ಹುಮನಾಬಾದ್​ನಲ್ಲಿ ತಾಲೂಕು ಬಿಜೆಪಿ ಘಟಕದಿಂದ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಮಾತನಾಡಿದರು. ಪ್ರಮುಖರಾದ ಬಸವರಾಜ ಆರ್ಯ, ಅನಿಲ್​ ಪಸರ್ಗಿ, ವಿಶ್ವನಾಥ ಪಾಟೀಲ್​ ಮಾಡಗೂಳ, ಮಲ್ಲಿಕಾರ್ಜುನ ಪಾಟೀಲ್​, ಸಂಜೀವಕುಮಾರ ಜುನ್ನಾ, ಕೃಷ್ಣಾಚಾರ್ಯ ಇತರರಿದ್ದರು. 
ರಾಜ್ಯ

ಪತ್ರಿಕಾ ಭವನದಲ್ಲೇ ಮುಂದಿನ ದಿನಾಚರಣೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಸಂಕಲ್ಪ
  • ಬಿಜೆಪಿ ಘಟಕದಿಂದ ಕಾರ್ಯಕ್ರಮ
ಹುಮನಾಬಾದ್​: ಹುಮನಾಬಾದ್​ ಹಾಗೂ ಚಿಟಗುಪ್ಪ ಪತ್ರಕರ್ತರ ಬಹುಕಾಲದ ಪತ್ರಿಕಾ ಭವನದ ಕನಸನ್ನು ನನಸು ಮಾಡಲಾಗುವುದು. ಅಗತ್ಯ ಜಾಗ ಗುರುತಿಸಿ ಅನುದಾನ ತಂದು ಶೀಘ್ರವೇ ಪತ್ರಿಕಾ ಭವನ ನಿರ್ಮಿಸಿ ಮುಂದಿನ ವರ್ಷದ ಪತ್ರಿಕಾ ದಿನಾಚರಣೆಯನ್ನು ಹೊಸ ಪತ್ರಿಕಾ ಭವನದಲ್ಲೇ ಆಚರಿಸುವ ಸಂಕಲ್ಪ ಹೊಂದಿದ್ದೇವೆ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್​ ಭರವಸೆ ನೀಡಿದರು.
ಪಟ್ಟಣದಲ್ಲಿ ತಾಲೂಕು ಬಿಜೆಪಿ ವತಿಯಿಂದ ಗುರುವಾರ ಸಂಜೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯಕ್ಕೆ ಬರುವ ಮೊದಲು ಪತ್ರಿಕೆಗಳ ಮಹತ್ವದ ಬಗ್ಗೆ ಅಷ್ಟಾಗಿ ಅರಿವಿರಲಿಲ್ಲ. ಆದರೆ ಜನಪ್ರತಿನಿಧಿಯಾದ ಬಳಿಕ ಪತ್ರಕರ್ತರ ಜವಾಬ್ದಾರಿ, ಸಮಾಜದ ಮೇಲೆ ಅವರ ಪ್ರಭಾವ ಮತ್ತು ಪತ್ರಿಕೋದ್ಯಮದ ಮಹತ್ವ ಅರ್ಥವಾಗಿದೆ ಎಂದರು.
ಜನರ ಸಮಸ್ಯೆಗಳನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರುವ ಸೇತುವೆಯಾಗಿ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಬಸವರಾಜ ಆರ್ಯ ಮಾತನಾಡಿದರು.
ಬಿಜೆಪಿ ಮಂಡಳ ಅಧ್ಯಕ್ಷ ಅನಿಲ್​ ಪಸರ್ಗಿ, ಹಿರಿಯ ಮುಖಂಡರಾದ ವಿಶ್ವನಾಥ ಪಾಟೀಲ್​ ಮಾಡಗೂಳ, ಮಲ್ಲಿಕಾರ್ಜುನ ಪಾಟೀಲ್​ ಚಿಟಗುಪ್ಪ, ಗಜೇಂದ್ರ ಕನಕಟ್ಕರ್​, ಪ್ರಮುಖರಾದ ರವಿ ಹೊಸಳ್ಳಿ, ಗೋಪಾಲಕೃಷ್ಣ್ಣ ಮೂಳೆ, ವಿನಾಯಕ ಮಣಕೊಜಿ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಂಜೀವಕುಮಾರ ಜುನ್ನಾ, ಪ್ರಧಾನ ಕಾರ್ಯದರ್ಶಿ ಗುಂಡು ಅತಿವಾಳ ಇತರರಿದ್ದರು. ಹುಮನಾಬಾದ್​, ಚಿಟಗುಪ್ಪ ತಾಲೂಕು ಪತ್ರಕರ್ತರನ್ನು ಹಾಗೂ ಸಾಮಾಜಿಕ ಜಾಲತಾಣದ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.