ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 
ರಾಜ್ಯ

ಹೊಸ ನೇಮಕಾತಿಯೂ ನಡೆಯುತ್ತಿಲ್ಲ, ಕಟ್ಟಿದ ಹಣವೂ ವಾಪಸ್ ಇಲ್ಲ-KPSC

ಹರೀಶ್ ಬೇಲೂರು ಬೆಂಗಳೂರು
ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿ, ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಕಾರಣಾಂತರಗಳಿಂದ ಅಧಿಸೂಚನೆ ರದ್ದುಗೊಳಿಸಿದ ಸರ್ಕಾರ, ಎರಡು ವರ್ಷವಾದರೂ ಹೊಸದಾಗಿ ಅರ್ಜಿಯನ್ನೂ ಆಹ್ವಾನಿಸಿಲ್ಲ ಅಭ್ಯರ್ಥಿಗಳು ಪಾವತಿಸಿದ್ದ ಶುಲ್ಕವನ್ನೂ ವಾಪಸ್ ಕೊಟ್ಟಿಲ್ಲ.
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ 750 ಭೂಮಾಪಕರ ನೇಮಕಾತಿಗೆ ಸರ್ಕಾರ 2 ವರ್ಷದ ಹಿಂದೆ ಅಧಿಸೂಚನೆ ಹೊರಡಿಸಿತ್ತು. ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ 2024ರ ಫೆಬ್ರವರಿಯಲ್ಲಿ 264 ಭೂಮಾಪಕರು ಮತ್ತು ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದದ 100 ಭೂಮಾಪಕರ ನೇಮಕಾತಿಗೆ ಮೊದಲು ಅಧಿಸೂಚನೆ ಹೊರಡಿಸಲಾಗಿತ್ತು. ಈ ವೇಳೆ ಸಾವಿರಾರು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದರು. ಬಳಿಕ, ಹೆಚ್ಚುವರಿಯಾಗಿ 296 ಹುದ್ದೆಗಳು ಮತ್ತು ಹೈದರಾಬಾದ್-ಕರ್ನಾಟಕ ವೃಂದದ 90 ಹುದ್ದೆಗಳಿಗೆ ನೇಮಕಾತಿ ಪರಿಷ್ಕರಿಸಿ ಕೆಪಿಎಸ್ಸಿಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಅನುಮೋದನೆ ನೀಡಿದ್ದ ಕೆಪಿಎಸ್ಸಿ, ಸೇರ್ಪಡೆ ಅಧಿಸೂಚನೆ ಹೊರಡಿಸಿ ಒಟ್ಟು 750 ಭೂಮಾಪಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿತ್ತು.
2024ರ ನ.25ರಿಂದ 2024ರ ಡಿ.9ವರೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600, 2ಎ, 2ಬಿ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳಿಗೆ 300 ರೂ. ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ.ಶುಲ್ಕ ನಿಗದಿಪಡಿಸಲಾಗಿತ್ತು. ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರಲಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ 23,500 ರೂ.ನಿಂದ 47,650 ರೂ.ವೇತನ ನಿಗದಿಪಡಿಸಲಾಗಿತ್ತು. ಈ ವೇಳೆ ಸಾಮಾನ್ಯ ವರ್ಗ ಸೇರಿ ಇತರ ವರ್ಗದ ಲಕ್ಷಾಂತರ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ನಿಗದಿಯಂತೆ ನೇಮಕಾತಿ ಪರೀಕ್ಷೆ ನಡೆಸಬೇಕಿತ್ತು. ಆದರೆ, ಕೆಲ ತಿಂಗಳ ಬಳಿಕ ಆಯೋಗ, ಏಕಾಏಕಿ ಪರೀಕ್ಷೆ ರದ್ದುಪಡಿಸಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆ ಹಗಲಿರಳು ಓದಿ ಪರೀಕ್ಷೆಗೆ ತಯಾರಿ ನಡೆಸಿದ ಲಕ್ಷಾಂತರ ಅಭ್ಯರ್ಥಿಗಳು ನಿರಾಸೆಯಾಗಿದೆ. ಅರ್ಜಿ ಶುಲ್ಕ ರೂಪದಲ್ಲಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಬಂದಿದೆ. ಆದರೆ, ಈ ಹಣವನ್ನು ನೀಡದ ಕೆಪಿಎಸ್‌ಸಿ, ಅಭ್ಯರ್ಥಿಗಳನ್ನು ಸತಾಯಿಸುತ್ತಿದೆ.
ರೈತರಿಗೆ ತೊಂದರೆ:
ರಾಜ್ಯದಲ್ಲಿ ಪ್ರಸಕ್ತ ವರ್ಷದ ಮೇ 13ರವರೆಗೆ 5,72,755 ಸರ್ವೇ ಅರ್ಜಿಗಳು ಬಾಕಿ ಉಳಿದಿವೆ. ಭೂಮಾಪಕರ (ಸರ್ವೆಯರ್) ಕೊರತೆಯಿಂದ ಈಗಾಗಲೇ ರೈತರಿಗೆ ಜಮೀನು ಅಳತೆ, ಪೋಡಿ ಸೇರಿ ಇತರ ಸರ್ಕಾರಿ ಸೇವೆಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಜಮೀನುಗಳ ವಿಭಜನೆ, ಮೋಜಣಿ, ಮತ್ತು ನಕ್ಷೆ ತಯಾರಿಕೆಗಾಗಿ ವರ್ಷಗಟ್ಟಲೆ ಕಾಯವಂತಾಗಿದೆ. ಸಕಾಲಕ್ಕೆ ದಾಖಲೆಗಳು ಸಿಗದೆ ಬೆಳೆ ಸಾಲ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಸರ್ಕಾರವು ಖಾಲಿ ಹುದ್ದೆಗಳಿಗೆ ಭೂಮಾಪಕರ ನೇಮಿಸಿಕೊಳ್ಳುವ ಬದಲು ನೇಮಕಾತಿ ರದ್ದುಪಡಿಸಿರುವುದು ಜಮೀನು ಸರ್ವೇ ಮಾಡಿಸಿಕೊಳ್ಳುವ ರೈತರಿಗೆ ಇನ್ನಷ್ಟು ತೊಂದರೆಯಾಗಿದೆ.
ಕಮರಿದ ಸರ್ಕಾರಿ ನೌಕರಿ ಕನಸು:
ರಾಜ್ಯ ಸರ್ಕಾರವೇ ನೀಡಿರುವ ಅಧಿಕೃತ ಮಾಹಿತಿಗಳ ಪ್ರಕಾರ ವಿವಿಧ ಇಲಾಖೆಗಳಲ್ಲಿ 2.84 ಲಕ್ಷ ಹುದ್ದೆಗಳು ಖಾಲಿ ಉಳಿದಿವೆ. ಇದನ್ನು ಭರ್ತಿ ಮಾಡಲು ಯಾವುದೇ ಕ್ರಮವಾಗುತ್ತಿಲ್ಲ. ಖಾಲಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಧಾರವಾಡದಲ್ಲಿ ಸಾವಿರಾರು ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಹೋರಾಟ ನಡೆಸಿದ್ದರು. ಯುವ ಜನರು ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.ಆರ್.ವಿ. ದೇಶಪಾಂಡೆ ಅಧ್ಯಕ್ಷತೆಯ ಕರ್ನಾಟಕ ಆಡಳಿತ ಸುಧಾರಣೆ ಆಯೋಗದ ವರದಿಯಂತೆ ರಾಜ್ಯದಲ್ಲಿ 7 ಲಕ್ಷ ನಿರುದ್ಯೋಗಿಗಳಿದ್ದಾರೆ. ಇವರೆಲ್ಲರೂ ಸರ್ಕಾರಿ ಹುದ್ದೆಗಳ ನಿರೀಕ್ಷೆಯಲ್ಲಿದ್ದು, ಖಾಲಿ ಹುದ್ದೆಗಳನ್ನು ಸರ್ಕಾರ ಹಂತ ಹಂತವಾಗಿ ಭರ್ತಿ ಮಾಡಬೇಕಿತ್ತು. ಭರ್ತಿ ಮಾಡುವುದಾಗಿ ಸರ್ಕಾರವು ಹೇಳುತ್ತಾ ಬರುತ್ತಿದ್ದರೂ ಇದು ಕಾರ್ಯರೂಪಕ್ಕೆ ಬರುತ್ತಿಲ್ಲ. ಹಾಗಾಗಿ, ಸರ್ಕಾರಿ ನೌಕರಿ ಪಡೆಯಬೇಕೆಂಬ ಆಸೆ ಇಟ್ಟಿಕೊಂಡಿರುವ ಅಭ್ಯರ್ಥಿಗಳ ಕನಸು ಕಮರಿ ಹೋಗುವಂತಾಗಿದೆ.