ಹೊಳೆನರಸೀಪುರದ 23ನೇ ವಾರ್ಡ್ ವ್ಯಾಪ್ತಿಯ ಸಿದ್ಧಾರ್ಥ ನಗರದ ಆಶ್ರಯ ಬಡಾವಣೆಯ ದಯನೀಯ ಸ್ಥಿತಿ. 
ರಾಜ್ಯ

ಆಶ್ರಯ ಬಡಾವಣೆ ಜನರ ಬವಣೆ ಕೇಳೋರಿಲ್ಲ

ಪ್ರಮುಖ ಮುಖ್ಯಾಂಶಗಳು

  • ಸಿದ್ಧಾರ್ಥ ನಗರದ ಆಶ್ರಯ ಬಡಾವಣೆ
  • ಮೂಲಸೌಕರ್ಯ ಕೊರತೆ
ಹೊಳೆನರಸೀಪುರ: ಪಟ್ಟಣದ ಸಿದ್ಧಾರ್ಥ ನಗರದ ಆಶ್ರಯ ಬಡಾವಣೆಯಲ್ಲಿ ಮೂಲಸೌಕರ್ಯ ಕೊರತೆ ಕಾಡುತ್ತಿದ್ದು, ಇಡೀ ಬಡಾವಣೆ ಕಸದ ತೊಟ್ಟಿಯಾಗಿ ಮಾರ್ಪಟಿದೆ. ಇದರಿಂದಾಗಿ ನಾಗರಿಕರು ನರಕಯಾತನೆ ಅನುಭವಿಸುವಂತಾಗಿದೆ.
ಪಟ್ಟಣದ ಪುರಸಭಾ ವ್ಯಾಪ್ತಿಯ 23ನೇ ವಾರ್ಡ್ ವ್ಯಾಪ್ತಿಯ ಸಿದ್ಧಾರ್ಥ ನಗರದ (ಎಡಿ ಕಾಲನಿ) ಆಶ್ರಯ ಬಡಾವಣೆ ಅಭಿವೃದ್ಧಿ ಕಾಣದಿರುವುದರಿಂದ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಸ್ವಚ್ಛತೆ ಇಲ್ಲಿ ಮರೀಚಿಕೆಯಾಗಿದ್ದು, ಚರಂಡಿ, ಹದಗೆಟ್ಟ ರಸ್ತೆ, ಒಳಚರಂಡಿ, ಶುದ್ಧ ಕುಡಿಯುವ ನೀರು ಪೂರೈಕೆ, ವಿದ್ಯುತ್ ಸೌಲಭ್ಯವಿಲ್ಲದೆ ಬಡಾವಣೆಯ ನಾಗರಿಕರು ಸಮಸ್ಯೆಗಳ ನಡುವೆಯೇ ಬದುಕು ಸಾಗಿಸುತ್ತಿದ್ದಾರೆ.
2012-13ನೇ ಸಾಲಿನಲ್ಲಿ ಶಾಸಕ ಎಚ್.ಡಿ.ರೇವಣ್ಣ ಇಚ್ಛಾಶಕ್ತಿಯಿಂದ ಪುರಸಭೆ ಆಡಳಿತ ಆಶ್ರಯ ಬಡಾವಣೆಯಲ್ಲಿ 193 ನಿವೇಶನಗಳನ್ನು ಬಡ ಆದಿದ್ರಾವಿಡ ಸಮುದಾಯದವರಿಗೆ ವಿತರಿಸಿತು. ಆದರೆ, ಈವರೆಗೂ ಯಾವುದೇ ಸೌಕರ್ಯ ಕಲ್ಪಿಸಿಲ್ಲ.
ನೂರಾರು ಕುಟುಂಬ ಆಶ್ರಯ ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಂಡಿವೆ. ಸುಮಾರು 150 ಕುಟುಂಬ ನೂತನ ಆಶ್ರಯ ಬಡಾವಣೆಯಲ್ಲಿ ನೆಲೆಸಿವೆ. ಆದರೆ, ಸೌಕರ್ಯ ಇಲ್ಲದೆ, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ವಾಹನ ಚಾಲಕರು, ಎಲೆಕ್ಟ್ರಿಕ್ ಕೆಲಸಗಾರರು, ಹಲವು ಕೈಕಸುಬು ಮಾಡುವ ಬಡಕುಟುಂಬ ದಯನೀಯ ಸ್ಥಿತಿಯಲ್ಲಿ ಬದುಕು ಸಾಗಿಸುವಂತಾಗಿದೆ.
ಮಾದಿಗ ಸಮುದಾಯದವರಿಗೆ ನಿವೇಶನ ವಿತರಿಸಿ 15 ವರ್ಷ ಕಳೆಯುತ್ತಿದ್ದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಪುರಸಭಾ ವ್ಯಾಪ್ತಿಯಲ್ಲೇ ಈ ಬಡಾವಣೆ ಇದ್ದರೂ ಪೌರಕಾರ್ಮಿಕರು ಸ್ವಚ್ಛತೆಗೆ ನೇಮಕವಾಗಿಲ್ಲ. ಕಸ ಸಂಗ್ರಹಣೆಗೆ ಪುರಸಭೆಯ ವಾಹನ ನಿಯೋಜನೆಗೊಂಡಿಲ್ಲ. ಸ್ವಚ್ಛತೆ ಇಲ್ಲದೆ ಬಡಾವಣೆ ಗಬ್ಬೆದ್ದು ನಾರುತ್ತಿದೆ. ಚರಂಡಿ ಸೌಲಭ್ಯಗಳಿಲ್ಲದೆ ಮನೆ ಬಳಕೆ ನೀರು ರಸ್ತೆಯಲ್ಲಿ ನಿಂತು ಕೆಸರು ಗದ್ದೆಯಂತಾಗಿರುವುದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಹಯಲು ಬಹಿರ್ದೆಸೆಗೆ ತೆರಳುವುದು ಮಾಮೂಲಾಗಿದೆ. ಕುಡಿಯುವ ನೀರಿಗೆ ಪರದಾಡುಂತಾಗಿದೆ. ಬೀದಿದೀಪದ ಸೌಲಭ್ಯವಿಲ್ಲದ ಕಾರಣ ರಾತ್ರಿ ಸಮಯದಲ್ಲಿ ಓಡಾಡಲು ಭಯ ಪಡುವಂತಾಗಿದೆ. ಈ ನಡುವೆ ವಿದ್ಯುತ್ ಕಂಬಗಳ ಸೌಲಭ್ಯ ನೀಡಲಾಗಿದ್ದರೂ ನಿರ್ವಹಣೆ ಕೊರತೆ ಎದುರಾಗಿದೆ.
ಇಷ್ಟೆಲ್ಲ ಸಮಸ್ಯೆ ಇದ್ದರೂ ಪುರಸಭೆ ಅಧಿಕಾರಿಗಳಾಗಲೀ ಅಥವಾ ಸಿಬ್ಬಂದಿ ಆಶ್ರಯ ಬಡಾವಣೆಗೆ ಈವರೆಗೂ ಭೇಟಿ ನೀಡಿಲ್ಲ. ಜತೆಗೆ ಸಮಸ್ಯೆ ಕೇಳಿಲ್ಲ ಎಂಬುದು ಅಲ್ಲಿನ ನಾಗರಿಕರ ದೂರು.
ಸರ್ಕಾರದ ಯಾವುದೇ ಅಭಿವೃದ್ಧಿ ಯೋಜನೆ ಈವರೆಗೂ ಈ ಬಡಾವಣೆಗೆ ಬಂದಿಲ್ಲ. ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ಭರವಸೆ ನೀಡಿ ಹೋಗುತ್ತಾರೆ. ನಂತರ ರಾಜಕಾರಣಿಗಳಾಗಲೀ ಅಥವಾ ಅಧಿಕಾರಿಗಳಾಗಲೀ ಭೇಟಿ ನೀಡಿಲ್ಲ. ಹತ್ತಾರು ವರ್ಷ ಕಳೆದರೂ ಬಡಾವಣೆಯನ್ನು ಅಭಿವೃದ್ಧಿ ಮಾಡದೆ ಅನ್ಯಾಯ ಮಾಡಲಾಗಿದೆ. ಉತ್ತಮ ಪರಿಸರದಲ್ಲಿ ಜೀವನ ನಡೆಸಲು ಸಾಧ್ಯವಿಲ್ಲದಂತಾಗಿದ್ದು ಸಮಸ್ಯೆಗಳ ನಡುವೆಯೇ ಬದುಕುವಂತೆ ಆಗಿರುವುದು ನಮ್ಮ ದೌರ್ಭಾಗ್ಯ. ಇನ್ನಾದರೂ ಆಶ್ರಯ ಬಡಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳು ತುರ್ತಾಗಿ ಆಗಬೇಕೆಂದರೆ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು ಎಂಬುದು ಬಡಾವಣೆಯ ನಾಗರಿಕರ ಒತ್ತಾಯ.
ಸಿದ್ಧಾರ್ಥ ನಗರದ ಆಶ್ರಯ ಬಡಾವಣೆಯಲ್ಲಿ ಎಂಟು ವರ್ಷಗಳಿಂದ ನೆಲೆಸಿದ್ದೇನೆ. ನಿವೇಶನ ನೀಡಲಾಗಿದೆಯಾದರೂ ಸೌಲಭ್ಯ ಒದಗಿಸಲಿಲ್ಲ. ಒಳಚರಂಡಿ ಸೌಲಭ್ಯವಿಲ್ಲದೆ ಮಲವಿಸರ್ಜನೆಗೆ ತೊಂದರೆಯಾಗಿದೆ. ಬಳಸಲು ನೀರಿಲ್ಲದೆ ಖಾಲಿ ಪ್ರದೇಶಗಳಿಗೆ ತೆರಳಬೇಕಿದೆ. ಬೀದಿ ದೀಪಗಳ ನಿರ್ವಹಣೆ ಇಲ್ಲದೆ ರಾತ್ರಿ ಸಮಯದಲ್ಲಿ ಬಡಾವಣೆಯಲ್ಲಿ ಓಡಾಡಲು ಆಗುತ್ತಿಲ್ಲ.
ವಸಂತಾ ಆಶ್ರಯ ಬಡಾವಣೆ ನಿವಾಸಿ
ರಸ್ತೆ ಹಾಗೂ ಚರಂಡಿ ನಿರ್ಮಾಣವಾಗದಿರುವುದರಿಂದ ಮನೆ ಬಳಕೆ ನೀರು ರಸ್ತೆಯಲ್ಲಿ ಹರಿಯುತ್ತದೆ. ಇದರ ಪರಿಣಾಮ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಡೆಂೆ, ಮಲೇರಿಯಾದಂತಹ ರೋಗಗಳಿಗೆ ತುತ್ತಾಗಬೇಕಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಲ್ಲುವುದರಿಂದ ಓಡಾಡಲು ಆಗದ ಪರಿಸ್ಥಿತಿ ಎದುರಾಗುತ್ತದೆ. ಬಡಾವಣೆಯ ಅಭಿವೃದ್ಧಿ ಪಡಿಸುವತ್ತ ಜನಪ್ರತಿನಿಧಿಗಳು ತುರ್ತಾಗಿ ಕ್ರಮವಹಿಸಬೇಕಾಗಿದೆ.
ರೇಣುಕಾ ಸಿದ್ಧಾರ್ಥ ನಗರ ನಿವಾಸಿ
ಬಡಾವಣೆಯಲ್ಲಿ ಸ್ವಚ್ಛತೆಯಿಲ್ಲದೆ ರೋಗಗಳು ಹೆಚ್ಚಾಗುತ್ತಿದೆ. ಮಾದಿಗ ಸಮುದಾಯದವರು ನೆಲೆಸಿದ್ದರೂ ಸರ್ಕಾರದ ಸೌಲಭ್ಯ ನೀಡಿಲ್ಲ. ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಳ್ಳದಿರುವುದರಿಂದ ಬಡಾವಣೆಯಲ್ಲಿ ಕಸ-ಕಡ್ಡಿಗಳ ರಾಶಿಯೇ ಇದೆ. ಸಾವಿರಾರು ನಾಗರಿಕರು ನೆಲೆಸಿದ್ದರೂ ಮೂಲ ಸೌಕರ್ಯ ಒದಗಿಸಿಲ್ಲ. ಈ ವ್ಯವಸ್ಥೆಯಿಂದ ಸಮಸ್ಯೆ ಹೆಚ್ಚಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತು ಬಡಾವಣೆಯ ಅಭಿವೃದ್ಧಿಯತ್ತ ಗಮನ ಹರಿಸಬೇಕು.
ಕವಿತಾ ಆಶ್ರಯ ಬಡಾವಣೆ ನಿವಾಸಿ
ಬಡ ಕುಟುಂಬಗಳಿಗೆ ಉಚಿತ ನಿವೇಶನಗಳನ್ನು ನೀಡುವ ಜತೆಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರದ ಅನುದಾನವನ್ನೂನೀಡಲಾಗಿದೆ. ನಗರ ನೀರು ಸರಬರಾಜು ಮಂಡಳಿ ಬಡಾವಣೆಯ ಅಭಿವೃದ್ಧಿಗೆ ಮುಂದಾಗಿದೆ. ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅಭಿವೃದ್ಧಿ ಕೆಲಸಗಳ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು. ಆಮೂಲಕ ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು.
ಯು.ಎನ್.ಶಿವಶಂಕರ್ ಪುರಸಭೆ ಮುಖ್ಯಾಧಿಕಾರಿ, ಹೊಳೆನರಸೀಪು