The use of AI with education is appropriate
ಶಿಡ್ಲಘಟ್ಟ: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಬೋಧನೆಗೆ ಡಿಜಿಟಲ್ ಉಪಕರಣಗಳು, ವಿಧಾನಗಳು ಮತ್ತು ಕೃತಕ ಬುದ್ಧಿಮತ್ತೆಯ ಮಾಧ್ಯಮ ಬಳಸಿಕೊಳ್ಳುವುದು ಸೂಕ್ತ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ, ಉಪನಿರ್ದೇಶಕ ಎಂ. ಮುನಿಕೆಂಪೇಗೌಡ ತಿಳಿಸಿದರು.
ತಾಲೂಕಿನ ಸುಗಟೂರು ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆ ಮಾಸಿಕ ಇ-&ನಿಯತಕಾಲಿಕವನ್ನು ಬಿಡುಗಡೆಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬಳಕೆ, ಸುಲಭವಾಗಿ ಕಲಿಯುವ ವಿಧಾನಗಳನ್ನು ಬೋಧಕರು ಕಲಿಸಿಬೇಕು. ಇಂದಿನ ಕಾಲಘಟ್ಟದಲ್ಲಿ ಸುಲಭ ಬೋಧನೆ ಮತ್ತು ಕಲಿಕೆಗಾಗಿ ಅನೇಕ ಅವಕಾಶಗಳಿದ್ದು, ಅವುಗಳ ಸದ್ಬಳಕೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸನ್ನದ್ಧರಾಗಬೇಕಿದೆ. ಎಐ ಬಳಕೆ ಮೂಲಕ ಮಕ್ಕಳ ಸಮಯದ ಉಳಿತಾಯ, ಸಾಕಷ್ಟು ಕಲಿಕಾ ವಿಷಯಗಳ ಸಂಗ್ರಹ, ಬೆರಳ ತುದಿಯಲ್ಲಿ ಇಡೀ ಸಮಗ್ರ ವಿಷಯ ವಸ್ತುವನ್ನು ಕೂಡಬಲ್ಲ ಸಮರ್ಥತೆಯನ್ನು ಗಳಿಸಿಕೊಡಬೇಕು ಎಂದರು.
ಚಿಕ್ಕಬಳ್ಳಾಪುರ ಡಯಟ್ನ ಹಿರಿಯ ಉಪನ್ಯಾಸಕಿ ಟಿ.ಎಚ್.ಯಶೋಧ ಮಾತನಾಡಿ, ಹೊಸ ಶೈಕ್ಷಣಿಕ ಯುಗಕ್ಕೆ ಹೊಂದಿಕೊಂಡಂತೆ ಪರೀಕ್ಷೆಗಳು, ಮೌಲ್ಯಮಾಪನ, ಕಲಿಕೋಪಕರಣಗಳ ತಯಾರಿ, ವೈಯಕ್ತೀಕರಿಸಿದ ಕಲಿಕಾ ವ್ಯವಸ್ಥೆಯ ಅಳವಡಿಕೆ, ಉತ್ತಮ ಶೈಕ್ಷಣಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಎಐ ಬಳಿಸಿಕೊಳ್ಳಬಹುದಾಗಿದೆ ಎಂದರು.
ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಎಐ ಬಳಕೆಯು ದೊಡ್ಡ ಪ್ರಮಾಣದಲ್ಲಿ ವಿಚಾರಗಳನ್ನು ಉತ್ಪಾದಿಸುವಷ್ಟು ಸಮರ್ಥವಾಗಿದ್ದು, ಶಾಲಾ ಯೋಜನೆಯ ಅನುಷ್ಠಾನಗೊಳಿಸುವಲ್ಲಿ ಶಿಕ್ಷಕರಿಗೆ ಸಹಕಾರಿಯಾಗಿದೆ ಎಂದರು.