ಮದ್ದೂರು ತಾಪಂ ಸಭಾಂಗಣದಲ್ಲಿ ಡಿ.ದೇವರಾಜ ಅರಸು ಅವರ 111 ನೇ ಜನ್ಮ ದಿನವನ್ನು ಆಚರಿಸಲಾಯಿತು. ಶಿವಕುಮಾರ್ ಬಿರಾದಾರ, ಧನಂಜಯ, ಸುನೀತಾ, ಗೋಪಿ, ಅರುಣ್ ಕುಮಾರ್, ಗಂಗರಾಜು ಇದ್ದರು.
ಮದ್ದೂರು: ದೀನ ದಲಿತರು, ಬಡವರ ಪಾಲಿನ ಚೈತನ್ಯ ಶಕ್ತಿಯಾಗಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಗುರುತಿಸಿಕೊಂಡಿದ್ದರು ಎಂದು ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಗುರುವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111 ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಳುವವನೇ ಭೂ ಒಡೆಯ ಎಂಬ ಯೋಜನೆಯನ್ನು ಜಾರಿಗೆ ತರುವ ಮೂಲಕ ರಾಜ್ಯದಲ್ಲಿ 21 ಲಕ್ಷ ಎಕರೆ ಭೂಮಿಯನ್ನು ನಿರ್ಗತಿಕರಿಗೆ ನೀಡಿದರು. ಈ ಕಾಯ್ದೆ ಲಕ್ಷಾಂತರ ಜನರಿಗೆ ಭೂ ಒಡೆತನದ ಹಕ್ಕನ್ನು ನೀಡಿತು. ಅರಸು ಅವರು ಸರ್ವ ಜನಾಂಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾನೂನನ್ನು ಜಾರಿಗೊಳಿಸಿದ ಪರಿಣಾಮ ಅವರನ್ನು ಸದಾ ನೆನೆಯುವಂತಾಗಿದೆ ಎಂದರು.
ಮೀಸಲಾತಿ ಸೌಲಭ್ಯ ಕಲ್ಪಿಸಿ ಶೋಷಿತ ಸಮುದಾಯಗಳಿಗೆ ಅಸ್ಮಿತೆಯನ್ನು ತಂದು ಕೊಟ್ಟ ಮಹಾನ್ ನಾಯಕ ಅರಸು. ಜೀತ ಪದ್ಧತಿ, ಮಲ ಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡುವ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದರು ಎಂದು ಸ್ಮರಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಗೋಪಿ ಪ್ರಧಾನ ಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ ಬಿಇಒ ಧನಂಜಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ಸುನೀತಾ, ತಾಪಂ ಇಒ ಗಂಗರಾಜು, ಸಿಡಿಪಿಒ ಅರುಣ್‌ಕುಮಾರ್, ಅಬಕಾರಿ ಸಬ್ ಇನ್‌ಸ್ಪೆಕ್ಟರ್ ಅಶೋಕ್ ಬಿರಾದಾರ್, ದಲಿತ ಮುಖಂಡರಾದ ವೆಂಕಟಾಚಲಯ್ಯ, ನಿಂಗಯ್ಯ, ಮಹೇಂದ್ರ ಕುಮಾರ್ ಮತ್ತಿತರರು ಇದ್ದರು.