎನ್ನುತ್ತಾರೆ. ದಿಂಡುಡಿಗೆ ಅಂದರೆ ಗುಂಡಗೆ ಸುತ್ತಿರುವ ಬಟ್ಟೆ. ದಿಂಡುಕ ಅಂದರೆ ಸ್ಥೂಲದೇಹಿ. ಈ ಎಲ್ಲ ಸಂದರ್ಭಗಳಲ್ಲೂ ಕಣ್ಮುಂದೆ ಬರುವುದು ಸಿಲಿಂಡರ್, ಸ್ತಂಭ, ಪೀಪಾಯಿ, ಕೊಳಗದಂಥ ಆಕೃತಿಯೇ. ‘ದಿಂಡು’ ಎಂಬ ಪದ ಸೂಚಿಸಿದವರು: ಶ್ರೀೕಕಾಂತ್ ಗೋಡಖಿಂಡಿ ದಾಂಡೇಲಿ, ಆನಂದ ಗೋಡಸೆ ವಿಜಯಪುರ, ಭಾರತಿ ಆರ್.ಭಟ್, ಕೆ. ಜನಾರ್ದನ ಸಾಲಿಯಾನ್, ವಿ. ವಿಜಯೇಂದ್ರ ರಾವ್, ಸಂತೋಷರಾವ್ ಕಡಬ, ಮಂಜುನಾಥ ಡಿ.ಎಸ್, ಡಾ. ದಯಾನಂದ ಭಟ್ಟ, ಭಾರತಿ ಪ್ರಕಾಶ್ ಶಿವಮೊಗ್ಗ, ಎಂ.ಎಸ್ ಶಂಕರ ಕುಮಾರ್ ಮುಂತಾದವರು. ಅಚ್ಚಕನ್ನಡದಲ್ಲೇ ಮಾತನಾಡುವುದಿದ್ದರೆ ಗ್ಯಾಸ್ ಸಿಲಿಂಡರ್ಅನ್ನು ನಾವು ‘ಗಾಳಿದಿಂಡು’ ಅಂತಲೋ, ‘ಉರುವಲು ಉರುಳೆ’ ಅಂತಲೋ ಕರೆಯಬಹುದಾದರೂ ಅದು ‘ಅಂಡೆ’ಯಷ್ಟು ಸಹಜ, ಸರಳ, ಮತ್ತು ಸಮರ್ಥ ಎನಿಸಲಿಕ್ಕಿಲ್ಲ. ಅಂದಹಾಗೆ ಕನಕದಾಸರು ಮತ್ತೆ ಉಡುಪಿಯ ಕಡೆಯೇನಾದರೂ ಬಂದರೆ ಸ್ಥಳೀಯರು ‘ಅಂಡೆ ತಿಕ್ಕ್ಜಿಂದ್ ಅಟ್ಟಿಲ್ ಮಲ್ಪಂದೆ ಆಪುಂಡಾ?’ (ಅಂಡೆ ಸಿಗಲಿಲ್ಲವೆಂದು ಅಡುಗೆ ಮಾಡದಿರುವುದಕ್ಕೆ ಆಗುತ್ತದೆಯೇ?) ಎಂದು ಮಾತಾಡಿಕೊಳ್ಳುವುದನ್ನು ಕೇಳಬಹುದು!
ಕಳೆದ ಸಲ ಕೇಳಿದ್ದ ಎರಡನೆಯ ಪದ Deja vu. ಇಂಗ್ಲಿಷ್ನಲ್ಲಿದು ಫ್ರೆಂಚ್ ಮೂಲ ರೀತಿಯಲ್ಲೇ, ಅನುವಾದವಿಲ್ಲದೆ ಬಳಕೆಯಾಗುತ್ತದೆ, feeling of having previously a present situation ಎಂಬರ್ಥದಲ್ಲಿ. ಎಲ್ಲಾದರೂ ಹೊಸ ಜಾಗಕ್ಕೆ ಅಥವಾ ಪ್ರದೇಶಕ್ಕೆ ಹೋದಾಗ ಅಲ್ಲಿಯ ದೃಶ್ಯಾವಳಿಯನ್ನು ಕಂಡಾಗ, ‘ನಾನು ಈಗಾಗಲೇ ಇದನ್ನೆಲ್ಲ ಒಮ್ಮೆ ನೋಡಿದ್ದೀನೇನೋ’ ಎಂದು ಮನಸ್ಸಿನಲ್ಲಿ ಆಗುವ ಕ್ಷಣಿಕ ಭ್ರಮೆ. ನಮಗೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಹೀಗಾಗುವುದಿದೆ. deja vu ಎಂಬೆರಡು ಫ್ರೆಂಚ್ ಪದಗಳ ಅರ್ಥ ‘ಈಗಾಗಲೇ ನೋಡಿರುವ’ ಎಂದು. ‘ದೇಜಾವು’ ಎಂದು ಉಚ್ಚಾರ, ಒಂದೇ ಪದವೆಂಬಂತೆ. ಮನಸ್ಸಿಗೆ ಅನಿಸುವುದಷ್ಟೇ, ನಿಜವಾಗಿಯಾದರೆ ಆ ಸ್ಥಳವನ್ನು, ಆ ದೃಶ್ಯಾವಳಿಯನ್ನು ಹಿಂದೆಂದೂ ನಾವು ನೋಡಿರುವುದಿಲ್ಲ. ಮನಃಶಾಸ್ತ್ರದಲ್ಲಿ ಇದಕ್ಕೆ Promnesia ಎಂಬ ಪದ ಇದೆ. ಕಾವ್ಯಾತ್ಮಕವಾಗಿ ಹೇಳುವಾಗ, ಬರೆಯುವಾಗ ದೇಜಾವು ಅಂತಲೇ ಬಳಕೆ. ಇದರಂತೆಯೇ deja entendu (ಈಗಾಗಲೇ ಕೇಳಿರುವಂತೆ ಅನಿಸುವ ಸಂಗೀತ ಇತ್ಯಾದಿ), deja lu l (ಈಗಾಗಲೇ ಓದಿದ್ದೀನೇನೋ ಅಂತನಿಸುವ ಪುಸ್ತಕ ಅಥವಾ ಯಾವುದಾದರೂ ಟಿಪ್ಪಣಿ) ಮುಂತಾದ ಪದಪುಂಜಗಳೂ ಇವೆ. ಆದರೆ ಅವು ‘ದೇಜಾವು’ನಷ್ಟು ವ್ಯಾಪಕ ಬಳಕೆಯಲ್ಲಿಲ್ಲ.
ಬಹಳಷ್ಟು ಓದುಗರು ‘ಪೂರ್ವಾನುಭವ ಭಾವ’, ‘ಪೂರ್ವಾನುಭೂತಿ’, ‘ಪೂರ್ವಸ್ಮೃತಿ,‘ದೃಷ್ಟಪೂರ್ವ’ ಮುಂತಾದುವನ್ನು ದೇಜಾವುಗೆ ಸಮಾನಾರ್ಥಕವಾಗಿ ಸೂಚಿಸಿದ್ದಾರೆ: ಶ್ರೀಶಕಿರಣ್ ಪ್ರಭು, ಮಿಥುನ್ ಗುಡ್ಡೆತೋಟ, ಗೋಪಿನಾಥ ಭರಮಸಾಗರ, ಜಿ.ಎಚ್ ಸಂಕಪ್ಪ, ಜಿ.ನಾರಾಯಣ ರಾವ್, ರಘು ಬಿ ಗಿರಿಗೌಡನಕೊಪ್ಪಲು, ಉಮಾ ಪ್ರಭು, ಜಿ.ಕೆ ಲಕ್ಷಿ ನರಸಿಂಹಯ್ಯ, ಯು.ಎನ್ ಸಂಗನಾಳಮಠ, ಉಮೇಶ ಪ್ರಭು, ಎ.ಬಿ ಪ್ರಕಾಶ್, ನರೇಂದ್ರನಾಥ ಎಚ್.ಎಂ ಮತ್ತಿತರರು. ‘ಹಿನ್ನೆನಪು’ ಎಂದು ಅನಿಲಕುಮಾರ್ ಎಂ.ಕೆ, ಮತ್ತು ನಾಗಮಣಿ ಎನ್.ಶಾಂಪುರ್, ‘ನೆನವರಿಕೆ’ ಎಂದು ಗೋಪಾಲಕೃಷ್ಣ ಹೆಮ್ಮಿಗೆ ಸೂಚಿಸಿದ್ದಾರೆ. ಇಲ್ಲಿ ಗಮನಿಸಬೇಕಾದ್ದೆಂದರೆ ಹಿಂದೆ ನೋಡಿದ್ದಾಗಲೀ ಅಂಥದೊಂದು ಅನುಭವ ಆದದ್ದಾಗಲೀ ನಿಜವಾಗಿ ಸಂಭವಿಸಿರುವುದಿಲ್ಲ. ಆ ನೆನಪು ಕೂಡ ಸತ್ಯವಲ್ಲ. ಅದೇನಿದ್ದರೂ ಮನಸ್ಸಿನ ಭ್ರಮೆ ಅಷ್ಟೇ. ಅದಕ್ಕಿಂತ, ‘ಪೂರ್ವಭ್ರಮೆ’ (ಡಾ.ವಿದ್ಯಾ ಭಟ್, ಸುಜನಾ ನಿಟ್ಟೂರು) ಅಥವಾ ‘ಭ್ರಮಾಸ್ಮ ೃ’ (ವಸಂತ ನಾಯಕ್) ಹೆಚ್ಚು ಹೊಂದಬಹುದು. ‘ನಿನಗೆಲ್ಲೋ ಭ್ರಾಂತು’ ಅಂತ ಹಿರಿಯರು ಹೇಳುತ್ತಾರಲ್ಲ, ಆ ‘ಭ್ರಾಂತು’ (ಕುಶಲ್ ಭಾರದ್ವಾಜ್) ಕೂಡ ಸಮರ್ಥ ಪರ್ಯಾಯವಾದೀತು, ಶುದ್ಧ ಸಂಸ್ಕೃತ ಪದಕ್ಕಿಂತ ತುಸು ಅಪಭ್ರಂಶ ಹೌದಾದರೂ. ‘ಹುಸಿನೆನಹು’ (ರಂಗನಾಥ ಟಿ.ಕೆ) ಮತ್ತು ‘ಮನಮರೀಚಿಕೆ’ (ರವೀಂದ್ರ ಪೂಜಾರ) ಕೂಡ ಆಕರ್ಷಕವೂ ಅರ್ಥಪೂರ್ಣವೂ ಆಗಿವೆ. ಇವೆಲ್ಲಕ್ಕಿಂತಲೂ ವಿಶುಕುಮಾರ್ ಕೋಲಾರ ಸೂಚಿಸಿರುವ ‘ವಿಭ್ರಮ’ ಚಿಕ್ಕ-ಚೊಕ್ಕದಾಗಿ ತುಂಬ ಯೋಗ್ಯವಾಗಿದೆ.
ಕೊನೆಯದಾಗಿ ಕಜ್ಞಿಜ. ಅಂತರಜಾಲ ಮತ್ತು ಗಣಕಯಂತ್ರಗಳ ಸಂದರ್ಭದಲ್ಲಾದರೆ ಪ್ರೇಷಕ ಮತ್ತು ಗ್ರಾಹಕ ಯಂತ್ರಗಳು ವಿದ್ಯುನ್ಮಾನ ಸಂವಹನ ಆರಂಭಿಸುವ ಮುನ್ನ ಸೂಚನೆಯಾಗಿ ವಿನಿಮಯ ಮಾಡಿಕೊಳ್ಳುವ ಸಂಜ್ಞೆ. ಆದರೆ ಒಂದೆರಡು ಶತಮಾನಗಳ ಹಿಂದೆ ಇದೇ ಪದವನ್ನು ಬಂದೂಕಿನಿಂದ ಹೊರಟ ಗುಂಡು ಗಾಳಿಯಲ್ಲಿ ಹಾರಿಬಂದು ಗುರಿಗೆ ಅಪ್ಪಳಿಸುವುದನ್ನು, ಅಥವಾ ಜಲಾಂತರ್ಗಾಮಿ ನೌಕೆಯು ಹೊರಡಿಸುವ ಧ್ವನಿಸಂಕೇತವನ್ನು, ಅನುಕರಣ ಶಬ್ದವಾಗಿ ತಿಳಿಸಲು ಬಳಕೆಯಾಗುತ್ತಿತ್ತು. ಪಿಂಗ್-ಪಾಂಗ್ (ಟೇಬಲ್ ಟೆನ್ನಿಸ್) ಆಟದ ಹೆಸರಿಗೂ ಈ ಪದಕ್ಕೂ ಶಬ್ದದ್ದೇ ಸಂಬಂಧ. ಅಲ್ಲಿ ಕೂಡ ಮೇಜಿನ ಗಟ್ಟಿ ಮೇಲ್ಮೈಗೆ ಪುಟ್ಟ ಚೆಂಡು ಬಡಿದಾಗಿನ ಶಬ್ದವನ್ನೇ ಆಟದ ಹೆಸರಾಗಿಸಿದ್ದು. ಹಾಗೆ ನೋಡಿದರೆ ಈ ರೀತಿಯ ಅನುಕರಣ ಶಬ್ದಗಳನ್ನು ಭಾಷಾಂತರಿಸಬೇಕಿಲ್ಲ. ಥಾಮಸ್ ನ್ಯಾಷ್ ಬರೆದ ಇಂಗ್ಲಿಷ್ ಕವಿತೆಯಲ್ಲಿ cuckoo jug-jug pu-we to-witta-woo ಅಂತ ಇರುವುದನ್ನು ಬಿಎಂಶ್ರೀಯವರು ಯಥಾವತ್ತಾಗಿ ಕನ್ನಡದಲ್ಲಿ ‘ಕುವೂ ಜಗ್ಜಗ್ ಪೂವಿಟ್ಟೂವಿಟ್ಟವೂ...’ ಎಂದಿಲ್ಲವೇ? ಹಕ್ಕಿಗಳ ಕಲರವದ್ದು ನಿಸರ್ಗದ ಭಾಷೆ. ಅನುವಾದಿಸಲಾಗದು, ಅನುವಾದಿಸಬಾರದು. ಅಂತೆಯೇ ‘ಪಿಂಗ್’ಅನ್ನೂ ಕನ್ನಡದಲ್ಲೂ ಪಿಂಗ್ ಎಂದೇ ಬಳಸಬಹುದು. ‘ನೀನ್ಯಾಕೋ ನಿನ್ನ ಪಿಂಗ್ಯಾಕೋ ರಂಗ...’ ಎಂದು ತಮಾಷೆಗಾದರೂ ಹೇಳಬಹುದು. ‘ಪಿಂಗು’ ಅಂತಲೇ ಹೇಳೋಣವೆಂದವರು ಮೈಸೂರಿನಿಂದ ಪಿ.ಜೆ. ರಾಘವೇಂದ್ರ. ಇನ್ನೂ ಒಂದೆರಡು ಪ್ರವೇಶಿಕೆಗಳನ್ನು ಗಮನಿಸುವುದಾದರೆ-‘ಶಬ್ದಬಾಣ’ (ಅಪ್ಪುಮುತ್ಯ), ‘ಟಣ್/ಟಣ್ಣಿಸು’ (ಶಿವಶಂಕರ ಪ್ರಭು), ‘ಕೂ-ಹಾಕು’ (ಸಂಗೀತಾ ಶೆಣೈ, ಪ್ರಭಾಕರ ಅಡಿಗ) ಚೆನ್ನಾಗಿವೆ.
ಈ ವಾರದ ಮೂರು ಪದಗಳು:
1.Abbreviation: ಹಿರಿದಾಗಿ ಹಿಗ್ಗುವುದಲ್ಲ, ಎನಗಿಂತ ಕಿರಿಯರಿಲ್ಲ ಎಂದು ಬಸವತತ್ತ್ವವನ್ನು ಸಾರುತ್ತಿದೆಯೇನೋ ಅನಿಸುವಂಥದ್ದು.
2.Interaction: ಪರಸ್ಪರ ಸಂಭಾಷಣೆ, ಕಾರ್ಯಾಚರಣೆ, ವಿಚಾರವಿನಿಮಯ ನಡೆಯುವ ಈ ಪ್ರಕ್ರಿಯೆಗೊಂದು ಕನ್ನಡ ಪದ ಇಲ್ಲವೇ?
3.Lipstick: ಅಂದಕ್ಕೋಸ್ಕರ ತುಟಿಗಳಿಗೆ ಬಣ್ಣ ಹಚ್ಚುವ ಸಾಧನ, ಶತಮಾನಗಳಿಂದಲೂ ಬಳಕೆಯಲ್ಲಿರುವ ಪ್ರಸಾಧನ ಉತ್ಪನ್ನ.
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945
(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)