ನಾರಾಯಣಪುರ ಬಸವಸಾಗರ ಜಲಾಶಯದಲ್ಲಿ ಕುಸಿದಿರುವ ನೀರಿನ ಮಟ್ಟ. 
ರಾಜ್ಯ

ಬರಿದಾಗುತಿದೆ ಬಸವಸಾಗರ ಒಡಲು

ಪ್ರಮುಖ ಮುಖ್ಯಾಂಶಗಳು

  • ರೈತರಲ್ಲಿ ಮನೆ ಮಾಡಿದ ಆತಂಕ
  • ಒಳಹರಿವಿನಲ್ಲಿ ಭಾರಿ ಇಳಿಕೆ
  • ಇನ್ನೂ ನಡೆಯದ ಐಸಿಸಿ ಸಭೆ
ಕೆಂಭಾವಿ : ಮುAಗಾರು ಆರಂಭವಾಗಿ ಒಂದೂವರೆ ತಿಂಗಳಾದರೂ ಸಮರ್ಪಕ ಮಳೆಯಾಗದೆ ರೈತರ ಜೀವನಾಡಿಯಾಗಿರುವ ನಾರಾಯಣಪುರದ ಬಸವಸಾಗರ ಜಲಾಶಯ ಬರಿದಾಗುವ ಆತಂಕ ಎದುರಾಗಿದೆ.
ಮಹಾರಾಷ್ಟಾçದ ಕೆಲವೆಡೆ ಮಳೆಯಾಗಿದ್ದರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತ ರೈತರಲ್ಲಿ ಆಶಾಭಾವ ಮೂಡಿತ್ತು. ಆದರೆ ದಿನಗಳೆದಂತೆ ಪಶ್ಚಿಮ ಘಟ್ಟಗಳಲ್ಲೂ ಮಳೆ ಸಂಪೂರ್ಣ ನೆಲಕಚ್ಚಿದ್ದರಿಂದ ಬಸವಸಾಗರಕ್ಕೆ ಒಳಹರಿವು ಸಂಪೂರ್ಣ ಇಳಿಕೆಯಾಗಿದೆ.
ಕಲಬುರಗಿ, ವಿಜಯಪುರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆ ಪ್ರಮುಖ ನೀರಾವರಿ ಯೋಜನೆಗೆ ನೀರು ಒದಗಿಸುವ ಬಸವಸಾಗರ ಮಳೆ ಇಲ್ಲದ್ದರಿಂದ ಬರಿದಾಗುವತ್ತ ಸಾಗಿದೆ.
ನೀರಾವರಿ ಆಶ್ರಿತ ಈ ನಾಲ್ಕು ಜಿಲ್ಲೆಗಳ ಸಾವಿರಾರು ರೈತರು ಬಸವಸಾಗರ ನೀರು ನಂಬಿ ಬಿತ್ತನೆ ಮಾಡಿದ್ದು, ಇದೀಗ ನೀರಿಲ್ಲದಿರುವುದು ಚಿಂತೆಗೀಡು ಮಾಡಿದೆ. ಇದೇ ಜಲಾಶಯದಿಂದ ನಾರಾಯಣಪುರ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಮೂಲಕ ಆರೂ ಜಿಲ್ಲೆ ಜಮೀನುಗಳಿಗೆ ಪ್ರತಿವರ್ಷ ಕೃಷ್ಣೆ ಹರಿಯುತ್ತಿದ್ದು, ಕಳೆದ ವರ್ಷ ಈ ವೇಳೆಗೆ ಐಸಿಸಿ ಸಭೆ ಮುಗಿದು ಕಾಲುವೆಗೆ ನೀರು ಬಿಡುವ ವೇಳಾಪಟ್ಟಿ ಸಿದ್ಧಗೊಂಡಿತ್ತು. ಆದರೆ ಈ ಸಲ ವರುಣ ಮುನಿಸಿಕೊಂಡಿದ್ದರಿAದ ಜಲಾಶಯ ಒಡಲು ಸಮರ್ಪಕ ನೀರಿಲ್ಲದೆ ಭಣಗುಡುತ್ತಿದೆ.
ನಾಲ್ಕು ಜಿಲ್ಲೆಗಳ ೫ ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಒದಗಿಸುವ ಪ್ರಮುಖ ಜಲಾಶಯ ಇದಾಗಿದ್ದು, ಕೆಂಭಾವಿ ಹತ್ತಿರದ ಗುತ್ತಿ ಬಸವಣ್ಣ ಇಂಡಿ ಏತ ನೀರಾವರಿ ಕಾಲುವೆ ಮೂಲಕ ವಿಜಯಪುರ ಜಿಲ್ಲೆ ಗಡಿ ಗ್ರಾಮದ ರೈತರಿಗೂ ಇದೇ ಮುಖ್ಯ ಜೀವನಾಡಿ. ಪ್ರಸ್ತುತ ಜಲಾಶಯದ ಸ್ಥಿತಿ ನೋಡಿದರೆ ಮುಂಬರುವ ದಿನಗಳಲ್ಲಿ ಸಂಪೂರ್ಣ ಬರಗಾಲದ ಲಕ್ಷಣ ಗೋಚರಿಸುತ್ತಿದೆ. ವರುಣ ಕೃಪೆ ತೋರಿ ಭರ್ತಿಯಾದರೆ ಮಾತ್ರ ರೈತರ ಸಂಕಷ್ಟ ದೂರವಾಗಲಿದೆ ಎಂಬುದು ನೀರಾವರಿ ತಜ್ಞರ ಅಂಬೋಣ.

ಕುಡಿಯುವ ನೀರಿಗೆ ಆದ್ಯತೆ

ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಆತಂಕದ ಮಧ್ಯೆ ಕುಡಿಯುವ ನೀರಿನ ಬರ ಇರುವ ವಿಜಯಪುರ ಜಿಲ್ಲೆಗೆ ಪ್ರಮುಖವಾಗಿ ನೀರು ಹರಿಸಿ ಕೆರೆಗಳ ಭರ್ತಿಯತ್ತ ಸರ್ಕಾರ ದಾಂಗುಡಿ ಇಟ್ಟಿದೆ. ಈಗಾಗಲೇ ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ಇಂಡಿ ಶಾಖಾ ಕಾಲುವೆಗೆ ೧೬೫೧ ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ. ಸಿಂದಗಿ, ಇಂಡಿ, ವಿಜಯಪುರ ಸೇರಿ ಆ ಭಾಗದ ಪ್ರಮುಖ ಕುಡಿಯುವ ನೀರಿನ ಕೆರೆಗಳ ಭರ್ತಿಗೆ ಯೋಜನೆ ರೂಪಿಸಲಾಗಿದೆ.

ಜಲಾಶಯಗಳ ಸ್ಥಿತಿಗತಿ

ಬಸವಸಾಗರ ಯಾವಾಗಲೂ ರೈತರ ರಕ್ಷಣೆ ಮಾಡುತ್ತ ಬಂದಿದೆ. ಆದರೆ ಈ ವರ್ಷ ಮಳೆಯಾಗದ್ದರಿಂದ ಒಳಹರಿವು ಕಡಿಮೆಯಾಗಿ ನೀರಿನ ಮಟ್ಟ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ ೪೯೨.೨೫೨ ಮೀ. ಇಂದಿನ ಸಂಗ್ರಹ ೪೮೮.೬೦ ಮೀ. ಪ್ರಸ್ತುತ ೧೯.೧೭೨ ಟಿಎಂಸಿ ನೀರು ಸಂಗ್ರಹಣೆಯಲ್ಲಿ ೪.೪೧೨ ಟಿಎಂಸಿ ಮಾತ್ರ ಬಳಕೆ ಮಾಡಬಹುದು.