ಸಂಸದ ಡಾ.ಸಿ.ಎನ್.ಮಂಜುನಾಥ್ 
ರಾಜ್ಯ

ಭಾರತದ ಮಿಲಿಟರಿ ಸಾಮರ್ಥ್ಯ ಜಗತ್ತಿಗೆ ಗೊತ್ತಿದೆ: ಸಂಸದ ಡಾ.ಸಿ.ಎನ್.ಮಂಜುನಾಥ್-The world knows India's military power

ಬೆಂಗಳೂರು: ಕಾರ್ಗಿಲ್ ಯುದ್ಧವು ಭಾರತದ ಮಿಲಿಟರಿ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಿದರೆ, ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಿಂದ ದೇಶದ ರಕ್ಷಣಾ ಶಕ್ತಿಯನ್ನು ಇಡೀ ಜಗತ್ತು ಮೆಚ್ಚಿಗೊಂಡಿದೆ. ಹಾಗಾಗಿ, ವಿಶ್ವದ ಯಾವ ರಾಷ್ಟ್ರವು ನಮ್ಮ ಮೇಲೆ ಆಕ್ರಮಣ ಮಾಡಿದರೆ ನಾವು ಗೆಲ್ಲುತ್ತೇವೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’, ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ‘ ಕಾರ್ಗಿಲ್ ವಿಜಯ್ ದಿವಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸದರು, ವೀರ ಯೋಧರ ಶೌರ್ಯ ಸ್ಮರಿಸಿ ರಾಷ್ಟ್ರಭಕ್ತಿಯ ಸಂದೇಶ ಸಾರುವ ಮೂಲಕ ಕಾರ್ಗಿಲ್ ವಿಜಯದ ಮಹತ್ವ, ಭಾರತೀಯ ಸೇನೆಯ ಶೌರ್ಯ ಹಾಗೂ ದೇಶಭಕ್ತಿಯ ಕುರಿತು ಪ್ರೇರಣಾದಾಯಕವಾಗಿ ಭಾಷಣ ಮಾಡಿದರು.
ಕಾರ್ಗಿಲ್ ಯುದ್ಧ ಬಹಳ ವಿಶೇಷವಾದದ್ದು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅತಿ ಎತ್ತರದ ಪ್ರದೇಶದಲ್ಲಿ ಭಾರತದ ಸೈನಿಕರು ಕೆಳಗಡೆ ಮತ್ತು ಪಾಕಿಸ್ತಾನದ ಸೈನಿಕರು ಮೇಲುಗಡೆ ಇದ್ದರು. ಪ್ರತಿಕೂಲ ವಾತಾವರಣದಲ್ಲಿ ಯುದ್ಧ ಮಾಡುವುದು ಸುಲಭವಲ್ಲ. ಕೊರೆಯುವ ಚಳಿ,ಮಂಜಿನಲೂ ಸೈನಿಕರು ಮತ್ತು ವಾಯುಸೇನೆ ಜಂಟಿಯಾಗಿ ಶತ್ರುಗಳನ್ನು ಸದೆಬಡಿಯಿತು. ಈ ಮೂಲಕ ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶ, ಪ್ರಚಂಡ ವಿಜಯ ಸಾಧಿಸಿತ್ತು. ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ತಾಣಗಳನ್ನು ಕ್ಷಣಾರ್ಧದಲ್ಲೇ ಧ್ವಂಸ ಮಾಡಲಾಯಿತು. ಈ ಮೂಲಕ ಬ್ರಹ್ಮೋಸ್ ಮಿಸೈಲ್ ಶಕ್ತಿ ಇಡೀ ವಿಶ್ವಕ್ಕೆ ಗೊತ್ತಾಯಿತು. ಭಾರತೀಯ ಸೇನೆ, ವಾಯುಪಡೆ ಹಾಗೂ ನೌಕಾಪಡೆ ಶಕ್ತಿ, ದೇಶದ ರಕ್ಷಣಾ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ಪರಿಚಯಿಸಲಾಯಿತು. ಆತ್ಮರಕ್ಷಣೆಗೆ ಧಕ್ಕೆ ಬಂದಾಗ ಮಾತ್ರ ನಮ್ಮ ದೇಶ, ಶತ್ರುಗಳ ಮೇಲೆ ಯುದ್ಧ ಮಾಡುತ್ತದೆ ಹೊರತು ಪ್ರಚೋದನೆಗಾಗಿ ಯುದ್ಧ ಮಾಡುವುದಿಲ್ಲ ಎಂದರು.
‘ದೇಶ ಮೊದಲು-ನಂತರ ನಾವು’ ಎಂಬ ಮನೋಭಾವನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಯುವ ಜನಾಂಗವು ಭಾರತದ ಇಂಜಿನ್ ಇದ್ದಂತೆ. ಸೈನಿಕರು, ಶಿಕ್ಷಣ, ಜ್ಞಾನ, ತಾಳ್ಮೆ ಮತ್ತು ನಂಬಿಕೆಯೇ ನಮ್ಮ ದೇಶದ ದೊಡ್ಡ ಸಂಪತ್ತು ಆಗಿದೆ.ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ದೇಶದಲ್ಲಿ ನಕ್ಸಲರ ಹಾವಳಿಯು ಶೂನ್ಯ ಮಟ್ಟಕ್ಕೆ ಇಳಿದಿದೆ. ವಿಶ್ವದಲ್ಲೇ 4ನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಿರುವ ಭಾರತ, ಮುಂದಿನ ಒಂದು ವರ್ಷದಲ್ಲಿ ಜರ್ಮನಿಯನ್ನು ಹಿಂದಿಕ್ಕಿ 3ನೇ ಆರ್ಥಿಕತೆ ರಾಷ್ಟ್ರವಾಗಲಿದೆ. ಇದರ ಹಿಂದೆ ಸೈನಿಕರ ತ್ಯಾಗ ಹಾಗೂ ಸಮರ್ಥ ನಾಯಕತ್ವದ ಪಾತ್ರ ಮಹತ್ವವಾಗಿರಲಿದೆ ಎಂದು ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ವಿಆರ್‌ಎಲ್ ಸಮೂಹ ಸಂಸ್ಥೆಗಳ ಛೇರ್ಮನ್ ಡಾ.ವಿಜಯ ಸಂಕೇಶ್ವರ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಮಾರ್ಗದರ್ಶನದಲ್ಲಿ ‘ವಿಜಯವಾಣಿ’ ಸತತ 6 ವರ್ಷದಿಂದ ವಿದ್ಯಕಾಶಿ ತುಮಕೂರಿನಲ್ಲಿ ವಿಜೃಂಭಣೆಯಿಂದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದೆ. ಕಾರ್ಗಿಲ್ ವಿಜಯ್ ದಿವಸ್ ಯಶಸ್ವಿಗೆ ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳೇ ಕಾರಣ. ತುಮಕೂರಿನಲ್ಲಿ ಅಧಿಕವಾಗಿ ಮಾಜಿ ಸೈನಿಕರು, ಸೈನಿಕರು ಮತ್ತು ಅವರ ಕುಟುಂಬಗಳು ನೆಲಸಿವೆ. ತುಮಕೂರಿನಲ್ಲಿ ‘ಇಸಿಎಚ್‌ಎಸ್ ಪಾಲಿಕ್ಲಿನಿಕ್’ ತಂದರೆ ಸೈನಿಕರ ಕುಟುಂಬಗಳು ಆರೋಗ್ಯ ಸೇವೆ ಪಡೆಯಲು ಸಾಕಷ್ಟು ಅನುಕೂಲವಾಗಲಿದೆ. ಈ ಬಗ್ಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಲೋಕಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸುವ ಮೂಲಕ ಕೇಂದ್ರ ಮೇಲೆ ಒತ್ತಡ ಹಾಕುವಂತಾಗಬೇಕು.
ಕೆ.ಎನ್.ಚನ್ನೇಗೌಡ, ವಿಜಯವಾಣಿ ಸಂಪಾದಕ.