ಬೆಂಗಳೂರು: ಜಿಬಿಎ ಸೇರಿ ಬೆಂಗಳೂರು ಮಹಾನಗರದಲ್ಲಿ ಕೈಗೊಂಡಿದ್ದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಬಳಿಕ ಕರಡು ಮತಪಟ್ಟಿಯಲ್ಲಿ 56.99 ಲಕ್ಷ ಮತದಾರರು ಉಳಿದುಕೊಂಡಿದ್ದಾರೆ. ಈ ಮುನ್ನ 1.03 ಕೋಟಿ ಮತದಾರರಿದ್ದರೂ, ಎಸ್ಐಆರ್ ವೇಳೆ ಮಾಹಿತಿ ನೀಡದ ಕಾರಣ 45.65 ಲಕ್ಷ ಹೆಸರಿಗೆ ಕೊಕ್ ನೀಡಲಾಗಿದೆ.
ರಾಜ್ಯದ ಮಟ್ಟಿಗೆ ಹೇಳುವುದಾದರೆ ಬೆಂಗಳೂರಿನಲ್ಲೇ ಅತಿಹೆಚ್ಚು ಮತದಾರರ ಹೆಸರನ್ನು ಕರಡು ಪಟ್ಟಿಯಿಂದ ಹೊರಗಿಡಲಾಗಿದೆ. ಎಸ್ಐಆರ್ ವೇಳೆ ನಮೂನೆ ಭರ್ತಿ ಮಾಡಿ ವಾಪಸ್ ನೀಡದವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿಲ್ಲ. ಹಾಗಾಗಿ ಅಂತಹವರ ಹೆಸರು ಹೆಚ್ಚಿನ ಪ್ರಮಾಣದಲ್ಲಿದ್ದು, ಹೊಸದಾಗಿ ಹೆಸರು ಸೇರಿಸಲು ಈಗಲೂ ಅವಕಾಶವಿದ್ದು, ನಮೂನೆ 6 ಅನ್ನು ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು ಎಂದು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರ ಜಿಲ್ಲೆಯಲ್ಲಿ ಹೆಚ್ಚು ಮತದಾರರು: ಜಿಬಿಎ ಸೇರಿ ಬೆಂಗಳೂರು ಕಂದಾಯ ಜಿಲ್ಲೆಯನ್ನು ಚುನಾವಣಾ ದೃಷ್ಟಿಯಿಂದ ಉತ್ತರ, ದಕ್ಷಿಣ, ಕೇಂದ್ರ ಹಾಗೂ ನಗರ ಜಿಲ್ಲೆ ಎಂಬ 4 ಹೆಚ್ಚುವರಿ (ಅಪರ) ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿದೆ. ಒಟ್ಟು 56.99 ಲಕ್ಷ ಮತದಾರರ ಪೈಕಿ ನಗರ ಜಿಲ್ಲೆಯಲ್ಲಿ ಅತಿಹೆಚ್ಚು 23.03 ಲಕ್ಷ ಮತದಾರರಿದ್ದಾರೆ. ಉತ್ತರ-12.80 ಲಕ್ಷ, ದಕ್ಷಿಣ-10.86 ಲಕ್ಷ ಹಾಗೂ ಕೇಂದ್ರ ಅಪರ ಜಿಲ್ಲೆಯಲ್ಲಿ 10.29 ಲಕ್ಷ ಮತದಾರರಿದ್ದಾರೆ ಎಂದು ಹೇಳಿದರು.
ಮತಗಟ್ಟೆ ಸಂಖ್ಯೆ ಹೆಚ್ಚಳ: ರಾಜಧಾನಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹಿಂದೆ 8,972 ಮತಗಟ್ಟೆಗಳಿದ್ದವು. ಎಸ್ಐಆರ್ ಬಳಿಕ ಪ್ರತಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿದ ಕಾರಣ ಹೆಚ್ಚುವರಿಯಾಗಿ 36 ಮತಗಟ್ಟೆಗಳನ್ನು ಹೆಚ್ಚಿಸಲಾಗಿದೆ. ಈಗ ಒಟ್ಟಾರೆ ಮತಗಟ್ಟೆಗಳ ಸಂಖ್ಯೆ 9,008ಕ್ಕೆ ಏರಿದೆ.
ಎಸ್ಐಆರ್ ನಂತರವೂ 28 ಮತಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ಕ್ಷೇತ್ರ ಹಾಗೂ ಶಿವಾಜಿನಗರ ಕ್ಷೇತ್ರ ಕ್ರಮವಾಗಿ ಅತಿಹೆಚ್ಚು ಹಾಗೂ ಅತಿಕಡಿಮೆ ಮತದಾರರನ್ನು ಹೊಂದಿವೆ. ಈ ಸಂಖ್ಯೆ ಅಂತಿಮ ಮತಪಟ್ಟಿ ಪ್ರಕಟವಾದ ಬಳಿಕ ವ್ಯತ್ಯಾಸವಾಗುವ ಸಾಧ್ಯತೆಯೂ ಇದೆ ಎಂದು ಮಹೇಶ್ವರ ರಾವ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಬಿಎ ವಿಶೇಷ ಆಯುಕ್ತೆ ಸುಷಮಾ ಗೋಡಬೋಲೆ, ಪಾಲಿಕೆಗಳ ಆಯುಕ್ತರಾದ ಕೆ.ಎನ್. ರಮೇಶ್, ಜಿ.ಜಗದೀಶ್, ಪಿ.ಸುನೀಲ್ಕುಮಾರ್ ಸೇರಿ ಇತರ ಅಧಿಕಾರಿಗಳು ಹಾಜರಿದ್ದರು.
ಮತದಾರರಲ್ಲಿ ಯಾವುದೇ ಗೊಂದಲ, ಅನುಮಾನಗಳಿದ್ದಲ್ಲಿ ದೂರು, ಸಲಹೆ ಮತ್ತು ಆಕ್ಷೇಪಣೆಗಳನ್ನು ಜಿಲ್ಲಾ ಸಹಾಯವಾಣಿ ಕೇಂದ್ರ 1950 ಅಥವಾ ಟೋಲ್ ಫ್ರೀ ಸಂಖ್ಯೆ 1800-4255-1950ಕ್ಕೆ ಕರೆ ಮಾಡಿ ತಿಳಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.
ಬೆಂಗಳೂರಿನಲ್ಲಿ ಹಿಂದಿನಿಂದಲೂ ಪುರುಷ ಮತದಾರರ ಸಂಖ್ಯೆಯೇ ಹೆಚ್ಚಾಗಿತ್ತು. ಇದೇ ಮೊದಲ ಬಾರಿಗೆ ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿರುವುದು ವಿಶೇಷ. ಒಟ್ಟು 56.99 ಲಕ್ಷ ಮತದಾರರಲ್ಲಿ 27.69 ಲಕ್ಷ ಪುರುಷರಿದ್ದರೆ, 29.29 ಲಕ್ಷ ಮಹಿಳೆ ವನಿತೆಯರಿದ್ದಾರೆ. ಎಸ್ಐಆರ್ ವೇಳೆ ಪುರುಷರು ನಮೂನೆಯಲ್ಲಿ ವಿವರಗಳನ್ನು ತುಂಬಿ ವಾಪಸ್ ಮಾಡದಿರುವುದು ಮಹಿಳೆಯರ ಸಂಖ್ಯೆ ಮತಪಟ್ಟಿಯಲ್ಲಿ ಏರಿಕೆ ಕಾಣಲು ಕಾರಣವೆಂದು ವಿಶ್ಲೇಷಿಸಲಾಗಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ 1.03 ಕೋಟಿ ಮತದಾರರ ಪೈಕಿ ಶೇ.45.13 (46.88 ಲಕ್ಷ) ವೋಟರ್ಸ್ ಹೆಸರನ್ನು ಗೈರು, ಸ್ಥಳಾಂತರ, ಮರಣ, ನಕಲು ಹಾಗೂ ಇತರ (ಎಎಸ್ಡಿಡಿಒ) ವರ್ಗಕ್ಕೆ ಸೇರಿಸಲಾಗಿದೆ. ಈ ಪೈಕಿ 7.27 ಲಕ್ಷ ಮಂದಿ ಸಮೀಕ್ಷೆ ವೇಳೆ ಗೈರಾಗಿದ್ದು, 32.74 ಲಕ್ಷ ಮಂದಿ ಸ್ಥಳಾಂತರ, 3.19 ಲಕ್ಷ ಮಂದಿ ಮೃತರಾಗಿದ್ದಾರೆ. 65,548 ಮಂದಿ ಒಂದಕ್ಕಿಂತ ಹೆಚ್ಚಿನ ಕಡೆ ಹೆಸರು ಹೊಂದಿದ್ದು, 3.04 ಲಕ್ಷ ಇತರ ಪ್ರಕರಣಗಳಾಗಿವೆ.
ಕರಡು ಮತಪಟ್ಟಿಯಲ್ಲಿ ಸೇರ್ಪಡೆಯಾಗಿದ್ದವರ ಪೈಕಿ ಅಪೂರ್ಣ ಹೆಸರಿದ್ದವರು, ಹಿಂದಿನ ಮತಪಟ್ಟಿಯಲ್ಲಿನ ಹೆಸರಿಗೆ ಹೋಲಿಕೆ ಆಗದಿರುವುದು ಸೇರಿ ಕೆಲ ಅನುಮಾನಕ್ಕೆ ಕಾರಣರಾದ 24.05 ಲಕ್ಷ ಮಂದಿಗೆ ನೋಟಿಸ್ ನೀಡಲಾಗುತ್ತದೆ. ನೋಟಿಸ್ಗೆ ಸಮಜಾಯಿಷಿ ನೀಡಿದ್ದಲ್ಲಿ (ದಾಖಲೆಸಹಿತ) ಅಂತಹವರ ಹೆಸರನ್ನು ದೃಢಪಡಿಸಿಕೊಂಡು ಮತದಾರರ ಅಂತಿಮ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.