ರಾಯಚೂರು ಕರ್ನಾಟಕ ಕುರಿ ಅಭಿವೃದ್ಧಿ ನಿಗಮದ ಅಡಿಯಲ್ಲಿ ಕುರಿಗಾಹಿಗಳಿಗೆ ಒದಗಿಸುವ ಸಾಲ ಹಾಗೂ ಇತರೆ ಸೌಲಭ್ಯಗಳ ಆಯ್ಕೆ ಸಮಿತಿಗೆ ಯಾವುದೇ ರಾಜಕಾರಣ ಮಾಡದೆ ಜಿಪಂ ಸಿಇಓ ಅವರಿಗೆ ಸಮಿತಿಗೆ ಅಧ್ಯಕ್ಷರನ್ನಾಗಿ ಮುಂದುವರೆಸುವಂತೆ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ರಾಜ್ಯ ನಿದೇರ್ಶಕ ಶಾಂತಗೌಡ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುರಿ ಸಾಕಾಣಿಕೆದಾರರು ಹಾಗೂ ಕುರಿಗಾಹಿಗಳಿಗಿರುವ ಹಲವು ಯೋಜನೆಗಳ ಸೌಲಭ್ಯಗಳು ನೈಜ ಫಲಾನುಭವಿಗಳಿಗೆ ಸಿಗುವಂತಾಗಲು ಕುರಿ ಸಾಕಾಣಿಕೆದಾರರ ಸಂಘಗಳ ಪಾತ್ರ ಬಹುಮುಖ್ಯವಾಗಿರುತ್ತದೆ.
ಅದರಂತೆ ಸರ್ಕಾರದಿಂದ ಕುರಿ ಸಾಕಾಣಿಕೆದಾರರಿಗೆ ಇರುವ ಸಾಲ, ಧನಸಹಾಯ ಸೌಲಭ್ಯಗಳ ಆಯ್ಕೆ ಸಮಿತಿಯಲ್ಲಿ ಸಂಘಗಳನ್ನು ಸದಸ್ಯರನ್ನಾಗಿ ಪರಿಗಣಿಸಲಾಗಿತ್ತು. ಜಿ.ಪಂ ಸಿಇಓ ಅವರು ಈ ಸಮಿತಿಯ ಅಧ್ಯಕ್ಷರಾಗಿ ದ್ದರು ಆದರೆ, ಇದೀಗ ಸರ್ಕಾರದಿಂದ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿಸಿ ಆದೇಶ ಹೊರಡಿಸಲಾಗಿದ್ದು,
ಇದರಿಂಅದ ನೈಜ ಫಲಾನುಭವಿಗಳಿಗೆ ಸೌಲಭ್ಯಗಳು ಸಿಗದೇ ಕೇವಲ ಶಾಸಕ ಕಾರ್ಯಕರ್ತರಿಗೆ ಮಾತ್ರ ಸಿಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಕೂಡಲೇ ಶಾಸಕರನ್ನು ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದನ್ನು ಕೈಬಿಟ್ಟು, ಮೊದಲಿನಂತೆ ಜಿಲ್ಲಾ ಪಂಚಾಯತ್ ಸಿಇಓ ಅವರನ್ನು ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀನಿವಾಸ ಏಗನೂರು, ಮಲ್ಲಿಕಾರ್ಜುನ ಗೌಡನಭಾವಿ, ಹನುಮಂತ, ಮಾಳಪ್ಪ, ಶರಣಪ್ಪ ಇದ್ದರು.