ಹೊಸೂರು : ತಮಿಳುನಾಡಿನಿಂದ ಕರ್ನಾಟಕ್ಕೆ ಜಲ್ಲಿಕಲ್ಲು ಸೇರಿ ಯಾವುದೇ ರೀತಿಯ ಕ್ರಷರ್ ಸಾಮಗ್ರಿಯನ್ನು ಮುಂದಿನ ಮೂರು ತಿಂಗಳು ರವಾನಿಸಬಾರದು ಎಂದು ತಮಿಳು ಸರ್ಕಾರ ಆದೇಶಿಸಿದೆ.
ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿಭಾಗ ಅತ್ತಿಬೆಲೆ ಜಿಜುವಾಡಿ ಚೆಕ್ಪೋಸ್ಟ್ ಬಳಿ ಕ್ರಷರ್ ಲಾರಿಗಳನ್ನು ಕೃಷ್ಣಗಿರಿ ಜಿಲ್ಲಾಧಿಕಾರಿ ದಿನೇಶ್ ಕುಮಾರ್ ತಡೆದು ಪರಿಶೀಲಿಸಿದರು.
ಜಿಲ್ಲಾಧಿಕಾರಿ ದಿನೇಶ್ಕುಮಾರ್ ಮಾತನಾಡಿ, ಕರ್ನಾಟಕಕ್ಕೆ ಯಾವುದೇ ಜಲ್ಲಿ, ಕ್ರಷರ್ ಸಂಬಂಧಿತ ಸಾಮಗ್ರಿಯನ್ನು ತಮಿಳುನಾಡಿನಿಂದ ಕೊಂಡೊಯ್ಯುವುದನ್ನು ರ್ನಿಬಂಧಿಸಿ, ಸರ್ಕಾರ ಸೂಚಿಸಿದೆ. ಈಗಾಗಲೇ ಕ್ರಷರ್ ಮತ್ತು ಲಾರಿ ಮಾಲೀಕರ ಸಂದೊಂದಿಗೆ ಚರ್ಚಿಸಲಾಗಿದ್ದು, ಆದೇಶ ಮೀರಿ ರವಾನಿಸಿದರೆ ಕ್ರಷರ್ ಮತ್ತು ಲಾರಿ ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ ಎಂದರು.
ನಾಲ್ಕು ಲಾರಿ ಸೀಜ್ : ಜಲ್ಲಿ ಮತ್ತು ಕ್ರಷರ್ ಪದಾರ್ಥ ಸಾಗಿಸುವ 484 ಲಾರಿಗಳು ನೋಂದಣಿಯಾಗಿವೆ. ಈ ಲಾರಿಗಳು ಅನ್ಯರಾಜ್ಯಕ್ಕೆ ಹೋದರೆ ಅಂತಹ ವಾಹನಗಳನ್ನು ಸೀಜ್ ಮಾಡಲಾಗುವುದು. ಗ್ರೀನ್ಪಾಸ್ ಮೂಲಕ ಜಲ್ಲಿ ರವಾನಿಸುವ ಲಾರಿಗಳೂ ಸಹ ಅನುಮತಿ ಪಡೆಯಬೇಕು. ಅನುಮತಿ ಇಲ್ಲದೇ ಕರ್ನಾಟಕಕ್ಕೆ ಹೊರಟಿದ್ದ ನಾಲ್ಕು ಲಾರಿಗಳನ್ನು ಸೀಜ್ ಮಾಡಿ, ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಸಿಸಿ ಕ್ಯಾಮರಾ ಕಣ್ಗಾವಲು : ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳ ಮೇಲೆ ಸಿಸಿ ಕ್ಯಾಮರಾ ಕಣ್ಗಾವಲು ಇರಲಿದೆ. ಹೊಸೂರುನಿಂದ ಗಡಿ ಭಾಗದವರೆಗೆ 14 ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅಲ್ಲದೇ ಎಲ್ಲ ಕ್ರಷರ್ ಲಾರಿಗಳ ನಂಬರ್ ಪ್ಲೇಟ್ ಮೇಲೆ ಕ್ಯೂಆರ್ ಕೋಡ್ ಅಂಟಿಸಿ, ಲಾರಿ ಸಂಚಾರದ ಮೇಲೆ ನಿಗಾವಹಿಸಲಾಗುವುದು. ತಮಿಳುನಾಡು ಪೊಲೀಸ್, ಅರ್ಟಿಒ ಹಾಗೂ ಕಂದಾಯ ಮತ್ತು ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ಗಡಿ ಪ್ರದೇಶದಲ್ಲಿ ಪರಿಶೋಧನೆ ನಡೆಸಲಿದ್ದಾರೆ ಎಂದು ಡಿಸಿ ತಿಳಿಸಿದರು. ಹೊಸೂರು ಡಿಎಸ್ಪಿ ಬಾಲಕೃಷ್ಣನ್, ಹೊಸೂರು ಆರ್ಟಿಒ ಈಶ್ವರಮೂರ್ತಿ ಇದ್ದರು.