American University of Spiritual Science
- * ಅಮೆರಿಕನ್ ಯೂನಿವರ್ಸಿಟಿ ಆಫ್ ಸ್ಪಿರಿಚುಯಲ್ ಸೈನ್ಸ್ ಬೆಂಗಳೂರು ಘಟಕ ಉದ್ಘಾಟನೆ
ಬೆಂಗಳೂರು: ಶಿಕ್ಷಣದ ಜತೆಗೆ ಸಂಗೀತಾ, ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಆಧ್ಯಾತ್ಮಿಕತೆಯ ಬೆಳವಣಿಗೆಗೂ ಪ್ರೋತ್ಸಾಹದ ಅವಶ್ಯಕ ಇದೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.
ನಗರದಲ್ಲಿ ನಡೆದ ಅಮೆರಿಕನ್ ಯೂನಿವರ್ಸಿಟಿ ಆಫ್ ಸ್ಪಿರಿಚುಯಲ್ ಸೈನ್ಸ್ ಬೆಂಗಳೂರು ಘಟಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಣವು ಕೇವಲ ಉದ್ಯೋಗ ಸೃಷ್ಟಿಸುವ ಸಾಧನವಾಗಿರದೆ, ವ್ಯಕ್ತಿತ್ವ ನಿರ್ಮಾಣ ಮಾಡುವ ಶಕ್ತಿಯುತ ಮಾಧ್ಯಮವಾಗಬೇಕು. ಇಂದಿನ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವದ ಯುಗದಲ್ಲಿ ಮಾನಸಿಕ ಆರೋಗ್ಯ, ಆಧ್ಯಾತ್ಮಿಕತೆ ಮತ್ತು ಮಾನವೀಯ ಮೌಲ್ಯಗಳ ಮಹತ್ವದ ಬಗೆಗೆ ತಿಳಿಯುವ ತುರ್ತು ಇದೆ ಎಂದು ಹೇಳಿದರು.
ಯುವಜನತೆ ಶಿಕ್ಷಣದ ಜೊತೆಗೆ ಸಂಸ್ಕಾರ, ಕರುಣೆ, ತಾಳ್ಮೆ ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಸಿಕೊಳ್ಳಬೇಕು. ಕೇವಲ ಬುದ್ಧಿವಂತರಾಗುವುದು ಸಾಕಾಗುವುದಿಲ್ಲ, ಹೃದಯವಂತರಾಗುವುದೂ ಮುಖ್ಯ ಎಂದ ಅವರು, ಆಧ್ಯಾತ್ಮಿಕತೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಭಾರತೀಯ ಸಂಗೀತ, ಯೋಗ, ನೃತ್ಯ ಮತ್ತು ಆಧ್ಯಾತ್ಮಿಕ ಪರಂಪರೆಗಳು ಸಮಾಜ ಬಲಪಡಿಸುವ ಶಕ್ತಿ ಹೊಂದಿವೆ ಎಂದರು.
ಇದೇ ವೇಳೆ ಅಮೆರಿಕನ್ ವಿಶ್ವವಿದ್ಯಾಲಯವು ಜ್ಞಾನ, ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಮಾನವೀಯ ಮೌಲ್ಯಗಳ ಸಂಗಮವಾಗಿ ಬೆಳೆಯಲಿ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಮತ್ತು ಕಲಾವಿದರಿಗೆ ಮಾರ್ಗದರ್ಶಕ ಸಂಸ್ಥೆಯಾಗಲಿ ಎಂದು ಶುಭ ಹಾರೈಸಿದರು.
ಗೌರವ ಡಾಕ್ಟರೇಟ್:
ಸಮಾರಂಭದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ, ಕಲೆ ಹಾಗೂ ಸಮಾಜಮುಖಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ‘ಪದ್ಮಭೂಷಣ ಪುರಸ್ಕೃತ ಮಧುರೈ ಟಿ.ಎನ್. ಶೇಷಗೋಪಾಲನ್ ಹಾಗೂ ಸುಧಾ ರಘುನಾಥನ್ ಮತ್ತು ಪದ್ಮಶ್ರೀ ಪುರಸ್ಕೃತರಾದ ಪ್ರತಿಭಾ ಪ್ರಹ್ಲಾದ್ ಹಾಗೂ ಎ. ಕನ್ಯಾಕುಮಾರಿ ಅವರಿಗೆ ಅಮೇರಿಕನ್ ಯೂನಿವರ್ಸಿಟಿ ಆಫ್ ಸ್ಪಿರಿಚುವಲ್ ಸೈನ್ಸ್ ವತಿಯಿಂದ ಗೌರವ ಡಾಕ್ಟರೇಟ್ (ಏಟ್ಞಟ್ಟಚ್ಟ ಈಟ್ಚಠಿಟ್ಟಠಿಛಿ) ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಶ್ವವಿದ್ಯಾಲಯದ ಚಾನ್ಸಲರ್ ಡಾ. ಬಿ. ಗಿರೀಶ್ ಕುಮಾರ್, ವೈಸ್ -ಚಾನ್ಸಲರ್ ಜಿ. ಅರವಿಂದ್ ರಾಮಸ್ವಾಮಿ, ವಿದ್ವಾಂಸರು, ವಿವಿಧ ಕ್ಷೇತ್ರಗಳ ಗಣ್ಯರು ಇದ್ದರು.