ಬೆಂಗಳೂರು : ಹೊಸಮನೆಯನ್ನು ಸಿಮೆಂಟ್, ಕಬ್ಬಿಣವನ್ನು ಬೆರೆಸಿದ ಕಾಂಕ್ರೀಟ್ ಮತ್ತು ಇಟ್ಟಿಗೆಯಿಂದ ನಿರ್ಮಿಸುವುದು ಸಹಜ. ಆದರೆ ಪ್ರಕೃತಿಯೊಂದಿಗೆ ಬೆರೆತು, ಹಳೆಯ ಸಂಪ್ರದಾಯದ ಸೊಗಡನ್ನು ಉಳಿಸಿಕೊಂಡು, ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಮನೆ ನಿರ್ಮಾಣದತ್ತ ಈಗ ಹಲವರು ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕರಾವಳಿ ಶೈಲಿಯ ಕೆಂಪು ಕಲ್ಲಿನ ಮನೆಗಳ ಟ್ರೆಂಡ್ ಹೆಚ್ಚಾಗುತ್ತಿದೆ.
ನೈಸರ್ಗಿಕವಾಗಿ ದೊರೆಯುವ ಕೆಂಪುಕಲ್ಲಿಗೆ ಜಂಬಿಟ್ಟಿಗೆ ಎಂದು ಕರೆಯಲಾಗುತ್ತದೆ. ಜಂಬಿಟ್ಟಿಗೆ ಅಥವಾ ಲ್ಯಾಟರೈಟ್ ಕಲ್ಲು ಉಷ್ಣವಲಯದ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ರೂಪುಗೊಳ್ಳುವ ಕಬ್ಬಿಣ ಮತ್ತು ಅಲ್ಯೂಮಿನಿಯಂ ಅಂಶಗಳಿಂದ ಕೂಡಿರುತ್ತವೆ. ಹಿಂದೆ ಸಾಂಪ್ರದಾಯಿಕವಾಗಿ ಸುಣ್ಣದ ಗಾರೆ ಬಳಸಿ ಕಟ್ಟಲಾಗುತ್ತದೆ. ಆಧುನಿಕ ನಿರ್ಮಾಣದಲ್ಲಿ ಸಿಮೆಂಟ್ ಹಾಗೂ ಮರಳು ಮಿಶ್ರಣದ ಗಾರೆಯನ್ನು ಬಳಸಲಾಗುತ್ತದೆ.
ಗೋಡೆಗೆ ಪ್ಲಾಸ್ಟರ್ ಅಗತ್ಯವಿಲ್ಲ:
ಜಂಬಿಟ್ಟಿಗೆಯ ಕೆಂಪು ಬಣ್ಣ ಮತ್ತು ನೈಸರ್ಗಿಕ ಒರಟು ವಿನ್ಯಾಸವು ಮನೆಯ ಹೊರಾಂಗಣಕ್ಕೆ ವಿಶಿಷ್ಟ ಸೌಂದರ್ಯ ನೀಡುತ್ತದೆ. ಕೆಲವರು ಗೋಡೆಯ ಒಂದು ಭಾಗವನ್ನು ಮಾತ್ರ ಜಂಬಿಟ್ಟಿಗೆಯಿಂದ ನಿರ್ಮಿಸಿ, ಉಳಿದ ಭಾಗಕ್ಕೆ ಪ್ಲಾಸ್ಟರ್ ಅಥವಾ ಬಣ್ಣ ಬಳಸಿ ವಿನ್ಯಾಸ ಮಾಡುತ್ತಾರೆ. ಆದರೆ ಸಂಪೂರ್ಣ ಹೊರಗೋಡೆಯನ್ನು ಪ್ಲಾಸ್ಟರ್ ಮಾಡದೆ ಒಂದು ರೀತಿಯ ಅಂಟು ಮಿಶ್ರಿತ ಪಾಲೀಶ್ ಬಳಿದು ಯಥಾವತ್ತಾಗಿ ಹಾಗೆ ಉಳಿಸಿಕೊಳ್ಳಬಹುದು. ಇದು ಮನೆಯ ಅಂಧವನ್ನು ನೈಸರ್ಗಿಗೊಳಿಸುತ್ತದೆ.
ಜಂಬಿಟ್ಟಿಗೆ ಮನೆಗಳಲ್ಲಿ ಉಷ್ಣ ನಿಯಂತ್ರಣದಲ್ಲಿರುತ್ತದೆ. ಕಲ್ಲಿನ ದಪ್ಪ ಗೋಡೆ ಮತ್ತು ಅದರ ಸ್ವಾಭಾವಿಕ ರಂಧ್ರಯುಕ್ತ ರಚನೆ ಉಷ್ಣದ ಚಲನವಲನವನ್ನು ನಿಧಾನಗೊಳಿಸುತ್ತದೆ.
ಜಂಬಿಟ್ಟಿಗೆ ಗೋಡೆಯ ಆಕರ್ಷಣೆ:
ಪೂರ್ಣ ಮನೆಯನ್ನು ಜಂಬಿಟ್ಟಿಗೆಯಿಂದಲೇ ಕಟ್ಟುವ ಪದ್ದತಿ ಕರಾವಳಿಯಲ್ಲಿ ಸಾಮಾನ್ಯ. ಅದೇ ಶೈಲಿಯಲ್ಲಿ ಬೆಂಗಳೂರಿನಲ್ಲೂ ಕಟ್ಟುವುದು ಖರ್ಚು ಮತ್ತು ವಾತಾವರಣದ ದೃಷ್ಟಿಯಿಂದ ಅಷ್ಟೇನೂ ಸೂಕ್ತವಲ್ಲ. ಆದರೆ ಮನೆಯ ಅಂಧವನ್ನು ಹೆಚ್ಚಿಸುವ ದೃಷ್ಟಿಯಿಂದ ಮನೆಯ ಮುಂಭಾಗದ ಒಂದು ಬದಿಯ ಗೋಡೆಯನ್ನು ಜಂಬಿಟ್ಟಿಗೆಯಿಂದ ಕಟ್ಟುವ ಟ್ರೆಂಡ್ ಈಗ ಹೆಚ್ಚಾಗಿದೆ. ವರಾಂಡ, ಪ್ರವೇಶದ್ವಾರ ಅಥವಾ ಕೆಲವು ಪ್ರಮುಖ ಗೋಡೆಗಳನ್ನು ಮಾತ್ರ ಜಂಬಿಟ್ಟಿಗೆಯಿಂದ ನಿರ್ಮಿಸಲಾಗುತ್ತದೆ. ಇದರಿಂದ ಜಂಬಿಟ್ಟಿಗೆಯ ನೈಸರ್ಗಿಕ ಸೌಂದರ್ಯವೂ ಸಿಗುತ್ತದೆ; ನಿರ್ಮಾಣ ವೆಚ್ಚವನ್ನೂ ನಿಯಂತ್ರಿಸಬಹುದು. ನೇರವಾಗಿ ಗಣಿಯಿಂದ ಬೇಕಾದ ಅಳತೆಗೆ ಕತ್ತರಿಸಿ ಬಳಸುವುದರಿಂದ ಇದೊಂದು ಪರಿಸರ ಸ್ನೇಹಿ ಕಟ್ಟಡ ಸಾಮಾಗ್ರಿ ಎಂದು ಕರೆಯಲಾಗುತ್ತದೆ.