ಯಳಂದೂರು ಪಟ್ಟಣದ ಬಳೇಮಂಟಪದ ಬಳಿ ಏ ರಿಚ್ ಫೌಂಡೇಷನ್ ಮೈಸೂರು, ಚಾಮರಾಜನಗರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಜಲ ವರ್ಣ ಚಿತ್ರಕಲಾ ಶಿಬಿರದಲ್ಲಿ ಚಿತ್ರ ಬಿಡಿಸುತ್ತಿರುವ ಕಲಾವಿದರು.  
ರಾಜ್ಯ

ಕುಂಚದಲ್ಲಿ ಅರಳಿದ ಬಳೆ ಮಂಟಪ

ಯಳಂದೂರು: ಏ ರಿಚ್ ಫೌಂಡೇಷನ್ ಮೈಸೂರು, ಚಾಮರಾಜನಗರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ‘ದ ಸ್ಟೋನ್ ರಿಂಗ್ಸ್’ ಜಲವರ್ಣ ಚಿತ್ರ ಕಲಾ ಶಿಬಿರದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರ ಭಾಗವಹಿಸಿದ್ದರು.

ಈ ವೇಳೆ ಹಿರಿಯ ಕಲಾವಿದ ಶ್ರೀಹರಿ ಮಾತನಾಡಿ, ಯಳಂದೂರು ಪಟ್ಟಣದಲ್ಲಿರುವ ಐತಿಹಾಸಿಕ ಬಳೆ ಮಂಟಪದ ಶಿಲ್ಪಕಲಾ ವೈವಿಧ್ಯಕ್ಕೆ ಸಾಕ್ಷಿಯಾಗಿ ನಿಂತಿರುವ ಸುಂದರ ಸ್ಮಾರಕವಾಗಿದೆ. ಇದು ನಮ್ಮ ರಾಜ್ಯದ ಹೆಮ್ಮೆಯಾಗಿದೆ. ಇಲ್ಲಿ ಏಕಶಿಲೆಯಲ್ಲಿ ಕೆತ್ತಿರುವ ಬೃಹತ್ ಗಾತ್ರದ ಸುಂದರವಾದ ಬಳೆಗಳನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಇದರ ಹಿಂಬದಿಯಲ್ಲಿರುವ ಗೌರೇಶ್ವರ ದೇಗುಲವೂ ಸಹ ಪ್ರಸಿದ್ಧಿ ಪಡೆದ ಸ್ಥಳವಾಗಿದೆ. ಇಂತಹ ಜಾಗದಲ್ಲಿ ದಿ ರಿಚ್ ಫೌಂಡೇಷನ್ ವತಿಯಿಂದ ಕಲಾಸಕ್ತ ಶ್ರೀನಿವಾಸು ಅವರು ಜಲವರ್ಣ ಚಿತ್ರಕಲಾ ಶಿಬಿರವನ್ನು ಆಯೋಜಿಸಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ಇದರ ಮೂಲಕ ಈ ಶಿಲ್ಪ ಕಲಾ ವೈಭವವನ್ನು ಜಗತ್ತಿನ ಇತರರಿಗೆ ಪಸರಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಇಂತಹ ಐತಿಹಾಸಿಕ ಸ್ಮಾರಕಗಳನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುತ್ತಿರುವ ಇಂತಹ ಕಲಾವಿದರ ಸಂಖ್ಯೆ ಹೆಚ್ಚಬೇಕು. ಈ ನಿಟ್ಟಿನಲ್ಲಿ ಇವರ ಶ್ರಮಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಏ ರಿಚ್ ಫೌಂಡೇಷನ್‌ನ ಅಧ್ಯಕ್ಷ ಶ್ರೀನಿವಾಸು ಮಾತನಾಡಿ, ಬಳೇಮಂಟಪ ಯಳಂದೂರಿನ ಹೆಮ್ಮೆಯಾಗಿದೆ. ಇದೊಂದು ಅದ್ಭುತ ಶಿಲ್ಪಕಾವ್ಯವಾಗಿದೆ. ಇಲ್ಲಿರುವ ಬಳೆಗಳು, ಇದರ ಸುತ್ತ ಕೆತ್ತಿರುವ ಸುಂದರ ಕೆತ್ತನೆಗಳು ಇದರೊಳಗೆ ಇರುವ ಕಂಬದ ಮೇಲಿನ ಪುರಾಣ ಪ್ರಸಿದ್ಧ ದೃಶ್ಯಗಳು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಇಲ್ಲಿರುವ ಮಂಟಪದ ಬಗ್ಗೆ ಅನೇಕರಿಗೆ ಮಾಹಿತಿಯೇ ಇಲ್ಲ. ಹಾಗಾಗಿ ಇಲ್ಲಿರುವ ಬಳೇಮಂಟಪದ ಬಳಿಯಲ್ಲೇ ಚಿತ್ರ ಕಲಾ ಶಿಬಿರ ಏರ್ಪಡಿಸಿ ಅದರ ಮೂಲಕ ಇದನ್ನು ಜಗತ್ತಿಗೆ ಪರಿಚಯಿಸುವ ಸಣ್ಣ ಪ್ರಯತ್ನವನ್ನು ಮಾಡಲಾಗಿದೆ. ಕಲೆಯ ಉಳಿವಿಗಾಗಿ ಇಂತಹ ಅನೇಕ ಶಿಬಿರಗಳನ್ನು ನಮ್ಮ ಸಂಸ್ಥೆಯ ವತಿಯಿಂದ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ವಿಸ್ತರಿಸುವ ಯೋಜನೆಯೂ ಇದೆ ಎಂದರು.

ಚಾಮರಾಜನಗರದ ಅಭ್ಯಾಸಿ ಟ್ರಸ್ಟ್‌ನ ಕಿರಣ್ ಗಿರ್ಗಿ ನೇತೃತ್ವದ ತಂಡದ ಸದಸ್ಯರು ಭಾವಗೀತೆ ಕಿರು ನಾಟಕದ ಪ್ರದರ್ಶನವನ್ನು ನೀಡಿದರು.
ಶಿಬಿರದ ನಿರ್ದೇಶಕರಾದ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಎನ್.ಕಾಂತರಾಜ್ ಮಾತನಾಡಿದರು. ನಂತರ ಸಂತೆಮರಹಳ್ಳಿ ಬಳಿ ಇರುವ ಶ್ರೀ ಫಾರ್ಮ್ ಹೌಸ್‌ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಲಾವಿದರನ್ನು ಸನ್ಮಾನಿಸಲಾಯಿತು. ಟ್ಯಾಬ್ಲೋ ಮಹದೇವ, ಗಣೇಶ್ ಧಾರೇಶ್ವರ್, ಸ್ನೇಕ್ ಮಹೇಶ್, ಸಂಪತ್‌ಕುಮಾರ್, ಕೃಷ್ಣಮೂರ್ತಿ, ಸ್ನೇಕ್ ಮಹೇಶ್, ಕಲಾವಿದರಾದ ದುಂಡು ಮಹದೇವಸ್ವಾಮಿ, ಯರಗಂಬಳ್ಳಿ ಲೋಕೇಶ್ ಇತರರು ಇದ್ದರು.