ಈ ಸಂದರ್ಭದಲ್ಲಿ ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀ ಬಸವರಾಜ ಹೂಗಾರ್, ಉಪ ನಿರ್ದೇಶಕಿ ಶ್ರೀಮತಿ ಜಗದೀಶ್ವರಿ ಅ. ನಾಸಿ, ರಂಗಾಯಣದ ಆಡಳಿತಾಧಿಕಾರಿ ಸಿದ್ರಾಮ ಸಿಂಧೆ ಹಾಗೂ ಯಾದಗಿರಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಉತ್ತರಾದೇವಿ ಮತ್ತು ರಂಗಾಯಣದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. 
ರಾಜ್ಯ

ರಂಗಭೂಮಿ ಬದುಕಿನ ಸಾರ್ಥಕತೆಯ ಪಯಣ

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ರಂಗಾಯಣದಲ್ಲಿ ಸಂವಾದ
  • ಅರುಂಧತಿ ನಾಗ್
ಕಲಬುರಗಿ: ನಗರದ ರಂಗಾಯಣದ ವತಿಯಿಂದ ಫೆಬ್ರವರಿ 20ರಂದು ರೆಪರ್ಟರಿ ಕಲಾವಿದರಿಗಾಗಿ ಖ್ಯಾತ ಹಿರಿಯ ರಂಗಕರ್ಮಿ ಹಾಗೂ ಚಿತ್ರನಟಿ ಅರುಂಧತಿ ನಾಗ್ ಅವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ರಂಗಾಯಣದ ನಿರ್ದೇಶಕರು ಅರುಂಧತಿ ನಾಗ್ ಅವರಿಗೆ ಪುಸ್ತಕವನ್ನು ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು. ರಂಗಾಯಣದ ತಂತ್ರಜ್ಞ ಹಾಗೂ ಕಲಾವಿದ ಶ್ರೀನಿವಾಸ ದೋರನಹಳ್ಳಿ ಅವರು ಅರುಂಧತಿ ನಾಗ್ ಅವರ ರಂಗಭೂಮಿ ಮತ್ತು ಸಿನಿಮಾ ಸಾಧನೆಯ ಕಿರು ಪರಿಚಯ ಮಾಡಿಕೊಟ್ಟರು.
ತಮ್ಮ ರಂಗ ಪಯಣದ ಕುರಿತು ಮಾತನಾಡಿದ ಅರುಂಧತಿ ನಾಗ್ ಅವರು, ನನ್ನ ಆರಂಭದ ಜೀವನ ಮುಂಬಯಿಯಲ್ಲಿ ಕಳೆಯಿತು. ಅಲ್ಲಿನ ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮರಾಠಿ, ಗುಜರಾತಿ, ಹಿಂದಿ ಹಾಗೂ ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಒಮ್ಮೆ ತಿಂಗಳಿಗೆ 42 ಪ್ರದರ್ಶನ ನೀಡಿದ ದಾಖಲೆಯೂ ಇದೆ, ಎಂದು ನೆನಪು ಮಾಡಿಕೊಂಡರು. ಶಂಕರನಾಗ್ ಅವರೊಂದಿಗಿನ ಪರಿಚಯ, ವಿವಾಹ ಹಾಗೂ ಬೆಂಗಳೂರಿನಲ್ಲಿ ನೆಲೆಸಿ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ದಿನಗಳನ್ನು ಮೆಲುಕು ಹಾಕಿದರು.
ನೋಡಿ ಸ್ವಾಮಿ ನಾವಿರೋದು ಹೀಗೆ, ಆಕ್ಸಿಡೆಂಟ್, ಗೋಲಿಬಾರ್, ಪರಮೇಶಿಯ ಪ್ರೇಮ ಪ್ರಸಂಗ ಹಾಗೂ ಹಿಂದಿಯ ದಿಲ್ ಸೇ ಮತ್ತು ಪಾ ಚಿತ್ರಗಳಲ್ಲಿನ ಅಭಿನಯದ ಬಗ್ಗೆ ಮಾಹಿತಿ ಹಂಚಿಕೊಂಡರು.
ಶಂಕರನಾಗ್ ನಿರ್ದೇಶನದ ಒಂದು ಮುತ್ತಿನ ಕಥೆ, ಚಿತ್ರಕ್ಕೆ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಹಂಚಿಕೊಂಡರು. ಪತಿಯ ಅಗಲಿಕೆಯ ನಂತರ ಅವರ ಕನಸಿನ ಯೋಜನೆಯಾದ ರಂಗಶಂಕರವನ್ನು ಕಟ್ಟಿ ಬೆಳೆಸಿದ ಸವಾಲುಗಳ ಕುರಿತು ಮಾತನಾಡಿದ ಅವರು ರಂಗಭೂಮಿಯ ಮೇಲಿನ ಪ್ರೀತಿಯಿಂದಲೇ ಕಳೆದ 50 ವರ್ಷಗಳನ್ನು ಇಲ್ಲಿ ಕಳೆದಿದ್ದೇನೆ ಎಂದರು.
ರಂಗಾಯಣದ ರೆಪರ್ಟರಿ ಕಲಾವಿದರು ಅರುಂಧತಿ ನಾಗ್ ಅವರೊಂದಿಗೆ ಮುಕ್ತವಾಗಿ ಸಂವಾದ ನಡೆಸಿದರು. ರಂಗಭೂಮಿಯಲ್ಲಿ ಸುದೀರ್ಘ ಕಾಲ ಉಳಿಯುವುದು ಹೇಗೆ? ಮಹಿಳಾ ಕಲಾವಿದರು ಎದುರಿಸುತ್ತಿರುವ ಸವಾಲುಗಳು. ಸಿನಿಮಾ ರಂಗ ಪ್ರವೇಶಿಸಲು ಬೇಕಾದ ಸಿದ್ಧತೆಗಳೇನು?
ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಲಾವಿದರಲ್ಲಿದ್ದ ಗೊಂದಲಗಳನ್ನು ಪರಿಹರಿಸಿ ಆತ್ಮವಿಶ್ವಾಸ ತುಂಬಿದರು.
ಈ ಸಂದರ್ಭದಲ್ಲಿ ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀ ಬಸವರಾಜ ಹೂಗಾರ್, ಉಪ ನಿರ್ದೇಶಕಿ ಶ್ರೀಮತಿ ಜಗದೀಶ್ವರಿ ಅ. ನಾಸಿ, ರಂಗಾಯಣದ ಆಡಳಿತಾಧಿಕಾರಿ ಸಿದ್ರಾಮ ಸಿಂಧೆ ಹಾಗೂ ಯಾದಗಿರಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಉತ್ತರಾದೇವಿ ಮತ್ತು ರಂಗಾಯಣದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.