ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯ ಜನಪ್ರಿಯ ನಟ, ನಿರ್ಮಾಪಕ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಚಂದನವನವನ್ನು ಆಘಾತಕ್ಕೀಡು ಮಾಡಿದೆ. ಆದರೆ, ಅವರ ಸಾವಿನ ಬೆನ್ನಲ್ಲೇ ಒಂದು ಗಂಭೀರ ಚರ್ಚೆ ಮುನ್ನೆಲೆಗೆ ಬಂದಿದೆ. ಎದೆನೋವು ಕಾಣಿಸಿಕೊಂಡಾಗ ದಿಲೀಪ್ ರಾಜ್ ಅವರು ತೆಗೆದುಕೊಂಡ ಆ ಒಂದು ನಿರ್ಧಾರ ಅವರ ಪ್ರಾಣಕ್ಕೆ ಕುತ್ತು ತಂದಿತೇ? ಎಂಬ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ.
ಸ್ಮಾರ್ಟ್‌ವಾಚ್ ನೀಡಿದ ತಪ್ಪಾದ ಭರವಸೆ?
ವರದಿಗಳ ಪ್ರಕಾರ, ಮೇ 12ರ ರಾತ್ರಿ ದಿಲೀಪ್ ರಾಜ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆದರೆ, ಆ ಕ್ಷಣದಲ್ಲಿ ಅವರು ಆಸ್ಪತ್ರೆಗೆ ಧಾವಿಸುವ ಬದಲು, ತಮ್ಮ ಕೈಯಲ್ಲಿದ್ದ 'ಸ್ಮಾರ್ಟ್‌ವಾಚ್' (Smartwatch) ಮೂಲಕ ಹೃದಯ ಬಡಿತವನ್ನು (Heart Rate) ಪರೀಕ್ಷಿಸಿಕೊಂಡಿದ್ದರು ಎನ್ನಲಾಗಿದೆ. ಸ್ಮಾರ್ಟ್‌ವಾಚ್‌ನಲ್ಲಿ ಹೃದಯ ಬಡಿತ ಸಾಮಾನ್ಯವಾಗಿದೆ ಎಂದು ತೋರಿಸಿದ ಕಾರಣ, ಅವರು ಅದನ್ನು ಸಾಮಾನ್ಯ ಅಸ್ವಸ್ಥತೆ ಎಂದು ಭಾವಿಸಿ ಆಸ್ಪತ್ರೆಗೆ ಹೋಗುವುದನ್ನು ತಡ ಮಾಡಿದ್ದರು ಎನ್ನಲಾಗಿದೆ.
ರಾತ್ರಿ ಕಳೆಯುತ್ತಿದ್ದಂತೆ ನೋವು ತೀವ್ರಗೊಂಡಿದೆ, ಆನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಕೇವಲ ತಾಂತ್ರಿಕ ಉಪಕರಣವೊಂದನ್ನು ನಂಬಿ ವೈದ್ಯಕೀಯ ಚಿಕಿತ್ಸೆಯನ್ನು ವಿಳಂಬ ಮಾಡಿದ್ದು ಇಂತಹ ಘೋರ ದುರಂತಕ್ಕೆ ಕಾರಣವಾಯಿತೇ ಎಂಬ ಅನುಮಾನ ವ್ಯಕ್ತವಾಗಿದೆ.
ವೈದ್ಯರು ಹೇಳುವುದೇನು?
ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಮಧ್ಯವಯಸ್ಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವೈದ್ಯಕೀಯ ತಜ್ಞರು, "ಸ್ಮಾರ್ಟ್‌ವಾಚ್‌ಗಳು ಕೇವಲ ಮೇಲ್ಪದರದ ಮಾಹಿತಿ ನೀಡುತ್ತವೆ. ಅವು ವೈದ್ಯಕೀಯ ದರ್ಜೆಯ ಇಸಿಜಿ (ECG) ಅಥವಾ ಕಾರ್ಡಿಯಾಕ್ ಪರೀಕ್ಷೆಗಳಿಗೆ ಪರ್ಯಾಯವಲ್ಲ. ಎದೆನೋವು ಕಾಣಿಸಿಕೊಂಡಾಗ 'ಗೋಲ್ಡನ್ ಅವರ್' (Golden Hour) ಅಂದರೆ ಮೊದಲ ಒಂದು ಗಂಟೆ ಅತ್ಯಂತ ನಿರ್ಣಾಯಕ. ಆ ಸಮಯದಲ್ಲಿ ಸ್ಮಾರ್ಟ್‌ವಾಚ್ ರೀಡಿಂಗ್ ನೋಡಿ ಸುಮ್ಮನಿರುವುದು ಪ್ರಾಣಕ್ಕೇ ಅಪಾಯ ತರಬಹುದು," ಎಂದು ಎಚ್ಚರಿಸಿದ್ದಾರೆ.
ಪ್ರತಿಭಾನ್ವಿತ ಕಲಾವಿದನ ಅಂತಿಮ ಪಯಣ
ದಿಲೀಪ್ ರಾಜ್ ಕೇವಲ ನಟರಾಗಿ ಮಾತ್ರವಲ್ಲದೆ, 'ಮಿಲನ'ದಂತಹ ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಿಸುವ ಮೂಲಕ ಕನ್ನಡ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದ್ದರು. ನಟನಾಗಿ 'ಸಂತೋಷ', 'ಮಿಲನ' ಸಿನಿಮಾಗಳಲ್ಲಿ ಗಮನ ಸೆಳೆದಿದ್ದರು. ಅವರ ಸರಳ ವ್ಯಕ್ತಿತ್ವ ಮತ್ತು ಕೆಲಸದ ಬದ್ಧತೆ ಉದ್ಯಮದಲ್ಲಿ ಎಲ್ಲರಿಗೂ ಮಾದರಿಯಾಗಿತ್ತು.
ಅವರ ನಿಧನಕ್ಕೆ ಮುಖ್ಯಮಂತ್ರಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. "ಒಬ್ಬ ದಕ್ಷ ನಿರ್ಮಾಪಕ ಹಾಗೂ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ" ಎಂದು ಅವರ ಸಹೋದ್ಯೋಗಿಗಳು ಕಣ್ಣೀರಿಟ್ಟಿದ್ದಾರೆ,(ಏಜೆನ್ಸೀಸ್).