ಯಳಂದೂರು ತಾಲೂಕಿನ ಬಿಆರ್‌ಟಿ ಅರಣ್ಯ ಸಮೀಪದಲ್ಲಿರುವ ಹೀರಣ್ಣಕಟ್ಟೆ ಪೋಡು ಹಾಡಿಯ ಮನೆಗಳು ಜಲ ಜೀವನ್ ಯೋಜನೆಯಿಂದ ವಂಚಿತವಾಗಿರುವುದು. 
ರಾಜ್ಯ

ನೀರಿನ ಬವಣೆ ನೀಗಿಸದ ಜಲಜೀವನ ಮಿಷನ್!

ಪ್ರಮುಖ ಮುಖ್ಯಾಂಶಗಳು

  • ಹೀರಣ್ಣನಕಟ್ಟೆ ಪೋಡು ಹಾಡಿ
  • 25ಕ್ಕೂ ಹೆಚ್ಚು ಕುಟುಂಬ ಅಶುದ್ಧ ಕುಡಿಯುವ ನೀರನ್ನೇ ಕುಡಿದು ಜೀವನ
ಯಳಂದೂರು: ತಾಲೂಕಿನ ಹೀರಣ್ಣನಕಟ್ಟೆ ಪೋಡು ಹಾಡಿಯಲ್ಲಿ 25ಕ್ಕೂ ಹೆಚ್ಚು ಕುಟುಂಬ ಅಶುದ್ಧ ಕುಡಿಯುವ ನೀರನ್ನೇ ಕುಡಿದು ಜೀವನ ಸಾಗಿಸುತ್ತಿದ್ದು, ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ ಮಿಷನ್ ಯೋಜನೆಯಿಂದ ಇಲ್ಲಿನ ನಿವಾಸಿಗಳು ವಂಚಿತರಾಗಿದ್ದಾರೆ!.
25ಕ್ಕೂ ಹೆಚ್ಚು ಕುಟುಂಬ ಇಲ್ಲಿ ವಾಸ ಮಾಡುತ್ತಿದ್ದು, ಇದರ ಅಕ್ಕಪಕ್ಕದಲ್ಲಿನ ತೋಟದ ಮನೆಗಳು ಸೇರಿದಂತೆ ಈ ಚಿಕ್ಕಪೋಡು ಹಾಡಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಇರುವ ಒಂದು ಕೊಳವೆಬಾವಿಯೂ ಕೆಟ್ಟಿದ್ದು, ಮತ್ತೊಂದರಲ್ಲಿ ಕುಡಿಯುವ ನೀರು ಕಲುಷಿತವಾಗಿದೆ. ಇದರೊಂದಿಗೆ ಕೈಪಂಪು ಕೆಟ್ಟಿರುವುದರಿಂದ ಅನಿವಾರ್ಯವಾಗಿ ಪೋಡಿಯ 50ಕ್ಕೂ ಜನರು ಕಲುಷಿತ ನೀರನ್ನೇ ಅವಲಂಬಿಸಿದ್ದಾರೆ. ಇದರಿಂದಾಗಿ ಹೊಟ್ಟೆನೋವು, ವಾಂತಿ-ಭೇದಿ ಸೇರಿದಂತೆ ಹಲವು ರೋಗಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ಕಲುಷಿತ ನೀರು ಸೇವನೆ ಮಾಡಿ ಮಕ್ಕಳು ಮತ್ತು ವೃದ್ಧರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಜಲ ಜೀವನ ಮಿಷನ್ ಯೋಜನೆಯಡಿ *****2024ರೊಳಗೆ ಗ್ರಾಮೀಣ ಭಾಗದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬ ಗುರಿ ಹೊಂದಲಾಗಿದೆ. ಆದರೆ, ಹೀರೆಯ್ಯನ ಕಟ್ಟೆ ಪೋಡಿಯಂತಹ ಸಣ್ಣ ಹಾಡಿ ಮಾತ್ರ ಈ ಯೋಜನೆಯಿಂದ ಹೊರಗುಳಿದಂತೆ ಕಾಣುತ್ತಿದೆ.
ಪ್ರತಿ ಮನೆಗೂ ಈ ಯೋಜನೆ ಅನ್ವಯವಾಗಿದ್ದು, ನಮ್ಮ ಪೋಡಿಗೆ ಇನ್ನೂ ನೀರು ಬಂದಿಲ್ಲ. ಈ ಸಂಬಂಧ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜನರ ಹಿತದೃಷ್ಟಿಯಿಂದ ತಾಲೂಕು ಗ್ರಾಮ ಪಂಚಾಯಿತಿ ಅಧಿಕಾರಿಗಳು ಪೋಡಿಗೆ ತಕ್ಷಣ ಪೈಪ್‌ಲೈನ್ ಅಳವಡಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ತೋಟದ ಬಾವಿ ನೀರು: ಹೀರಣ್ಣಕಟ್ಟೆ ಪೋಡು ಸುತ್ತಮುತ್ತ ಇರುವ ಜಮೀನಿನ ಕೊಳವೆ ಬಾವಿ ನೀರನ್ನು ಜನರು ಆಶ್ರಯಿಸಿದ್ದಾರೆ. ಇನ್ನು ವಿದ್ಯುತ್ ಇದ್ದಾಗ ಮಾತ್ರ ಜನರು ನೀರನ್ನು ತರಬೇಕಾದ ಪರಿಸ್ಥಿತಿ ಇದೆ. ಉಳಿದ ಸಮಯದಲ್ಲಿ ನೀರು ದೊರೆಯುವುದಿಲ್ಲ. ಅಲ್ಲದೆ ಈ ಹಾಡಿಯ ನಿವಾಸಿಗಳಿಗೆ ನಿರಂತರ ಜ್ಯೋತಿ ಸಂಪರ್ಕವೂ ಇಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಕೆಇಬಿ, ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸದಿರುವುದು ಜನರಿಗೆ ತಲೆ ನೋವಾ ಪರಿಣಮಿಸಿದೆ.
ಕಾಡಿನ ಸಮೀಪದಲ್ಲಿರುವ ಪೋಡಿ ಜನರಿಗೆ ನೀರಿನ ಸಮಸ್ಯೆ ಉಂಟಾಗಿದ್ದು, ಇರುವ ಕೊಳವೆ ಬಾವಿ ನೀರು ಕಲುಷಿತವಾಗಿದೆ. ಜಲಜೀವನ ಯೋಜನೆ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂಬ ಕಾರಣಕ್ಕೆ ಜಾರಿಗೆ ತರಲಾಯಿತು. ಈ ರೀತಿಯ ಬೆಟ್ಟ ಗುಡ್ಡ ಪ್ರದೇಶದಲ್ಲಿನ ಪೋಡಿ ಜನರು ಈ ಯೋಜನೆಯಿಂದ ವಂಚಿತವಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಚುನಾಯಿತ ಜನಪ್ರತಿನಿಧಿಗಳು ಗಮನಹರಿಸಿ ಕುಡಿಯುವ ನೀರು ಪೂರೈಕೆ ಮಾಡುವತ್ತ ಗಮನ ಹರಿಸಬೇಕಾಗಿದೆ.
ಮಂಜಮ್ಮ ಹೀರಣ್ಣನಕಟ್ಟೆ ಪೋಡು ನಿವಾಸಿ
ಯಳಂದೂರು ತಾಲೂಕಿನ 5 ಗ್ರಾಪಂಗಳು ಕಾರಣಾಂತರದಿಂದ ಜಲಜೀವನ ಯೋಜನೆಯಿಂದ ಬಿಟ್ಟು ಹೋಗಿತ್ತು. ಈಗ ಮತ್ತೆ ಈ ಬಗ್ಗೆ ಮಾಹಿತಿ ಪಡೆದು ಬಿಟ್ಟುಹೋದ ಗ್ರಾಪಂಗಳನ್ನು ಯೋಜನೆ ವ್ಯಾಪ್ತಿಗೆ ತಂದು ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ತಾಲೂಕಿನ ಬಿಆರ್‌ಟಿ ಅರಣ್ಯ ಸಮೀಪದಲ್ಲಿರುವ ಹೀರಣ್ಣಕಟ್ಟೆ ಪೋಡು ಜನರನ್ನು ಈ ಯೋಜನೆ ವ್ಯಾಪ್ತಿಗೆ ತರುವಂತೆ ಯಳಂದೂರು ಎಇಇ ಸೂಚಿಸಿಸಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಪೂರೈಸಲಾಗುವುದು.
ಇಮ್ಯಾನುವಲ್ ಸಂತೋಷ್ ಕುಮಾರ್ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ ಇಲಾಖೆ, ಚಾಮರಾಜನಗರ
.