The soil of Tnamangala Lake is the property of the farmers. 
ರಾಜ್ಯ

ತ್ನಾಮಂಗಲ ಕೆರೆಯ ಮಣ್ಣು ರೈತರ ಸ್ವತ್ತು

ಕುಣಿಗಲ್: ತಾಲೂಕಿನ ಕಿತ್ನಾಮಂಗಲ ಕೆರೆಯ ಮಣ್ಣು ಈ ಭಾಗದ ರೈತರಿಗೆ ಸೇರಬೇಕು. ಅವರ ಆಸ್ತಿಯಾಗಿದೆ ಹೀಗಾಗಿ ರೈತರಿಗಲ್ಲದೇ ಬೇರೆ ಯಾರಿಗೂ ಮಣ್ಣು ಕೊಡುವುದಿಲ್ಲ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಸ್ಪಷ್ಟಪಡಿಸಿದರು.
ತಾಲೂಕಿನ ಆಡಳಿತ ಸೌಧದಲ್ಲಿ ಆಯೋಜಿಸಿದ್ದ ಕಿತ್ನಾಮಂಗಲ ಗ್ರಾಪಂ ವ್ಯಾಪ್ತಿಯ ರೈತರು, ರೈತ ಸಂಘಟನೆ, ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಬೆಂಬಲಿಗ ಮಣ್ಣು ಸರಬರಾಜಿನ ಗುತ್ತಿಗೆ ತೆಗೆದುಕೊಂಡಿದ್ದಕ್ಕೆ ಶಾಸಕರು ಕಾರ್ಖಾನೆ ಪರವಾಗಿ ಇದ್ದಾರೆ ಎಂದು ಗೂಬೆ ಕೂರಿಸಿದ್ದಾರೆ. ಆದರೆ ನಾನು ಕಾರ್ಖಾನೆ ಪರವಾಗಿ ಇಲ್ಲ, ರೈತರ ಪರವಾಗಿ ಇದ್ದೇನೆ ಎಂದು ಹೇಳಿದರು.
ಮುಖಂಡ ಮಹರಾಷ್ಟ್ರ ಶಿವಣ್ಣ, ರೈತ ಸಂಘದ ರಾಜ್ಯ ಸಂಚಾಲಕ ಆನಂದ್‌ಪಟೇಲ್ ಮಾತನಾಡಿ, ಕಿತ್ನಾಮಂಗಲ ಕೆರೆಯ ಮಣ್ಣನ್ನು ಖಾಸಾಗಿ ಕಾರ್ಖಾನೆಗೆ ಟೆಂಡರ್ ನೀಡಿರುವುದು ಅಕ್ಷಮ್ಯ ಅಪರಾಧವಾಗಿದೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಪೇಪರ್ ನೋಟಿಷಿಕೇಶನ್ ನೀಡದೇ, ನೇರವಾಗಿ ಆನ್‌ಲೈನ್‌ನಲ್ಲಿ ಟೆಂಡರ್ ಕರೆದು, ಅವರಿಗೆ ಬೇಕಾದ ವ್ಯಕ್ತಿಗಳಿಗೆ ಟೆಂಡರ್ ನೀಡಿದ್ದಾರೆ. ಸ್ಥಳೀಯ ಗ್ರಾಮಸ್ಥರಿಗೆ ಈ ಮಾಹಿತಿಯೇ ಇಲ್ಲ, ಟಿಪ್ಪರ್‌ಗಳನ್ನು ಬಳಸಿ ಮಣ್ಣು ತುಂಬುತ್ತಿದ್ದ ವೇಳೆಯಲ್ಲಿ ಟೆಂಡರ್ ಆಗಿರುವುದು ತಿಳಿದು ರೈತರಿಗೆ ತೀವ್ರ ಆತಂಕವಾಗಿತ್ತು. ಕೆರೆಯ ಮಣ್ಣು ರೈತನಿಗೆ ಸೇರಬೇಕು ವಿನಃ ಕಾರ್ಖಾನೆಗಳಿಗೆ ಅಲ್ಲ ಎಂದು ತಿಳಿಸಿದರು.
ಕಾರ್ಖಾನೆ ಎಚ್.ಆರ್.ಹೇಮಂತ್‌ಕುಮಾರ್ ಮಾತನಾಡಿ, ನಿಯಮಾನುಸಾರವಾಗಿ ಟೆಂಡರ್ ಮೂಲಕ ಮಣ್ಣು ತೆಗೆದುಕೊಳ್ಳುತ್ತಿದ್ದೇವೆ. ಇದರಲ್ಲಿ ಯಾವುದೇ ಲೋಪದೋಷವಿಲ್ಲ, ಕಾರ್ಖಾನೆಯಲ್ಲಿ ಸ್ಥಳೀಯರು 200ಕ್ಕೂ ಅಧಿಕ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹೀಗಿರುವ ಮಣ್ಣು ಎರಡು ತಿಂಗಳಿಗೆ ಆಗುವಷ್ಟು ಮಾತ್ರ ಇದೆ. ಅದು ಮುಗಿದರೇ ಕಾರ್ಖಾನೆ ಮುಚ್ಚಬೇಕಾಗುತ್ತದೆ. ಕಾರ್ಮಿಕರಿಗೆ ತೊಂದರೆಯಾಗಲಿದೆ ಹೀಗಾಗಿ ಮಣ್ಣು ತೆಗೆದುಕೊಳ್ಳಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಣ್ಣ ನೀರಾವರಿ ಇಲಾಖೆಯ ಎಇಇ ತಿಪ್ಪೇಸ್ವಾಮಿ, ಸಹಾಯಕ ಎಂಜಿನಿಯರ್ ಜ್ಞಾನಮೂರ್ತಿ, ವಿವಿಧ ರೈತ ಸಂಘಗಳ ಕರಿಗೌಡ, ಅನಿಲ್‌ಕುಮಾರ್, ಮುನಿಯಪ್ಪ, ಸತೀಶ್, ಮುಖಂಡರಾದ ಮೊದೂರು ಗಂಗಾಧರ್, ಭಮ್ಮದೇವ, ಕುಮಾರಸ್ವಾಮಿ ಮತ್ತಿತರರು ಇದ್ದರು.