ರಾಜ್ಯದಲ್ಲಿ ಶೇ.43 ಮಳೆ ಕೊರತೆ
ಬೆಂಗಳೂರು: ‘ಎಲ್ ನಿನೋ’ ಪ್ರಭಾವದಿಂದ ಮುಂಗಾರು ದುರ್ಬಲಗೊಂಡಿದ್ದು, ರಾಜ್ಯದಲ್ಲಿ ಶೇ.43 ಮಳೆ ಕೊರತೆಯಾಗಿದೆ.
ಜೂ 1ರಿಂದ ಜೂ 22ವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 136 ಮಿಮೀ ಮಳೆಯಾಗುವ ಬದಲು 78 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.43ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಕರಾವಳಿ ವ್ಯಾಪ್ತಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ 551 ಮಿಮೀ ಮಳೆಯಾಗಬೇಕಿತ್ತು. ಆದರೆ, 210 ಮಿಮೀ ಬಿದ್ದಿದ್ದು, ಶೇ.62 ಮಳೆ ಅಭಾವ ಉಂಟಾಗಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ 234 ಮಿಮೀ ಬದಲು 95 ಮಿಮೀ ವರ್ಷಧಾರೆಯಾಗಿದ್ದು, ಶೇ.59 ಮಳೆ ಕುಂಠಿತವಾಗಿದೆ.
ದಕ್ಷಿಣ ಕರ್ನಾಟಕದ ವ್ಯಾಪ್ತಿಯ ಜಿಲ್ಲೆಗಳಲ್ಲಿ 53 ಮಿಮೀ ಮಳೆ ಬೀಳಬೇಕಿತ್ತು. 52 ಮಿಮೀ ಸುರಿದಿದ್ದು, ವಾಡಿಕೆಯಷ್ಟೇ ಮಳೆಯಾಗಿದೆ. ಉತ್ತರ ಕರ್ನಾಟಕದಲ್ಲಿ ವಾಡಿಕೆಯಂತೆ 74 ಮಿಮೀ ಮಳೆಯಾಗುವ ಬದಲು 53 ಮಿಮೀ ಬಿದ್ದಿದ್ದು, ಶೇ.27 ಕೊರತೆ ಉಂಟಾಗಿದೆ.ವಿಜಯನಗರ, ಕೊಪ್ಪಳ, ಬೀದರ್, ಬೆಳಗಾವಿ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಮೈಸೂರು ಮತ್ತು ದಾವಣಗೆರೆಯಲ್ಲಿ ಅತಿ ಹೆಚ್ಚು ಮಳೆ ಕೊರತೆ ಎದುರಾಗಿದೆ.
ಒಟ್ಟು ಮಳೆ ಪ್ರಮಾಣದಲ್ಲಿ ಶೇ.75 ಮಳೆಯು ಮುಂಗಾರಿನ ಅವಧಿಯಲ್ಲಿ ಸುರಿಯಲಿದೆ. ಆದರೆ, ನೈಋತ್ಯ ಮಾನ್ಸೂನ್ ಮೇಲೆ ‘ಎಲ್ ನಿನೋ’ ಪ್ರಭಾವದಿಂದ ಅಧಿಕ ತಾಪಮಾನ, ಮಳೆ ಕುಂಠಿತ ಉಂಟಾಗುತ್ತಿದೆ. ಪೆಸಿಫಿಕ್ ಸಾಗರದಲ್ಲಿ ಜುಲೈ ವೇಳೆಗೆ ‘ಎಲ್ ನಿನೋ’ ಆಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಆಗಸ್ಟ್ , ಸೆಪ್ಟೆಂಬರ್‌ನಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಇಳಿಮುಖವಾಗಲಿದೆ.
2ನೇ ಬಾರಿ ಅತಿ ಹೆಚ್ಚು ಮಳೆ ಕೊರತೆ
1972ರಿಂದ 2026ರ ಜೂ 1ರಿಂದ ಜೂ 22ವರೆಗಿನ ಮಳೆಯಾಗಿರುವ ಅಂಕಿಅಂಶ ಗಮನಿಸಿದರೆ ಪ್ರಸಕ್ತ ಸಾಲಿನಲ್ಲಿ 2ನೇ ಅತಿ ಹೆಚ್ಚು ಮಳೆ ಕೊರತೆ ಉಂಟಾಗಿದೆ. 2023ರ ಜೂ 1ರಿಂದ ಜೂ 24ವರೆಗೆ ರಾಜ್ಯದಲ್ಲಿ ಶೇ.64 ಮಳೆ ಅಭಾವ ಉಂಟಾಗಿತ್ತು. ಆ ವರ್ಷದಲ್ಲಿ ಬರಗಾಲ ಕಾಣಿಸಿಕೊಂಡಿತ್ತು. 1972ರ ಜೂ 1ರಿಂದ ಜೂ 24ವರೆಗೆ ಶೇ.43, 1976ರ ಜೂ 1ರಿಂದ ಜೂ 24ವರೆಗೆ ಶೇ.42 ಮತ್ತು 2012ರ ಜೂ 1ರಿಂದ ಜೂ 24ವರೆಗೆ ಶೇ.41 ಮಳೆ ಕೊರತೆ ಉಂಟಾಗಿತ್ತು. ಯಾವ್ಯಾವ ವರ್ಷದಲ್ಲಿ ಮಳೆ ಅಭಾವ ಉಂಟಾಗಿತ್ತೋ ಆ ವರ್ಷದಲ್ಲಿ ಬರಗಾಲ ಇತ್ತು ಎಂದು ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ, ವಿಜಯವಾಣಿಗೆ ತಿಳಿಸಿದ್ದಾರೆ.
ಮೇ ಮತ್ತು ಜೂನ್‌ನಲ್ಲಿ ಮಳೆ ಕೊರತೆಯಿಂದಾಗಿ ಜಲಾಶಯಗಳಿಗೆ ಹರಿದು ಬರುವ ಒಳಹರಿವು ನೀರಿನ ಪ್ರಮಾಣ ಗಣನೀಯವಾಗಿ ಕುಸಿತವಾಗಿದೆ. ಇದರಿಂದಾಗಿ ರಾಜ್ಯದ ಬಹುತೇಕ ಡ್ಯಾಂಗಳಲ್ಲಿ ನೀರು ಇಲ್ಲವಾಗಿದೆ. ಪ್ರಮುಖವಾಗಿ ಕರಾವಳಿ ಮತ್ತು ಮಲೆನಾಡಿನ ಭೌಗೋಳಿಕ ಪ್ರದೇಶಗಳಲ್ಲಿ ಮಳೆ ಕೊರತೆ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಈ ಬಾರಿ ವಾಡಿಕೆಯಂತೆ ಬಿತ್ತನೆಯಾಗಿದೆ. ಆದರೆ, ವಾರದಿಂದ ಸರಿಯಾಗಿ ಮಳೆ ಸುರಿಯದಿರುವುದು ಬಿತ್ತನೆ ಮೊಳಕೆಯೊಡೆದಿಲ್ಲ ಎಂದರು.