ಯಾದಗಿರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಉತ್ತರ ಕರ್ನಾಟಕ ತತ್ವಪದ ಹಾಡುಗಾರರ ಸಮಾವೇಶವನ್ನು ಸಾಹಿತಿ ಡಾ.ಸಿದ್ದರಾಮ ಹೊನ್ಕಲ್ ಉದ್ಘಾಟಿಸಿದರು. ಡಾ.ಮೀನಾಕ್ಷಿ ಬಾಳಿ, ಡಾ.ಸುಭಾಷಚಂದ್ರ ಕೌಲಗಿ, ಡಾ.ಭೀಮರಾಯ ಲಿಂಗೇರಿ, ಡಾ.ಎಸ್.ಎಸ್.ನಾಯಕ ಇತರರಿದ್ದರು.
- ಸಾಹಿತಿ ಡಾ.ಸಿದ್ದರಾಮ ಹೊನ್ಕಲ್ ಅಭಿಮತ
- ಉತ್ತರ ಕರ್ನಾಟಕ ತತ್ವಪದ ಹಾಡುಗಾರರ ಸಮಾವೇಶ
ಯಾದಗಿರಿ: ಹಳ್ಳಿಗಾಡಿನ ಜನರು ಓದು-ಬರಹ ಕಲಿಯದಿದ್ದರೂ ಹಾಡಿನ ಮೂಲಕ ರಚಿಸಿದ ಭಜನಾ ಪದಗಳು ಮತ್ತು ಕಡಕೋಳ ಮಡಿವಾಳಪ್ಪ ಇತರರ ತತ್ವಪದಗಳನ್ನು ಹಾಡುವ ಮೂಲಕ ಬದುಕಿನ ನೈಜತೆಯನ್ನು ಅನಾವರಣಗೊಳಿಸಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಸಿದ್ದರಾಮ ಹೊನ್ಕಲ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಡಿ ನಗರದ ಸರ್ಕಾರಿ ಪದವಿ ಕಾಲೇಜು ಸಭಾಂಗಣದಲ್ಲಿ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಮಂಗಳವಾರ ಆಯೋಜಿಸಿದ್ದ ಉತ್ತರ ಕರ್ನಾಟಕ ತತ್ವಪದ ಹಾಡುಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಭಜನೆ ಹಾಡುಗಳು ಮನುಷ್ಯನ ಬದುಕಿನ ಜೀವಾಳವಾಗಿವೆ. ಹಾಡುಗಳಲ್ಲಿ ತತ್ವ, ಸಂಸ್ಕಾರ, ಸಂಸ್ಕೃ‘ತಿ ಮತ್ತು ಬದುಕಿನ ಕಲೆ ಅಡಗಿದೆ ಎಂದರು.
ಹಿರಿಯರು ಅಕ್ಷರಾಭ್ಯಾಸ ಮಾಡದಿದ್ದರೂ ಹೊಲ-ಗದ್ದೆಗಳಲ್ಲಿ ಕೆಲಸ ಮತ್ತು ಮನೆಗಳಲ್ಲಿ ಬೀಸುವಾಗ ಮನಸ್ಸಿಗೆ ತೋಚಿದ್ದನ್ನು ಹಾಡುತ್ತಿದ್ದರು. ಅವುಗಳಲ್ಲಿ ಜೀವನದ ಸಾರಾಂಶ ಅಡಗಿರುತ್ತಿತ್ತು. ಆದರೆ ಇಂದು ಭಜನಾ ಪರಂಪರೆ ಬಹುತೇಕ ಮಾಯವಾಗಿದೆ ಎಂದು ಅನಿಸಿದರೂ ಹಳ್ಳಿಗರು ಜೀವಂತವಿರಿಸಿರುವುದು ನೆಮ್ಮದಿ ವಿಷಯ. ಇಂದಿನ ಸಮಾವೇಶದಲ್ಲಿ ಹಾಡುವ ಗಾಯಕರೇ ನಮ್ಮ ನೆಲದ ಸಾಂಸತಿಕ ರಾಯಭಾರಿಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರದ ಸದಸ್ಯ ಸಂಚಾಲಕಿ, ಸಾಹಿತಿ ಡಾ.ಮೀನಾಕ್ಷಿ ಬಾಳಿ ಪ್ರಾಸ್ತಾವಿಕ ಮಾತನಾಡಿ, ವಸಾಹತುಶಾಹಿ ವಿದ್ವಾಂಸರು ಭಜನೆ ಮೇಳ, ಅದರಲ್ಲಿ ತೊಡಗುವವರನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಭಜನೆ ಪದಗಳಲ್ಲಿನ ಅಮೂಲ್ಯ ತತ್ವ ಪ್ರಸ್ಥಾನ ಹಾಗೂ ಹಾಡುಗಾರಿಕೆಯಲ್ಲಿನ ದೇಸಿ ವೈಶಿಷ್ಟ್ಯ ಗಮನಿಸದ್ದರಿಂದ ಮುಂದಿನ ಪೀಳಿಗೆ ಭಜನೆ ಮೇಳಗಳಿಂದ ದೂರ ಸರಿದು ಮೊಬೈಲ್, ಫೇಸ್ಬುಕ್, ಇನ್ಸ್ಟಾಗ್ರಾಂಗಳಲ್ಲಿ ಕಳೆದು ಹೋಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮ ಭಾಗದ ಹಾಡುಗಳನ್ನೇ ತಮ್ಮದಾಗಿಸಿಕೊಂಡು ಟಿವಿ ಶೋಗಳಲ್ಲಿ ಹಾಡಿ ಮಿಂಚುವವರನ್ನು ನೋಡಿ ನಾವು ಅವರಿಗೆ ಮುಗಿಬಿದ್ದೆವು. ಮೌಲಿಕ ತತ್ವ ಪ್ರಸ್ಥಾನಗಳ ತವನಿಧಿಯಾಗಿರುವ ಭಜನಾ ಪದಗಳು ಮತ್ತು ಅವುಗಳ ಹಾಡುಗಾರಿಕೆಯ ಮೂಲ ಧಾಟಿ-ಧರತಿ ಅದರ ಓ, ಓಹಟಿಗಳನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ ಮಾತನಾಡಿ, ಇಂತಹ ಸಮಾವೇಶಗಳಿಂದ ನಮ್ಮ ದೇಸಿ ಕಲೆ, ಸಾಹಿತ್ಯದ ಮಹತ್ವ ಯುವ ಪೀಳಿಗೆಗೆ ತಿಳಿಯಲಿದೆ. ಅವರು ಇದನ್ನು ಮುಂದುವರಿಸಿಕೊಂಡು ಹೋಗಲು ಅನುಕೂಲವಾಗುತ್ತದೆ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಭೀಮರಾಯ ಲಿಂಗೇರಿ ನಿರೂಪಣೆ ಮಾಡಿದರು. ಉಪನ್ಯಾಸಕ ಡಾ.ಎಸ್.ಎಸ್. ನಾಯಕ ವಂದಿಸಿದರು. ಸತ್ಯನಾರಾಯಣ ವೇದಿಕೆಯಲ್ಲಿದ್ದರು.