ಮೈಸೂರು: ಕನ್ನಡನಾಡಿನ ಸಾಂಸ್ಕೃತಿಕ ಸೊಬಗು, ಪರಂಪರೆಯ ಮೆರುಗನ್ನು ಮೇಳೈಸಿದ ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆಯ ಸಿರಿತನ ಸಹಸ್ರಾರು ಜನಸ್ತೋಮದ ಮನಗೆದ್ದು ಭಾವಪರವಶಗೊಳಿಸಿತು...!
ಅರಮನೆ ನಗರಿ ಮೈಸೂರಿನ ರಾಜಪಥದಲ್ಲಿ ಬುಧವಾರ ವಿಜಯದಶಮಿ ಮೆರವಣಿಗೆಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ "ಪ್ರಶಾಂತ" ಆನೆ ಯಶಸ್ವಿಯಾಗಿ ಜನಸಾಗರದ ಮೆಚ್ಚುಗೆಗೆ ಪಾತ್ರನಾದ. 18 ವರ್ಷದಿಂದ ನಾಡಹಬ್ಬದಲ್ಲಿ ಭಾಗಿಯಾಗುತ್ತಿರುವ 54 ವರ್ಷದ ಈತ, 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿ ಮೂರ್ತಿಯನ್ನು ಹೊತ್ತು ರಾಜಬೀದಿಯಲ್ಲಿ ಸಾಗಿ ನೂತನ "ಗಜನಾಯಕ" ಎನಿಸಿಕೊಂಡು, ನಂಬಿಕೆಯನ್ನೂ ಉಳಿಸಿಕೊಂಡ. ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಈತನ ನಯನ ಮನೋಹರ ದೃಶ್ಯಕ್ಕೆ ಜನರು ಮೂಕವಿಸ್ಮಿತರಾದರು. ಅಧಿದೇವತೆಯನ್ನು ಕಂಡ ಸಾವಿರಾರು ಜನ, ಭಕ್ತಿ-ಭಾವದಿಂದ ಪುನೀತರಾಗಿ ಉಘೇ...ಉಘೇ ಎಂದು ಜಯಕಾರ ಹಾಕಿ ಧನ್ಯತಾಭಾವ ಮೆರೆದರು.
ಸಚಿವ ಸಂಪುಟದ ಕೆಲ ಸಹೋದ್ಯೋಗಿಗಳು, ಶಾಸಕರು ಮೊದಲಾದವರೊಂದಿಗೆ ಹೈಟೆಕ್ ವ್ಯಾನ್ನಲ್ಲಿ ತೆರಳಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅರಮನೆ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 1.45ರಲ್ಲಿ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ನಮಸ್ಕರಿಸಿದರು.
ಅರಮನೆ ಅಂಗಳದಿಂದ ಚಿತ್ತಾಕರ್ಷಕ ಮೆರವಣಿಗೆಗೆ ಚಾಲನೆ ದೊರೆಯಿತು. ಗಜಪಡೆಗೆ ಹೂವಿನ ಸ್ವಾಗತ ಕೋರಿದ್ದು ಈ ಸಲದ ಮತ್ತೊಂದು ವೈಶಿಷ್ಟ್ಯ. ನಿಶಾನೆ ಆನೆಯಾಗಿ ದಾರಿ ತೋರಿಸಿದ ಗಜಪಡೆಯ ಮಾಜಿ ನಾಯಕ ಅಭಿಮನ್ಯು ಜನಸಾಗರವನ್ನು ಕಂಡು ಸೊಂಡಿಲು ಎತ್ತಿ ಸಲಾಂ ಹೊಡೆಯಿತು. ನೌಫತ್ ಆನೆಯಾಗಿ ಗೋಪಿ ಕಾರ್ಯನಿರ್ವಹಿಸಿತು. ಇವುಗಳನ್ನು ಹಿಂಬಾಲಿಸಿದ ಸಾಲಾನೆಗಳಾದ ಲಕ್ಷ್ಮಿ, ಮಹೇಂದ್ರ, ಶ್ರೀರಾಮ, ಚೈತ್ರಾ, ಸುಗ್ರೀವ, ಏಕಲವ್ಯ, ಶ್ರೀಕಂಠ ಸಹ ಗಾಂಭಿರ್ಯದಿಂದ ಹೆಜ್ಜೆ ಹಾಕಿದವು. ಇವುಗಳ ಬೆನ್ನಲ್ಲೇ ಜಾನಪದ ಕಲಾಪ್ರಪಂಚ, ಸ್ತಬ್ಧಚಿತ್ರಗಳ ಶ್ರೀಮಂತಿಕೆಯೂ ಅನಾವರಣಗೊಂಡಿತು.
ಕೇರಳ, ತೆಲಂಗಾಣ ಸಿಎಂಗಳು ಭಾಗಿ
ಮೊದಲ ಬಾರಿಗೆ ಕೇರಳ ಸಿಎಂ ವಿ.ಡಿ.ಸತೀಶನ್, ತೆಲಂಗಾಣದ ಸಿಎಂ ಎ.ರೇಮಂತ ರೆಡ್ಡಿ ಸಾಕ್ಷಿಯಾಗಿದ್ದು ಹೊಸ ಸಂಪ್ರದಾಯಕ್ಕೂ ನಾಂದಿ ಹಾಡಿತು.
ವಿದೇಶಿ ರಾಯಭಾರಿಗಳ ಸಡಗರ
ಮೊದಲ ಬಾರಿಗೆ ವಿದೇಶಿ ರಾಯಭಾರಿಗಳು ಭಾಗಿಯಾಗಿ ಸಂಭ್ರಮಿಸಿದರು. ಪ್ರತಿ ವರ್ಷ ವಿದೇಶಿಯರು ಬರುವುದು ಸಾಮಾನ್ಯ. 13 ವಿದೇಶಿ ರಾಯಭಾರಿಗಳು ಆಗಮಿಸಿದ್ದು ಈ ಸಲದ ವೈಶಿಷ್ಟ್ಯ.
ದ್ವೇಷ ದೂರವಾಗಿ, ಸಾಮರಸ್ಯ ಬೆಳೆಯಬೇಕು. ಅಭಿವೃದ್ಧಿಯ ಬೆಳಕು ಪ್ರತಿ ಮನೆ ಮನೆಗೂ ತಲುಪಬೇಕು ಎಂಬುದು ನಮ್ಮ ಸಂಕಲ್ಪ. ಅನ್ಯಾಯ ಅಳಿಯಬೇಕು, ಸಮಾನತೆ ಬೆಳಗಬೇಕು. ಕಷ್ಟಗಳು ಕರಗಬೇಕು. ರೈತರು, ಯುವಕರ ಬದುಕು ಬೆಳಗಬೇಕು. ರಾಜ್ಯದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಬೇಕು ಎಂದು ತಾಯಿ ಚಾಮುಂಡೇಶ್ವರಿ ಬಳಿ ಪ್ರಾರ್ಥಿಸಿದ್ದೇವೆ. ತಾಯಿಯ ಆಶೀರ್ವಾದ ನಮ್ಮೆಲ್ಲರ ಶಕ್ತಿ, ಜನಸೇವೆಯೇ ನಮ್ಮ ಭಕ್ತಿ.ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ
ನೆತ್ತಿ ಸುಡುವ ಬಿಸಿಲು ಲೆಕ್ಕಿಸದೆ ದೇವಿಯ ದರ್ಶನಕ್ಕಾಗಿ ಕಾಯುತ್ತಿದ್ದ ಜನಸಾಗರದ ಕಡೆಯಿಂದ ನಾಡದೇವಿಗೆ ಜೈಕಾರ ಹೊರಹೊಮ್ಮಿತು. ಅರಮನೆ ಆವರಣದ ಒಂದು ಬದಿಯಲ್ಲಿ 21 ಕುಶಾಲತೋಪುಗಳ ಭಾರಿ ಸದ್ದು ರಿಂಗಣಿಸಿತು. ಕರ್ನಾಟಕ ಪೊಲೀಸ್ ಬ್ಯಾಂಡ್ ವೃಂದದಿಂದ ರಾಷ್ಟ್ರಗೀತೆಯ ಹಿಮ್ಮೇಳಕ್ಕೆ ಎಲ್ಲರೂ ನಿಂತು ಗೌರವ ಸಲ್ಲಿಸಿದರು. ಇದ್ಯಾವ ಶಬ್ದಕ್ಕೂ, ಚಟುವಟಿಕೆಗೂ ಗಮನ ಕೊಡದೆ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ಗಜ ಸಮೂಹವನ್ನು ಕಂಡು ಜನರು ರೋಮಾಂಚನಗೊಂಡು ಖುಷಿಯ ಹೊನಲಲ್ಲಿ ತೇಲಿದರು.
ಎಲ್ಲೆಡೆ ಜನಪ್ರವಾಹ
ಹನ್ನೊಂದು ದಿನದ ನವರಾತ್ರಿಯ ಕಡೇ ದಿನ ಬೆಳಗ್ಗೆಯಿಂದ ರಾತ್ರಿಯವರೆಗೂ ಮೈಸೂರಿನ ಹೃದಯಭಾಗದಲ್ಲಿ ಎಲ್ಲಿ ನೋಡಿದರೂ ಜನಪ್ರವಾಹವೇ. ಮೆರವಣಿಗೆ ಸಾಗುವ ಅರಮನೆಯಿಂದ ಹಿಡಿದು ಬನ್ನಿಮಂಟಪದವರೆಗಿನ ಸುಮಾರು 5 ಕಿ.ಮೀ. ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ಸ್ಥಳಿಯರು, ರಾಜ್ಯ ಹಾಗೂ ಹೊರ ರಾಜ್ಯದವರು, ವಿದೇಶಿಯರು, ಮಹಿಳೆಯರು, ಮಕ್ಕಳು ಸೇರಿ ಸಹಸ್ರಾರು ಜನ ಸಾಕ್ಷಿಯಾಗುವ ಮೂಲಕ ನಾಡಹಬ್ಬವನ್ನು ಅಕ್ಷರಶಃ "ಪ್ರಜಾ ದಸರಾ"ವಾಗಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ರಾಜಬೀದಿಯಲ್ಲಿ ನೂಕುನುಗ್ಗಲು ಉಂಟಾಗಿ 30ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕೆಲ ಕಡೆ ಲಾಠಿ ರುಚಿಯನ್ನೂ ತೋರಿಸಿದರು.
ಗಮನಸೆಳೆದ ಸ್ತಬ್ಧಚಿತ್ರಗಳು
ವಿವಿಧ ಜಿಲ್ಲೆಗಳ ವೈವಿಧ್ಯತೆ ತುಂಬಿದ, ವಿವಿಧ ಇಲಾಖೆಗಳ 53 ಸ್ತಬ್ಧಚಿತ್ರಗಳ ಶ್ರೀಮಂತಿಕೆ ಕಳೆಗಟ್ಟಿತ್ತು. 5 ಹೊರ ರಾಜ್ಯಗಳ ಟ್ಯಾಬ್ಲೊಗಳೂ ಭಾಗಿಯಾಗಿದ್ದು ಈ ಸಲದ ವಿಶೇಷ. ಜೀವಂತ ಪರಂಪರೆಗಳ ನಾಡು ಕೇರಳ ಹಾಗೂ ಜಲ್ಲಿಕಟ್ಟು ಹೋರಿಯ ತಮಿಳುನಾಡಿನ ಸ್ತಬ್ಧಚಿತ್ರಗಳು ಆ ರಾಜ್ಯದ ಸಂಸ್ಕೃತಿಯನ್ನು ಪರಿಚಯಿಸಿದವು. ಇದರೊಂದಿಗೆ "ಆಕಾಶದಲ್ಲಿ ಸ್ವಾವಲಂಬನೆ, ನೆಲದ ಮೇಲೆ ಸಾಮರ್ಥ್ಯ' ಬಿಂಬಿಸಿದ ಎಚ್ಎಎಲ್, ಪಿನಾರಾ ವ್ಯವಸ್ಥೆಯ ಭಾರಿ ವಾಹನದ ಬಿಇಎಂಎಲ್, ಕೈಗಡಿಯಾರ ಎಚ್ಎಂಟಿ, ನವ ಮಂಗಳೂರು ಬಂದರು, ಸಿಎಸ್ಐಆರ್ ವೈಮಾನಿಕ ಪ್ರಯೋಗ ಶಾಲೆ, ಭಾರತೀಯ ರೈಲ್ವೆ, "ಚಕ್ರಗಳ ಮೇಲೆ ರೆಕ್ಕೆಗಳ ಕನಸು' ಭಾರತೀಯ ವಾಯುಪಡೆಯ ಸ್ತಬ್ಧಚಿತ್ರಗಳು ಜನಾಕರ್ಷಿಸಿದವು.
ಕಲಾ ಸಿರಿತನಕ್ಕೆ ಮನಸೋತ ಜನ
ವಿವಿಧ ಜಾನಪದ ಕಲಾತಂಡಗಳು ಕಲಾಸಿರಿತನವನ್ನು ಪ್ರಸ್ತುತಪಡಿಸಿ ಮೆರವಣಿಗೆಯ ಸೌಂದರ್ಯವನ್ನು ವೃದ್ಧಿಸಿದವು. ಬಿಸಿಲಿನ ನಡುವೆಯೂ ಜಾನಪದ ಕಲಾ ತಂಡಗಳು ಬಿರುಸಿನ ಪ್ರದರ್ಶನ ನೀಡಿ ಕನ್ನಡ ನಾಡಿನ ಕಲೆ, ಸಂಸ್ಕೃತಿ ತೆರೆದಿಟ್ಟವು. ಕೇರಳದ ಕರಗಟ್ಟಂ, ಪಶ್ಚಿಮ ಬಂಗಾಳದ ಜುಮರ್ ಕಲೆ, ಗುಜರಾತ್ನ ಗರ್ಭಾ ನೃತ್ಯ, ಮಣಿಪುರ ಜಾನಪದ, ತಮಿಳುನಾಡಿನ ಜಾನಪದ ನೃತ್ಯ ಈ ಸಲದ ವೈಶಿಷ್ಟ್ಯ. ಒಂದು ಕಲೆಯನ್ನು ಬಿಂಬಿಸಲು ಒಂದು ತಂಡಕ್ಕೆ ಮಾತ್ರ ಅವಕಾಶ ನೀಡಿದ್ದರಿಂದ ಪುನರಾವರ್ತನೆ ಕಾಣಲಿಲ್ಲ.
ಚೆಲುವು ಹೆಚ್ಚಿಸಿದ ರಕ್ಷಣಾ ಪಡೆಗಳು
ಪ್ರಥಮ ಬಾರಿಗೆ ದೇಶದ ರಕ್ಷಣಾ ಪಡೆಗಳು ದಸರೆಯ ಚೆಲುವು ಹೆಚ್ಚಿಸಿದವು. ಯೋಧರ ಶೌರ್ಯ, ತಾಂತ್ರಿಕ ಉಪಕರಣಗಳನ್ನು ಪ್ರಸ್ತುತಪಡಿಸುವ ಮೂಲಕ ಭೂ, ನೌಕಾ, ವಾಯುದಳದ ಸೈನಿಕರು ಹೆಜ್ಜೆ ಹಾಕಿದರು. ಭಾರತೀಯ ನೌಕಾಪಡೆ ಸ್ತಬ್ಧಚಿತ್ರ, ನೆವಿ ಬ್ಯಾಂಡ್, ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗಿಯಾಗುವ ಆರ್ಮಿ ಬ್ಯಾಂಡ್ನಿಂದ ನಿನಾದ ಝೇಂಕರಿಸಿತು.
ಪಂಜಿನ ಕವಾಯತು ಕಮಾಲ್
ಬನ್ನಿಮಂಟಪದಲ್ಲಿ ಸಂಜೆ ನಡೆದ ಪಂಜಿನ ಕವಾಯತು ವಿವಿಧ ಸಾಹಸ ಪ್ರದರ್ಶನ ಮೈನವಿರೇಳಿಸಿತು. ಸಾಹಸ ಪ್ರದರ್ಶನಕಾರರು ಅನುಭವ, ಪ್ರತಿಭೆಯನ್ನು ಧಾರೆ ಎರೆಯುವ ಮೂಲಕ ಕಿಕ್ಕಿರಿದು ತುಂಬಿದ್ದ ಜನರನ್ನು ಪುಳಕಿತಗೊಳಿಸಿದರು. ಆಕರ್ಷಕ ಪರೇಡ್, ಮುದ ನೀಡಿದ ಪೊಲೀಸ್ ಬ್ಯಾಂಡ್ನ ಹಿಮ್ಮೇಳ ಚೆಲುವು ತಂದುಕೊಟ್ಟರೆ, ಅಶ್ವಾರೋಹಿ ಪಡೆಯು ಪ್ರದರ್ಶಿಸಿದ "ಟೆಂಟ್ ಪೆಗ್ಗಿಂಗ್', ಮಿಲಿಟರಿ ಪಡೆಯ ವಿವಿಧ ಸಾಹಸಗಳು ರೋಮಾಂಚನಗೊಳಿಸಿತು. ಕೊನೆಯಲ್ಲಿ ಅಂದಾಜು 300 ಪೊಲೀಸ್ ಸಿಬ್ಬಂದಿ ಕಂದೀಲನ್ನು ಹಿಡಿದು ಪಂಜಿನ ಕವಾಯತು ವೈಭವದೊಂದಿಗೆ 2026ನೇ ಸಾಲಿನ ದಸರೆ ಸಂಪನ್ನಗೊಂಡಿತು.
ತಾರಾ ಕಾಂತಿ, ಕ್ರೀಡಾ ಮೆರುಗು
ಜಂಬೂ ಸವಾರಿಗೆ ತಾರಾ ಕಾಂತಿ ದೊರೆಯಿತು. ತೆರೆದ "ಅಂಬಾರಿ'ಯ ಎರಡು ಬಸ್ನಲ್ಲಿ ಸಾಗಿದ ನಟ-ನಟಿಯರಾದ ರವಿಚಂದ್ರನ್, ಡಾಲಿ ಧನಂಜಯ, ದುನಿಯಾ ವಿಜಯ್, ಪ್ರಜ್ವಲ್ ದೇವರಾಜ್, ನಿನಾಸಂ ಸತೀಶ್, ರಮೇಶ್ ಅರವಿಂದ, ಶ್ರೀನಗರ ಕಿಟ್ಟಿ, ತರುಣ್ ಸುಧೀರ್, ಅಜಯ್ರಾವ್, ನಟಿಯರಾದ ಸಪ್ತಮಿಗೌಡ, ರಾಗಿಣಿ, ಸೋನಲ್, ಹಿರಿಯ ನಟರಾದ ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಸುಂದರ್ರಾಜ್, ಜಯಮಾಲಾ, ಭವ್ಯಾ ಇತರರನ್ನು ಕಂಡು ಜನ ಆನಂದಗೊಂಡರು. ತೆರೆದ ಬಸ್ನಲ್ಲಿ ಖ್ಯಾತ ಕ್ರೀಡಾಪಟುಗಳಾದ ಅನಿಲ್ ಕುಂಬ್ಳೆ, ಪ್ಯಾರಾ ಅಥ್ಲೀಟ್ ಶಿಲ್ಪಾ, ಅನೂಪ್ ಶ್ರೀಧರ್, ಶ್ರೇಯಾಂಕ ಪಾಟೀಲ್, ಡಾ.ಎ.ಬಿ.ಸುಬ್ಬಯ್ಯ, ತ್ರಿಲೋತ್ತಮಾ ಸೇನ್, ಮೋಹಿತ್ ಇನ್ನಿತರರು ಮೆರವಣಿಗೆಗೆ ಇನ್ನಷ್ಟು ಶೋಭೆ ತಂದುಕೊಟ್ಟರು.
ವಜ್ರ ಮುಷ್ಟಿ ಕಾಳಗ ರದ್ದು
ಅರಮನೆ ಸಂಪ್ರದಾಯದಂತೆ ವಿಜಯದಶಮಿ ದಿನ ನಡೆಯಬೇಕಿದ್ದ ಸಾಂಪ್ರದಾಯಿಕ ಮುಷ್ಟಿಕಾಳಗಕ್ಕೆ ಪೊಲೀಸರ ನಿರ್ಬಂಧದಿಂದ ಅಡಚಣೆ ಉಂಟಾಗಿದ್ದು, ಕಾಳಗ ನಡೆಯದೆಯೇ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯಯಾತ್ರೆ ನಡೆಸಿದರು. ಅರಮನೆಯಿಂದ ನೀಡಿದ್ದ ಪ್ರವೇಶ ಪಾಸ್ಗಳನ್ನು ಹೊಂದಿದ್ದ ಜಟ್ಟಿ ಪೈಲ್ವಾನರು ಹಾಗೂ ಉಸ್ತಾದ್ಗಳಿಗೆ ಅರಮನೆಯೊಳಗೆ ಪ್ರವೇಶಿಸಲು ಪೊಲೀಸರು ಅವಕಾಶ ನೀಡಲಿಲ್ಲ ಎನ್ನಲಾಗಿದೆ. ಇದರಿಂದ ನಿಗದಿತ ಮುಹೂರ್ತದೊಳಗೆ ಅರಮನೆ ಪ್ರವೇಶಿಸಿ ಕಾಳಗಕ್ಕೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗದೆ, ಸಾಂಪ್ರದಾಯಿಕ ವಜ್ರಮುಷ್ಟಿ ಕಾಳಗ ರದ್ದುಗೊಂಡಿತು.
ಶರನ್ನವರಾತ್ರಿ ಪೂಜೆ ಸಂಪನ್ನ
ವಿಜಯದಶಮಿಯಂದು ಅಂಬಾವಿಲಾಸ ಅರಮನೆಯಲ್ಲಿ ಧಾರ್ಮಿಕ ವಿಧಿ-ವಿಧಾನದ ಪೂಜೆ ಬಳಿಕ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಚಿನ್ನದ ಕಂಕಣ ಬಿಚ್ಚಿದರು. ಆನೆ ಬಾಗಿಲಿನಲ್ಲಿ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳಿಗೆ ಪೂಜೆ ನಡೆದವು. ಮಟ್ಟಿಮಣ್ಣಿಗೆ ಪೂಜೆ ಬಳಿಕ, ಯದುವೀರ ಅವರು, ರಾಜಪೋಷಾಕು ಧರಿಸಿ, ವಿಜಯಯಾತ್ರೆ ಹೊರಟು, ಅರಮನೆ ಆವರಣದ ಉತ್ತರ ಬಾಗಿಲಿನಲ್ಲಿರುವ ಭುವನೇಶ್ವರಿ ದೇವಾಲಯದ ಒಳಗಡೆ ಇರುವ ಶಮಿ ವೃಕ್ಷ (ಬನ್ನಿಮರ)ಕ್ಕೆ ಪೂಜೆ ಸಲ್ಲಿಸಿದರು. ಈ ಮೆರವಣಿಗೆಯಲ್ಲಿ ಪಟ್ಟದ ಆನೆ, ಪಟ್ಟದ ಕುದುರೆ, ಒಂಟೆ ಹಾಗೂ ಹಸುಗಳು ಸಾಥ್ ನೀಡಿದವು. ವಿಜಯಯಾತ್ರೆ ಮುಗಿದ ಬಳಿಕ ಚಿನ್ನದ ಕಂಕಣ ವಿಸರ್ಜನೆ ಮಾಡುವ ಮೂಲಕ ಅರಮನೆಯ ಶರನ್ನವರಾತ್ರಿ ಪೂಜೆಗಳು ಮುಕ್ತಾಯಗೊಂಡವು.
ಮಿಂಚಿದ ಮುಖ್ಯಮಂತ್ರಿ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾವಿರಾರು ಸಾರ್ವಜನಿಕರು, ವಿದೇಶಿ ರಾಯಭಾರಿಗಳ ಸಮ್ಮುಖದಲ್ಲಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಬೆಳಗ್ಗೆ 11ಕ್ಕೆ ನಗರಕ್ಕೆ ಬಂದಿಳಿದವರೇ, ನೇರವಾಗಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದರು. ನಂತರ ಮಠದ ಹೋಮ ಹವನದಲ್ಲಿ ಪಾಲ್ಗೊಂಡರು. ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಸಾಂಪ್ರದಾಯಿಕ ಮೈಸೂರು ಪೇಟ ಧರಿಸಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ನಾಡಿನ ಜನರ ಒಳಿತಿಗೆ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮೈಸೂರಿನ ಶಿಲ್ಪಿ ರಾಜೇಶ್ ತಯಾರಿಸಿದ ಅಜ್ಯಯ್ಯನ ವಿಗ್ರಹವನ್ನು ಸಿಎಂ ಅವರಿಗೆ ನೆನಪಿನ ಕಾಣಿಕೆಯಾಗಿ ನೀಡಲಾಯಿತು. ಅರಮನೆ ಆವರಣದಲ್ಲಿ 5 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅಭಿಮನ್ಯು ನಿಶಾನೆ ಆನೆಯ ಹಣೆಗೆ ಸಿಎಂ ಕೈಯಿಟ್ಟು ಪ್ರಾರ್ಥಿಸಿದರು. ಎಲ್ಲ ಆನೆಗಳಿಗೂ ಪತ್ನಿ ಸಮೇತರಾಗಿ ಕಬ್ಬಿನ ಜಲ್ಲೆ ನೀಡಿ ಆಶೀರ್ವಾದ ಪಡೆದರು. ಹಳ್ಳಿಕಾರ ಹೋರಿಗಳ ಆಶೀರ್ವಾದ ಪಡೆದರು. ತೆರೆದ ವಾಹನದಲ್ಲಿ ಅರಮನೆ ಆವರಣಕ್ಕೆ ಆಗಮಿಸಿದ ಸಿಎಂ, ನೆರೆದಿದ್ದ ಕರುನಾಡ ಜನರಿಗೆ ನಮಸ್ಕರಿಸಿ, ವಿದೇಶಿ ರಾಯಭಾರಿಗಳ ಬಳಿ ತೆರಳಿ ಕುಶಲೋಪರಿ ವಿಚಾರಿಸಿದರು. ಸಂಜೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು, ಡ್ರೋನ್ ಶೋ ಚಿತ್ತಾರಗಳನ್ನು ಕಂಡು ಹರ್ಷಚಿತ್ತರಾದರು.