ವಡಗೇರಾ ತಾಲೂಕಿನ ಕೋನಹಳ್ಳಿ ಗ್ರಾಮದಲ್ಲಿರುವ ಹಜರತ್​ ಸೈಯದ್​ ಭಾಷಾ ದರ್ಗಾದ ಜಾತ್ರೆಯಲ್ಲಿ ಸೇರಿದ ಅಪಾರ ಭಕ್ತರು. 
ರಾಜ್ಯ

ಹಿಂಗಾರಿ ಮುಂಗಾರಿ ತುಕಡಿ ಜನ-ದನಕ್ಕೆ ಕುತ್ತು

ಪ್ರಮುಖ ಮುಖ್ಯಾಂಶಗಳು

  • ಕೋನಹಳ್ಳಿ ಹಜರತ್​ ಸೈಯದ್​ ಭಾಷಾ ಜಾತ್ರೆಯಲ್ಲಿ ಪೂಜಾರಿಗಳ ಹೇಳಿಕೆ
ವಡಗೇರಾ: ಮಿರುಗ್​ಗೆ ಉಡಿ ಕಟ್ಟುಸುತ್ತೀನಿ, ಹಿಂಗಾರಿ ಮುಂಗಾರಿ ತುಕಡಿ, ಎಂಟು ಮೂಲೆ ನಾಲ್ಕು ದಿಕ್ಕು ಸಂಪೂರ್ಣ ಮಳೆ. ಅದರಲ್ಲಿ ಒಂದು ದಿಕ್ಕಿಗೆ ಕಪ್ಪು ಚುಕ್ಕಿ ಇಟ್ಟಿನಿ, ಒಂದು ಪಟ್ಟು ಮಳೆ ಎರಡು ಪಟ್ಟು ಗಾಳಿ, ಒಂದು ಸಮಯದಲ್ಲಿ ದಿಕ್ಕು ನೋಡುವ ಹಾಗೇ ಆಗುತ್ತೆ, ಆದರೂ ಪಾರು ಮಾಡುತ್ತೇನೆ, ಹತ್ತಿ ಹೊಲದಾಗ ಬಂಗಾರ ಲಕ್​ ಚೆಲ್ಲಿನಿ, ಮುತ್ತು ನವರತ್ನ ಹೋಗುದಿನಿ, ಸಗರ ಗಡ್ಡಿಗೆ ಹಸೀರು ನಿಶಾನೆ, ಒಕ್ಕಲುಗನ ಮನೆ ಉಕ್ಕಿ ಏರಿತ್ತು, ಕೂಲಿ ಮಾಡುವವ ಕುದುರೆ ಏರಿದ, ಬೆಳೆತಕ್ಕ ಮಳೆ, ಜನಕ್ಕೆ ದನಕ್ಕೆ ಕುತ್ತು ಆದ, ನಂಬಿಕೆ ಇಟ್ಟು ನಡೆದವರಿಗೆ ಹಿಂಬಾಗಿ ಇರುತ್ತಿನಿ ಅಪನಂಬಿಕೆ ಮಾಡಿದವರು ತಮ್ಮ ಫಲಬೋಗ ತಾವೇ ಉಣ್ಣುತ್ತಾರೆ. ಇದು ಹಜರತ್​ ಸೈಯದ್​ ಭಾಷಾ ದರ್ಗಾದಲ್ಲಿ ಕಂಡು ಬಂದ ಹೇಳಿಕೆ.
ಈ ವರ್ಷ ಹಿಂಗಾರು ಹಾಗೂ ಮುಂಗಾರು ಬೆಳೆಗಳು ಚನ್ನಾಗಿ ಬರಲಿವೆ ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಹಾಗೆಯೇ ಈ ವರ್ಷ ವಿಪರೀತ ಗಾಳಿ ಬೀಸಲಿದೆ ಮಳೆ ಕಡಿಮೆಯಾಗಲಿದೆ ಜನ ಜಾನುವಾರುಗಳಿಗೆ ಆಪತ್ತು ದೇವರಲ್ಲಿ ನಂಬಿಕೆ ಇಟ್ಟು ನಡೆಯುವವರನ್ನು ಕಾಪಾಡುತ್ತೇನೆ. ಎಂಬ ಹೇಳಿಕೆಯನ್ನು ತಾಲೂಕಿನ ಕೋನಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ಹಾಗೂ ಭಾವೈಕ್ಯತೆಯ ಸಂಕೇತವಾದ ಹಜರತ್​ ಸೈಯದ್​ ಭಾಷಾ ದರ್ಗಾದ ಜಾತ್ರೆ ವೇಳೆ ದರ್ಗಾದ ಪೂಜಾರಿಗಳಾದ ಸಿದ್ದಪ್ಪ ಪೂಜಾರಿ, ಇಮಾಮ್​ ಸಾಬ್​ ಪೂಜಾರಿ ಹೇಳಿಕೆ ನೀಡಿದ್ದಾರೆ. ಜಾತ್ರೆ ನಿಮಿತ್ತ ಸೈಯದ್​ ಭಾಷಾ ಗದ್ದುಗೆ ಪುಷ್ಪಗಳಿಂದ ಸಿಂಗರಿಸಿ ಸುಗುಂಧ ದ್ರವ್ಯವನ್ನು ಸಿಂಪಡಿಸಲಾಗಿತ್ತು. ಗುರುವಾರ ಚಿರಾಗ್​(ದೀಪ) ಸಮಯದಲ್ಲಿ ಭಕ್ತರು ತಾವು ಬೇಡಿಕೊಂಡ ಹರಕೆಯನ್ನು ತಿರಿಸಿದರು. ಮೂರು ದಿನಗಳ ಕಾಲ ನಡೆದ ದರ್ಗಾದ ಜಾತ್ರೆಗೆ ಕರ್ನಾಟಕ ಸೇರಿ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.