ವಿ. ಸುನೀಲ್ ಕುಮಾರ್  
ರಾಜ್ಯ

ಸಂವೇದನೆ ಇಲ್ಲ, ಸಂಘರ್ಷವೇ ಎಲ್ಲ...

ಪ್ರಮುಖ ಮುಖ್ಯಾಂಶಗಳು

  • * ಅಸಹಾಯಕ ಸಿಎಂ ಎಂದು ಸುನೀಲ್ ಕುಮಾರ್ ಟೀಕೆ
ಬೆಂಗಳೂರು: ಜನರಪರ ಕಾರ್ಯಗಳನ್ನು ಮರೆತಿರುವ ಈ ಸರ್ಕಾರಕ್ಕೆ ಸಂವೇದನೆಯೇ ಇಲ್ಲ. ಎಲ್ಲದಕ್ಕೂ ಸಂಘರ್ಷ ಮಾಡಿಕೊಂಡೇ ಆಡಳಿತ ನಡೆಸುತ್ತಿದೆ. ಇನ್ನು ಅಸಹಾಯಕ ಮುಖ್ಯಮಂತ್ರಿಯನ್ನು ಹೊಂದಿರುವ ಈ ಸರ್ಕಾರ ‘65 ಪರ್ಸೆಂಟ್’ ಬಿರುದು ಪಡೆದುಕೊಂಡಿದೆ ಎಂದು ಶಾಸಕ ವಿ. ಸುನೀಲ್ ಕುಮಾರ್ ಟೀಕಾ ಪ್ರಹಾರ ನಡೆಸಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದಲ್ಲಿ ಮಾತನಾಡಿ, ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ, ಅನುದಾನ ಕೊರತೆ ಸೇರಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸುತ್ತ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯದ ಇತಿಹಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜತೆಗೆ ಸರ್ಕಾರದ ಸಂಘರ್ಷ, ನಟ್ಟು ಬೋಲ್ಟು ಟೈಟ್ ಮಾಡುತ್ತೇವೆ ಎಂದು ಚಲನಚಿತ್ರದವರೊಂದಿಗೆ ಜಗಳ, ಏನೂ ಇಲ್ಲ ಎಂದು ಹೇಳಿ ಬಿಗ್‌ಬಾಸ್ ಜತೆಗೂ ಜಗಳ, ರಸ್ತೆ ಸರಿಯಿಲ್ಲ ಎಂದಿದ್ದಕ್ಕೆ ಐಟಿ-ಬಿಟಿ ಉದ್ಯಮಿಗಳೊಂದಿಗೆ ಸಂಘರ್ಷ, ಬ್ಯಾಲೆಟ್ ಪೇಪರ್ ಬೇಕು ಎಂದು ಚುನಾವಣಾ ಆಯೋಗದ ಜತೆ ಜಗಳ. ಹಾಗಾದರೆ ಸಿಲಿಕಾನ್ ಸಿಟಿಯನ್ನು ಶಿಲಾಯುಗಕ್ಕೆ ಕೊಂಡೊಯಬೇಕೇ ಎಂದು ಪ್ರಶ್ನಿಸಿದ ಅವರು, ಸರ್ಕಾರಕ್ಕೆ ಅಭಿವೃದ್ಧಿ ಬೇಡ, ಕೇಂದ್ರದ ಜನಪರ ಯೋಜನೆಗಳು ಬೇಡ. ಎಲ್ಲದರಲ್ಲೂ ಸಂಘರ್ಷ ಎಂದು ಹರಿಹಾಯ್ದರು.
ದುರಾಹಂಕಾರ ಹಾಗೂ ಉದ್ಧಟತನದಿಂದ ಈ ಸರ್ಕಾರ ಸಂವೇದನಾ ಶೀಲತೆಯನ್ನೇ ಕಳೆದುಕೊಂಡಿದೆ. 1,555 ರೈತರು ಆತ್ಮಹತ್ಯೆ ಮಾಡಿಕೊಂಡರೂ ಪರಿಹಾರ ನೀಡಿಲ್ಲ, ಹುಬ್ಬಳ್ಳಿಯಲ್ಲಿ ನಿರುದ್ಯೋಗಿಗಳು ಪ್ರತಿಭಟನೆ, ಬಾಣಂತಿಯರ ಸಾವು, ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನೆ ಯಾವುದಕ್ಕೂ ಕ್ರಮವಿಲ್ಲ. ಜನರ ಬಗ್ಗೆ ಇರಲಿ, 850 ಆನೆಗಳು ಸತ್ತಿವೆ, ಹುಲಿಗಳ ಸಾವಾಗಿವೆ ಆವುಗಳ ಬಗ್ಗೆಯೂ ಸಂವೇದನೆ ಇಲ್ಲದ ಸರ್ಕಾರ ಇದಾಗಿದೆ ಎಂದು ತಿವಿದರು.
ರಾಜ್ಯಕ್ಕೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆ ಜಾರಿಗೆ ತಂದ ಕೀರ್ತಿ ಹೇಗೆ ನಿಮಗೆ ಸಲ್ಲುತ್ತದೆಯೋ, ಅದೇ ರೀತಿ ಈ ಕಾಯ್ದೆ ಉಲ್ಲಂಸಿದ ಕೀರ್ತಿಯೂ ನಿಮಗೇ ಸಲ್ಲಬೇಕು. ಶಕ್ತಿ ಯೋಜನೆಗೆ 2023ರಿಂದ ಕ್ರಮವಾಗಿ 812 ಕೋಟಿ ರೂ., 1,451 ಕೋಟಿ ರೂ., 1,537 ಕೋಟಿ ರೂ. ಸೇರಿ ಗ್ಯಾರಂಟಿ ಯೋಜನೆಗಳಿಗೆ 38,860 ಕೋಟಿ ರೂ.ಗಳನ್ನು ಎಸ್‌ಸಿಎಸ್‌ಪಿ/ಟಿಎಸ್‌ಪಿಯಿಂದ ಬಳಕೆ ಮಾಡಿದ್ದೀರಿ ಎಂದು ದೂರಿದರು.