ಬಸವಕಲ್ಯಾಣ ತಾಲೂಕಿನ ಅಟ್ಟೂರ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಬಸವ ಉತ್ಸವ ಹಾಗೂ ಬಸವ ಯುವ ಸೇನೆಯ ದಶಮಾನೋತ್ಸವ ಕಾರ್ಯಕ್ರಮವನ್ನು ರೈತ ವಿಜ್ಞಾನಿ ಪ್ರಶಸ್ತಿ ಪುರಸತ ಶರಣಬಸಪ್ಪ ಪಾಟೀಲ್​ ಉದ್ಘಾಟಿಸಿದರು. ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಶ್ರೀ ಸಿದ್ಧಲಿಂಗ ದೇವರು, ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯ, ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ, ಸಾವಿತ್ರಿ ಸಲಗರ ಇತರರಿದ್ದರು. 
ರಾಜ್ಯ

ಶರಣರ ವಚನಗಳಲ್ಲಿದೆ ಸಮಸ್ಯೆಗಳಿಗೆ ಪರಿಹಾರ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸಿದ್ಧಲಿಂಗ ದೇವರು ನುಡಿ
  • ಅಟ್ಟೂರಿನಲ್ಲಿ ಬಸವ ಉತ್ಸವ
ಬಸವಕಲ್ಯಾಣ: ಆಧುನಿಕ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಶರಣರ ವಚನಗಲ್ಲಿ ಇದೆ ಎಂದು ತಾಳಿಕೋಟೆಯ ಖಾಸ್ಗತೇಶ್ವರ ಮಠದ ಶ್ರೀ ಸಿದ್ಧಲಿಂಗ ದೇವರು ಹೇಳಿದರು.ತಾಲೂಕಿನ ಅಟ್ಟೂರ ಗ್ರಾಮದ ಭಾವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಬಸವ ಯುವ ಸೇನೆಯಿಂದ ಗುರುವಾರ ಆಯೋಜಿಸಿದ್ದ ಬಸವ ಉತ್ಸವ ಹಾಗೂ ಸೇನೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ಸಮಾನತೆ, ಕಾಯಕ, ದಾಸೋಹ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ಬಸವಣ್ಣನವರ ವೈಚಾರಿಕ ಚಿಂತನೆ ಮತ್ತು ವಚನ ಸಾಹಿತ್ಯ ಸಾರ್ವಕಾಲಿಕ ಎಂದರು.
ಸಾನ್ನಿಧ್ಯ ವಹಿಸಿದ್ದ ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಮೂಢನಂಬಿಕೆಗಳನ್ನು ತೊರೆದು ವೈಚಾರಿಕ ಪ್ರೆಯನ್ನು ಬೆಳೆಸಿಕೊಳ್ಳುವುದು ಮತ್ತು ಜಾತಿಮುಕ್ತ ಸಮಸಮಾಜ ನಿರ್ಮಿಸುವದೇ ವಚನ ಸಾಹಿತ್ಯದ ಮೂಲ ಆಶಯವಾಗಿದೆ ಎಂದರು.ನೇತೃತ್ವ ವಹಿಸಿದ್ದ ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎನ್ನುವ ವಚನನದ ಮೂಲಕ ವಿಶ್ವಗುರು ಬಸವಣ್ಣನವರು ಆದರ್ಶ ಬದುಕಿನ ಸಪ್ತ ಸೂತ್ರವನ್ನು ತಿಳಿಸಿಕೊಟ್ಟಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ಎಲ್ಲರೂ ನಡೆಯಲು ಪ್ರಯತ್ನಿಸಬೇಕಿದೆ ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿದ ಹಾಲಿಸುಲ್ತಾನಪುರದ ರೈತ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಶರಣಬಸಪ್ಪ ಪಾಟೀಲ್​ ಮಾತನಾಡಿ, ಯುವ ಸಮುದಾಯ ಕೃಷಿ ಕಡೆಗೆ ಆಸಕ್ತಿ ಬೆಳೆಸಿಕೊಳ್ಳುವದು ಅವಶ್ಯಕವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ತಹಸೀಲ್ದಾರ್​ ಸಾವಿತ್ರಿ ಮಾತನಾಡಿ, ಪರೀೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ. ಸಾಧಕರ ಸನ್ಮಾನ ಬೇರೆಯವರಿಗೆ ಸಾಧನೆಗೆ ಪ್ರೇರಣೆ ಆಗುತ್ತಿದೆ. ಸಾಧಕರನ್ನು, ಪ್ರತಿಭಾವಮತರನ್ನು ಗುರುತಿಸಿ ಗೌರವಿಸುವ, ಪ್ರೋತ್ಸಾಹಿಸುವ ಕೆಲಸ ನಡೆಯಬೇಕು ಎಂದರು.
ನವದೆಹಲಿಯ ಜೈ ಭಾರತ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಹವಾ ಮಲ್ಲಿನಾಥ ಮಹಾರಾಜ ಮುತ್ಯಾ ಸಾನಿಧ್ಯ, ಮಂಠಾಳನ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ ಸಮ್ಮುಖ ವಹಿಸಿದ್ದರು. ಗ್ರಾಮದ ಗಣ್ಯರು, ಬಸವ ಯುವ ಸೇನೆಯ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು. ಸಿದ್ದಲಿಂಗ ಪಾಟೀಲ್​ ಸ್ವಾಗತಿಸಿದರು. ಅಂಬಾರಾಯ ಉಗಾಜಿ ನಿರೂಪಣೆ ಮಾಡಿದರು. ಈ ವೇಳೆ ಶಿವಾಣಿ ಜಾಂತಿಕರ ಭರತನಾಟ್ಯ ಪ್ರದರ್ಶನ ಮಾಡಿ ಗಮನ ಸೆಳೆದರು.
"

ಬಸವ ಯುವ ಸೇನೆ ದಶಕದ ಸಂಭ್ರಮಾಚರಣೆ ಸಂದರ್ಭದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಬಸವ ತತ್ವವನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ನಡೆ-ನುಡಿ ಒಂದಾಗಿಸಿಕೊಂಡಾಗ ಬದುಕಬೇಕು. ಅಂದಾಗ ಬದುಕಿಗೆ ಮೆರಗು ಬರುತ್ತದೆ.

— > ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಹುಲಸೂರು
"

ಬಸವ ಯುವ ಸೇನೆಯು ಹತ್ತು ವರ್ಷಗಳಿಂದ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಯುವ ಪೀಳಿಗೆಯು ದುಶ್ಚಟಗಳಿಂದ ದೂರವಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಶರಣರ ಕಾಯಕ ಮತ್ತು ದಾಸೋಹ ತತ್ವಗಳ ನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

— > ಶ್ರೀ ಸಿದ್ಧಲಿಂಗ ದೇವರು ಖಾಸ್ಗತೇಶ್ವರ ಮಠ ತಾಳಿಕೋಟೆ