ನಾಗರನವಿಲೆ ದೇವಸ್ಥಾನದಲ್ಲಿ ನಾಗರ ದೋಷ ನಿವಾರಣೆಗೆ ಸಾಮೂಹಿಕ ಆಶ್ಲೇಷ ಬಲಿ ಪೂಜೆ ನೆರವೇರಿಸುತ್ತಿರುವುದು. 
ರಾಜ್ಯ

ಸರ್ಪದೋಷಕ್ಕೆ ನಾಗರನವಿಲೆಯಲ್ಲಿದೆ ಪರಿಹಾರ

ಪ್ರಮುಖ ಮುಖ್ಯಾಂಶಗಳು

  • ಬಾಗೂರು ಹೋಬಳಿಯ ಶ್ರೀ ಕ್ಷೇತ್ರ ನಾಗರನವಿಲೆ
  • ಸರ್ಪದೋಷವಿದ್ದರೂ ಈ ಪುಣ್ಯಕ್ಷೇತ್ರದಲ್ಲಿ ಪರಿಹಾರ

ಚನ್ನರಾಯಪಟ್ಟಣ:

ತಾಲೂಕಿನ ಬಾಗೂರು ಹೋಬಳಿಯ ಶ್ರೀ ಕ್ಷೇತ್ರ ನಾಗರನವಿಲೆಯಲ್ಲಿ ಎಂತಹದ್ದೆ ಕಠಿಣ ಸರ್ಪದೋಷವಿದ್ದರೂ ಈ ಪುಣ್ಯಕ್ಷೇತ್ರದಲ್ಲಿ ಪರಿಹಾರ ದೊರಕಲಿದೆ.

ನಾಗರನವಿಲೆಗೆ ಕಾಲಿಟ್ಟರೆ ಎಲ್ಲವೂ ಪರಿಹಾರವಾಗಲಿದೆ ಎಂಬುದು ಇಲ್ಲಿನ ಭಕ್ತರ ಅಚಲ ನಂಬಿಕೆ. ಹಾಗಾಗಿ ಇಲ್ಲಿಗೆ ನಿತ್ಯ ನೂರಾರು ಭಕ್ತರು ಆಗಮಿಸುವುದು ವಾಡಿಕೆ. ಪ್ರತಿ ಸೋಮವಾರ ಇಲ್ಲಿಗೆ ಸಾವಿರಾರು ಭಕ್ತರು ಭೇಟಿ ನೀಡುವುದು ಇಲ್ಲಿನ ಮತ್ತೊಂದು ವಿಶೇಷ.

ಜಮದಗ್ನಿ ಋಷಿಗಳು ಪೂಜಿಸಿದ ಹಾಗೂ ತಮ್ಮ ನೇತ್ರದ ಅಗ್ನಿಯನ್ನು ಈ ಶಿವಲಿಂಗದೊಳಗೆ ಸ್ಥಾಪಿಸಿದ್ದಾರೆಂದು ಸ್ಥಳ ಪುರಾಣ ಶಾಸನಗಳು ಹೇಳುತ್ತವೆ. ಅಲ್ಲದೆ ಇದು ಹಿಂದು-ಮುಸ್ಲಿಮರ ಭಾವೈಕ್ಯ ಸ್ಥಳವಾಗಿರುವುದು ವಿಶೇಷ.

ಜಮದಗ್ನಿ ಋಷಿಮುನಿ ಶಿಷ್ಯರೊಂದಿಗೆ ಲೋಕಸಂಚಾರ ಮಾಡುವ ವೇಳೆ ತಿಪಟೂರು ಭಾಗದ ಈಗಿನ ನವಿಲೆ ಎಂದು ಹೆಸರಾಗಿರುವ ಪ್ರದೇಶದ ಮಾರ್ಗವಾಗಿ ಬರುತ್ತಿರುತ್ತಾರೆ. ಆ ಕಾಲಕ್ಕೆ ನವಿಲೆ ಗ್ರಾಮ ದಟ್ಟ ಅರಣ್ಯದಿಂದ ಕೂಡಿದ್ದ ಪ್ರದೇಶವಾಗಿರುತ್ತದೆ. ಹೀಗೆ ಆಗಮಿಸುತ್ತಿದ್ದ ಋಷಿಮುನಿಗಳಿಗೆ ಒಂದು ವಿಸ್ಮಯ ಗೋಚರಿಸುತ್ತದೆ. ಒಂದು ನಾಗರಹಾವು ಮತ್ತು ನವಿಲು ಜತೆಯಲ್ಲಿ ಆಟವಾಡುವುದನ್ನು ಕಂಡು ಪರಮಾಶ್ಚರ್ಯವಾಗುತ್ತದೆ.!
ಈ ದೃಶ್ಯ ಯಾವುದೋ ಲೋಕಕಲ್ಯಾಣದ ಕಾರ್ಯಕ್ಕೆ ಸೂಚನೆ ಕೊಡುತ್ತಿದೆ ಎಂದು ಗ್ರಹಿಸಿದ ಜಮದಗ್ನಿ ಋಷಿಗಳು ಶಿಷ್ಯರೊಡಗೂಡಿ ಆ ಸ್ಥಳದಲ್ಲೇ ಶಿವಪೂಜೆ ನೆರವೇರಿಸುತ್ತಾರೆ. ಬಳಿಕ ಅಲ್ಲಿನ ರಾಜನೊಬ್ಬನ ನೆರವಿನಿಂದ ಉದ್ಭವ ನಾಗೇಶ್ವರ ಶಿವಲಿಂಗಕ್ಕೆ ತಪೋಶಕ್ತಿಯನ್ನು ವಿಲೀನಗೊಳಿಸುತ್ತಾರೆ. ಈ ಸ್ಥಳವು ‘ನಾಗರನವಿಲೆ’ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಲಿ... ಕಷ್ಟ ಎಂದು ಬರುವವರ ಅಭಿಷ್ಟೆಗಳು ನೆರವೇರಲಿ... ಸಕಲ ನಾಗದೋಷಗಳು ಪರಿಹಾರವಾಗುವ ಸ್ಥಳ ಇದಾಗಲಿ ಎಂದು ಅನುಗ್ರಹಿಸುತ್ತಾರೆ.
ಸ್ಥಳಪುರಾಣದ ಪ್ರಕಾರ ಅಧಿಕ ಸಂಖ್ಯೆಯಲ್ಲಿ ನಾಗರಹಾವು ಹಾಗೂ ನವಿಲುಗಳು ವಾಸಿಸುತ್ತಿದ್ದ ಪ್ರದೇಶವಾದ್ದರಿಂದ ನಾಗರ ನವಿಲೆ ಎಂಬ ಹೆಸರು ಬಂದಿದೆ. ಸರ್ಪದೋಷ, ಕಂಕಣ ಭಾಗ್ಯ, ಪುತ್ರ ಸಂತಾನಕ್ಕಾಗಿ ನಿತ್ಯ ನೂರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಪುರಾಣಗಳ ಪ್ರಕಾರ, ಉರಗ ಮಯೂರಪುರ ಎಂಬ ಹೆಸರಿನಿಂದ ಈ ಪ್ರದೇಶವನ್ನು ಕರೆಯಲಾಗುತ್ತಿತ್ತು. ಕಾಲಕ್ರಮೇಣ ನಾಗರನವಿಲೆ ನಾಗೇಶ್ವರ ದೇವಾಲಯ ಎಂದು ಪ್ರಸಿದ್ದಿಯಾಯಿತು.
ನಾಗರನವಿಲೆಗೂ ರಾಮಾಯಣಕ್ಕೂ ನಂಟಿದೆ ಎಂಬ ನಂಬಿಕೆ ಇದೆ. ತ್ರೇತಾಯುಗದಲ್ಲಿ ಶ್ರೀರಾಮ ಇಲ್ಲಿಗೆ ಬಂದು ಹೋಗಿರುವುದಕ್ಕೆ ಕುರುಹುಗಳು ಇವೆ. ದ್ವಾಪರಯುಗದಲ್ಲಿ ಪಾಂಡವರು ಅಜ್ಞಾತವಾಸ ಮಾಡಿದ ಪುಣ್ಯ ಕ್ಷೇತ್ರವೂ, ವಿಷ್ಣು ಭಕ್ತನಾದ ಚಂದ್ರಹಾಸನು ಈ ಕ್ಷೇತ್ರದಲ್ಲಿ ನೆಲೆಸಿದ್ದರಂತೆ ಎಂಬ ವಿಚಾರ ಸ್ಥಳ ಪುರಾಣದಲ್ಲಿದೆ. ಋಷಿಮುನಿ ಜಮದಗ್ನಿ, ಪತ್ನಿ ರೇಣುಕಾದೇವಿ ಹಾಗೂ ಪುತ್ರ ಪರಶುರಾಮ ಪರ್ಯಟನೆ ಕೈಗೊಂಡಿದ್ದ ಸಂದರ್ಭ ಇಲ್ಲಿಗೆ ಭೇಟಿ ನೀಡಿ, ಉದ್ಭವವಾದ ನಾಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಅಲ್ಲಿಂದ 2 ಕಿ.ಮೀ. ದೂರದಲ್ಲಿರುವ ರೇಚನಹಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದ ಜಮದಗ್ನಿ ದೇವಾಲಯಕ್ಕೆ ಬರುವುದಕ್ಕಾಗಿಯೇ ಸುರಂಗ ಕೊರೆಸಿದ್ದರು. ಇಂದಿಗೂ ಆ ಸುರಂಗವಿದೆ.

ಈ ಗ್ರಾಮದ ಮತ್ತೊಂದು ವಿಶೇಷವೆಂದರೆ ನಾಗೇಶ್ವರ ದೇಗುಲ ಸುತ್ತ ಇತರ 5 ದೇವಾಲಯಗಳಿದ್ದು, ಅವುಗಳೂ ಸಹ ಮಹತ್ವ ಪಡೆದಿವೆ. ಶ್ರೀಕ್ಷೇತ್ರದಲ್ಲಿ ನಾಗೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿಲ್ಲ. ಬದಲಾಗಿ ಅದು ಉದ್ಭವ ಮೂರ್ತಿಯಾಗಿದೆ. ಆನಂತರ ಈ ಕ್ಷೇತ್ರವನ್ನು ಪಂಚಲಿಂಗೇಶ್ವರ ಕ್ಷೇತ್ರವನ್ನಾಗಿ ಮಾಡಲಾಗಿದೆ. ಹೀಗಾಗಿ ಇಲ್ಲಿ ಸೋಮೇಶ್ವರ, ಚಂಡಿಕೇಶ್ವರ, ಬ್ರಹ್ಮಲಿಂಗೇಶ್ವರ, ಸಿದ್ದಲಿಂಗೇಶ್ವರ ಹಾಗೂ ನಾಗೇಶ್ವರ ಸ್ವಾಮಿ ದೇವಾಲಯಗಳಿವೆ. ಸ್ವಲ್ಪ ದೂರದಲ್ಲಿ ಪಾರ್ವತಮ್ಮನವರ ದೇವಾಲಯವೂ ಇದೆ. ಇಲ್ಲಿ ಈಶ್ವರ ಹಾಗೂ ವಿಷ್ಣು ದೇವರು ಒಂದೇ ದೇವಾಲಯದಲ್ಲಿದ್ದು, ಈ ದೇವತೆಗಳು ಪ್ರತ್ಯೇಕ ಗರ್ಭಗುಡಿಯಲ್ಲಿ ನೆಲೆಸಿರುವುದು ಇಲ್ಲಿನ ವಿಶೇಷ. ಇಲ್ಲಿ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನದಂದು ವಿಶೇಷ ಪೂಜೆ ನಡೆಯುತ್ತದೆ.

ನಾಗದೋಷ ನಿವಾರಣೆಗೆ ಇದು ಪ್ರಸಿದ್ಧಿಯಾಗಿರುವುದರಿಂದ ಇಲ್ಲಿ ಮಜ್ಜನಬಾವಿ ಇದೆ. ನಾಗದೋಷ ನಿವಾರಣೆಗೆ ಮಜ್ಜನಬಾವಿ ನೀರಿನಿಂದ ಸ್ನಾನ ಮಾಡಿ ಮುಡಿಕೊಟ್ಟು ನಂತರ ಉರುಳು ಸೇವೆ ಮಾಡಿ ಹಣ್ಣುಕಾಯಿ ಅರ್ಪಿಸಬೇಕು. ಚರ್ಮರೋಗ ಇರುವವರು ಹರಕೆ ಹೊತ್ತು ಜನ್ಮನಕ್ಷತ್ರದ ಪ್ರಕಾರ ಪ್ರತಿವಾರ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಮಜ್ಜನಬಾವಿಯಿಂದ ನೀರನ್ನು ಮೈಮೇಲೆ ಹಾಕಿಸಿಕೊಂಡು ಉರುಳು ಸೇವೆ ಮಾಡಿ ಪ್ರಸಾದ ರೂಪದಲ್ಲಿ ನೀಡುವ ಹುತ್ತದ ಮಣ್ಣು ಮತ್ತು ಗಂಧ ಲೇಪಿಸಿಕೊಳ್ಳುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ಸರ್ಪದೋಷ ಪರಿಹಾರಕ್ಕಾಗಿ ನಾಗರಕಲನ್ನು ಪ್ರತಿಷ್ಠಾಪಿಸಲಾಗುತ್ತದೆ.

ಶ್ರೀ ಕ್ಷೇತ್ರದಲ್ಲಿ ನಾಗದೋಷ ಪರಿಹಾರಕ್ಕಾಗಿ ಸೋಮವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲೂ ಆಶ್ಲೇಷ ಬಲಿ ಪೂಜೆ ನೆರವೇರಿಸಲಾಗುತ್ತದೆ. ಉಳಿದಂತೆ ಸ್ವಾಮಿಯವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆ, ವಾಹನ ಸೇವೆ, ನೆರವೇರಿಸಲಾಗುತ್ತದೆ.

ಹಾಸನದಿಂದ ಕುಂದೂರು ಮಠದ ಮಾರ್ಗವಾಗಿ 50 ಕಿ.ಮೀ., ಬೆಂಗಳೂರಿನಿಂದ ಹಿರೀಸಾವೆ ಮಾರ್ಗವಾಗಿ 150 ಕಿ.ಮೀ., ಮೈಸೂರಿನಿಂದ ಚನ್ನರಾಯಪಟ್ಟಣ ಮಾರ್ಗವಾಗಿ 115 ಕಿ.ಮೀ., ಚನ್ನರಾಯಪಟ್ಟಣದಿಂದ ಬಾಗೂರು ಮಾರ್ಗವಾಗಿ ಸಾಗಿದರೆ 27 ಕಿ.ಮೀ., ತಿಪಟೂರಿನಿಂದ ಕಾರೆಹಳ್ಳಿ ಮಾರ್ಗ ಅಥವಾ ದಸರಿಘಟ್ಟದ ಮಾರ್ಗವಾಗಿ 22 ಕಿ.ಮೀ., ಅರಸೀಕರೆ-ಗಂಡಸಿ ಮಾರ್ಗ 42 ಕಿ.ಮೀ. ಕ್ರಮಿಸಿದರೆ ಶ್ರೀ ಕ್ಷೇತ್ರ ಸಿಗಲಿದೆ.

ಯುಗಾದಿ ಹಬ್ಬದ ನಂತರದ ಮಖಾ ನಕ್ಷತ್ರ ದಿನದಂದು ಗಿರಿಜಾ ಕಲ್ಯಾಣೋತ್ಸವ, ಮಹಾ ರಥೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಶ್ರಾವಣ ಮಾಸದಲ್ಲಿ ನಾಗಲಿಂಗೇಶ್ವರ ಸ್ವಾಮಿ ಗ್ರಾಮ ದೇವತೆ ಕೆಂಪಮ್ಮ ದೇವಿಗೆ ನಂದಾದೀಪ ಹಚ್ಚಿ ಅಖಂಡ ಪೂಜೆ ನೆರವೇರಿಸಲಾಗುವುದು. ಕಾರ್ತಿಕ ಮಾಸದಲ್ಲಿ ಗ್ರಾಮದ ಕೆರೆತುಂಬಿ ಕೊಡಿ ಬಿದ್ದ ನಂತರ ತೆಪ್ಪೋತ್ಸವ ಮಾಡಲಾಗುತ್ತದೆ.

ವೇದ ಅಭಿಶಾಸ್ತ್ರಿ
ಅರ್ಚಕರು, ಶ್ರೀ ನಾಗೇಶ್ವರಸ್ವಾಮಿ ದೇವಸ್ಥಾನ, ನಾಗರ ನವಿಲೆ