ಹರಪನಹಳ್ಳಿಯಲ್ಲಿ ತೆರಿಗೆ ವಸೂಲಾತಿಯಲ್ಲಿ ಶೇ.100 ಸಾಧನೆಗೈದ ಗ್ರಾಪಂ ಹಾಗೂ ತಾಪಂ ಅಧಿಕಾರಿಗಳ ಸನ್ಮಾನ ಸಮಾರಂಭವನ್ನು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಉದ್ಘಾಟಿಸಿದರು. ನರೇಗಾ ಯೋಜನೆ ಸಹಾಯಕ ನಿರ್ದೇಶಕ ಸೋಮಶೇಖರ್ ಯು.ಎಚ್, ವಿಜಯನಗರದ ದಿಶಾ ಸಮಿತಿ ಸದಸ್ಯ ರೆಡ್ಡಿ ಶಾಂತಕುಮಾರ್, ತಾಲೂಕು ಯೋಜನಾಧಿಕಾರಿ ನವೀನ್ ಕುಮಾರ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣವರ್ ಇತರರಿದ್ದರು. 
ರಾಜ್ಯ

Tax ವಸೂಲಿಗಾರರ ಶ್ರಮ ಅನನ್ಯ

ಪ್ರಮುಖ ಮುಖ್ಯಾಂಶಗಳು

  • ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಪ್ರಶಂಸೆ
  • ಗ್ರಾಪಂ, ತಾಪಂ ಅಧಿಕಾರಿಗಳಿಗೆ ಸನ್ಮಾನ ಸಮಾರಂಭ
ಹರಪನಹಳ್ಳಿ: ತೆರಿಗೆ ವಸೂಲಾತಿಯಲ್ಲಿ ಗ್ರಾಪಂ ಹಾಗೂ ತಾಪಂ ಅಧಿಕಾರಿಗಳ ಕಾರ್ಯವೈಖರಿ ಪ್ರಶಂಸನೀಯ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ನಗರದ ತರಳಬಾಳು ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ 2025-26ನೇ ಸಾಲಿನ ತೆರಿಗೆ ವಸೂಲಾತಿಯಲ್ಲಿ ಶೇ.100 ಸಾಧನೆಗೈದ ಗ್ರಾಪಂ ಹಾಗೂ ತಾಪಂ ಅಧಿಕಾರಿಗಳ ಸನ್ಮಾನ  ಸಮಾರಂಭದಲ್ಲಿ ಮಾತನಾಡಿದರು.
ವಿಜಯನಗರ ಜಿಲ್ಲಾ ಪಂಚಾಯಿತಿ ವತಿಯಿಂದ 2025ರ ಡಿ.24ರಂದು ನಡೆದ ವಿಶೇಷ ತೆರಿಗೆ ಅಭಿಯಾನದಲ್ಲಿ 65,05,991 ರೂ. ಸಂಗ್ರಹವಾಗಿದೆ. ಈ ತೆರಿಗೆ ವಸೂಲಾತಿಯು 2022-23ನೇ ಸಾಲಿನಲ್ಲಿನ ವಸೂಲಾತಿ ಮೊತ್ತಕ್ಕಿಂತ ಹೆಚ್ಚಾಗಿದೆ ಎಂದರು. 
ತಾಪಂ ಇಒ ಚಂದ್ರಶೇಖರ್ ವೈ.ಎಚ್. ಮಾತನಾಡಿ, 2022-23ನೇ ಸಾಲಿನಲ್ಲಿ 62,83,683 ರೂ. ಸಂಗ್ರಹಿಸಿ ಶೇ.36 ವಸೂಲಾತಿಯೊಂದಿಗೆ 3ನೇ ಸ್ಥಾನ, 2023-24ನೇ ಸಾಲಿನಲ್ಲಿ 97,15,072 ರೂ. ಸಂಗ್ರಹಿಸಿ 6ನೇ ಸ್ಥಾನ, 2024-25ನೇ ಸಾಲಿನಲ್ಲಿ 3,82,92,103 ರೂ. ಸಂಗ್ರಹ ಹಾಗೂ 2025-26ನೇ ಸಾಲಿನಲ್ಲಿ ರೂ.4,14,69,051 ಸಂಗ್ರಹಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದರಲ್ಲಿ ಗ್ರಾಪಂ ಸಿಬ್ಬಂದಿ ಶ್ರಮ ಇದೆ ಎಂದರು. 
ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಕಣಾನಾಯ್ಕ, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಪಂ ನೋಡಲ್ ಅಧಿಕಾರಿಗಳು, ಪಿಡಿಒಗಳು, ಕಾರ್ಯದರ್ಶಿಗಳು, ಎಸ್ಡಿಎಗಳು, ಕರವಸೂಲಿಗಾರರು, ಡಿಇಒಗಳು, ಎನ್‌ಆರ್‌ಎಲ್ಎಂ, ನರೇಗಾ ಸಿಬ್ಬಂದಿ ಇದ್ದರು.