ಚಿಂತಾಮಣಿ: ನಗರದ ಬೆಂಗಳೂರು ಜೋಡಿ ರಸ್ತೆಯ ಕನ್ನಂಪಲ್ಲಿ ಬಡಾವಣೆಯ ಹಳೇ ಆರ್ಟಿಒ ಕಚೇರಿ ಹಿಂಭಾಗದ ವೈದ್ಯಾಧಿಕಾರಿ ಡಾ.ವಿ.ಮನೋಜಾ ಅವರ ಮನೆಯ ಬೀಗ ಮುರಿದು ನಗದು ಹಾಗೂ ಚಿನ್ನಾಭರಣ ಕಳವು ಮಾಡಲಾಗಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ತೆರ್ನಹಳ್ಳಿಯಲ್ಲಿ ಪಶುವೈದ್ಯಾಧಿಕಾರಿಯಾಗಿರುವ ಡಾ.ವಿ.ಮನೋಜಾ ಅವರು ಏ.11 ರಂದು ಪತಿ ಹರಿಪ್ರಸಾದ್ ಅವರೊಂದಿಗೆ ಸಂಬಂಧಿಕರ ಮನೆ ಬಿಲ್ಲಾಂಡ್ಲಹಳ್ಳಿಗೆ ತೆರಳಿದ್ದರು.ರಾತ್ರಿ ಮನೆಗೆ ಬಂದು ನೋಡಿದಾಗ ಬೀರುವಿನಲ್ಲಿದ್ದ ಲಾಕರ್ ಮುರಿದಿರುವುದನ್ನು ಕಂಡು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರಿಗೆ ತಿಳಿಸಿದ್ದಾರೆ.
ಸುಮಾರು 10.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 20 ಸಾವಿರ ನಗದು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಶಿವರಾಜ್, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
15 ದಿನಗಳ ಹಿಂದೆ ಬಡಾವಣೆಯ ಶಿಕ್ಷಕ ಮಂಜುನಾಥ್ ಎಂಬುವರ ಮನೆಯ ಬೀಗ ಮುರಿದು 35 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಲಾಗಿತ್ತು. ಪೊಲೀಸರು ಸಾರ್ವಜನಿಕರಿಗೆ ಜಾಗೃತಿ ಸಭೆ ನಡೆಸಿದ ಮರುದಿನವೇ ಮತ್ತೊಂದು ಮನೆಯಲ್ಲಿ ಕಳ್ಳತನವಾಗಿರುವುದು ಜನರನ್ನು ಭಯಭೀತರನ್ನಾಗಿಸಿದೆ.