ಶ್ರೀ ಸುಜಯನಿಧಿತೀರ್ಥ ಸ್ವಾಮೀಜಿ
ಬೆಂಗಳೂರು: ಇಡೀ ಪ್ರಪಂಚಕ್ಕೆ ಬೆಳಕು ಕೊಟ್ಟಿರುವುದು ವೇದ. ಭಾರತದಿಂದಲೇ ವಿಶ್ವದ ಎಲ್ಲ ದೇಶಗಳಿಗೆ ವೇದಗಳ ಕುರಿತು ಪರಿಚಯವಾಗಿದೆ ಎಂದು ಮೂಳಬಾಗಿಲುನ ಶ್ರೀ ಶ್ರೀಪಾದರ ಮಠದ ಪೀಠಾಧ್ಯಕ್ಷ ಶ್ರೀ ಸುಜಯನಿಧಿತೀರ್ಥ ಸ್ವಾಮೀಜಿ ಹೇಳಿದ್ದಾರೆ.
ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೇದಿಕ್ ಸೈನ್ಸ್ ಟ್ರಸ್ಟ್ (ಎನ್‌ಐವಿಎಸ್) ಜಯನಗರದ 4ನೇ ಹಂತದ ವಿಜಯ ಕಾಲೇಜಿನಲ್ಲಿ ಆಯೋಜಿಸಿರುವ 3ನೇ ದಿನಗಳ ಅಂತಾರಾಷ್ಟ್ರೀಯ ‘ವೇದ ವಿಜ್ಞಾನ ವಿಜಯ’ ಸಮ್ಮೇಳನಕ್ಕೆ ಗುರುವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.
ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ವೇದ ಸಂಪತ್ತು ಉಳಿದಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವಂತಾಗಬೇಕು. ಈ ಬಗ್ಗೆ ವೈಜ್ಞಾನಿಕವಾಗಿ ತುಲನೆ ಮಾಡಬೇಕಾದ ಅವಶ್ಯಕತೆ ಇದೆ. ನಮ್ಮ ವೇದ ಮತ್ತು ವಿಜ್ಞಾನಕ್ಕೂ ಪರಸ್ಪರ ಸಾಮ್ಯತೆಯೂ ಇದೆ. 2047ರ ವೇಳೆಗೆ ನಾವೆಲ್ಲರೂ ಸುರಕ್ಷಿತವಾಗಿರಲು ವೇದ ವಿಜ್ಞಾನದ ಪ್ರಯೋಜನ ಪಡೆಯುವಂತಾಗಬೇಕು. ವೇದದ ತಿರುಳು ಬಗ್ಗೆ ತಿಳಿದು ಇದನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದರು.
ಸುಪ್ರೀಂಕೋರ್ಟ್‌ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಚಲಯ್ಯ, ಎನ್‌ಐವಿಎಸ್ ಉಪಾಧ್ಯಕ್ಷ ಅರಳುಮಲ್ಲಿಗೆ ಪಾರ್ಥಸಾರಥಿ, ಕಾರ್ಯದರ್ಶಿ ಎಚ್.ಬಿ. ಲಕ್ಷ್ಮೀನಾರಾಯಣ ಮತ್ತು ಬಿಎಚ್‌ಎಸ್ ಹೈಯರ್ ಎಜುಕೇಷ್ ಸೊಸೈಟಿ ಕಾರ್ಯದರ್ಶಿ ಜಿ.ವಿ. ವಿಶ್ವನಾಥ್ ಮತ್ತಿತರರಿದ್ದರು.
ಸಾವಿರಾರು ವರ್ಷಗಳ ಹಿಂದೆ ನಮ್ಮ ದೇಶ, ವಿಜ್ಞಾನ ಕ್ಷೇತ್ರದಲ್ಲಿ ಮುಂದುವರಿದಿತ್ತು. ವೈದ್ಯಕೀಯ, ಕಲೆ, ವಾಸ್ತುಶಿಲ್ಪ ಮತ್ತು ಗಣಿತ ಸೇರಿ ಇತರ ಎಲ್ಲ ಕ್ಷೇತ್ರಗಳಲ್ಲೂ ಭಾರತ ಆಗಾಧ ಸಾಧನೆ ಮಾಡಿತ್ತು. ಅಂದಿನ ಕಾಲದಲ್ಲೇ ಗುರುಕುಲ ಪರಂಪರೆ ಇತ್ತು. ವಿಜ್ಞಾನ ಮತ್ತು ಜ್ಞಾನ ನಮ್ಮಲ್ಲಿ ಸಾಕಷ್ಟಿತ್ತು. ಆದರೆ, ನಮ್ಮನ್ನು ರಕ್ಷಣೆ ಮಾಡಬೇಕಿದ್ದ ಆಯುಧಗಳು ಇರಲಿಲ್ಲ. ಈ ಸಂದರ್ಭದಲ್ಲಿ ವಿದೇಶಿಗರು, ನಮ್ಮ ದೇಶದ ಮೇಲೆ ದಾಳಿ ನಡೆಸಿ ರಕ್ಷಿಸಿ ಇಟ್ಟುಕೊಂಡಿದ್ದ ವೇದಗಳನ್ನು ನಾಶಪಡಿಸಿದ್ದರು. 2047ರ ವೇಳೆಗೆ ‘ವಿಕಸಿತ ಭಾರತ’ ಮಾತ್ರವಲ್ಲದೆ ‘ಸುರಕ್ಷಿತ ಭಾರತ’ವೂ ಆಗಬೇಕಿದೆ. ಸುರಕ್ಷಿತ ಭಾರತ ಇಲ್ಲದಿದ್ದರೆ ವಿಕಸಿತ ಭಾರತ ನಿರ್ಮಾಣವಾಗುವುದಕ್ಕೆ ಸಾಧ್ಯವಿಲ್ಲ ಎಂದು ವೇದಿಕ್ ಸೈನ್ಸ್ ನಿರ್ದೇಶಕ ಡಾ.ಪ್ರಹ್ಲಾದ ರಾಮರಾವ್ ಹೇಳಿದರು.
ನನ್ನ ಪ್ರಕಾರ ವೇದ ಎಂಬುದು ಸಾಹಿತ್ಯವಲ್ಲ. ನಮಗೆ ವೇದ ಬೋಧನೆ ಮಾಡುವುದಿಲ್ಲ. ಆದರೆ, ಇಷ್ಟವಾಗಿರುವುದನ್ನು ಪಡೆಯಲು, ಇಷ್ಟ ಇಲ್ಲದುದರ ನಿವಾರಣೆಗೆ ಮತ್ತು ಅಲೌಕಿಕ ಮಾರ್ಗವನ್ನು ತೋರಿಸುವುದೇ ವೇದ. ವೇದಾಂಕಗಳ ಉದ್ದೇಶ ಅರ್ಥ ಮಾಡಿಕೊಂಡರೆ ವೇದದ ಉದ್ದೇಶ ಅರ್ಥವಾಗಲಿದೆ.
- ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ, ಕೂಡಲಿ ಶೃಂಗೇರಿ ಪೀಠದ ಪೀಠಾಧ್ಯಕ್ಷ.