ChandreGowda 
ರಾಜ್ಯ

ಮಾಜಿ ಸಂಸದ ಚಂದ್ರೇಗೌಡ ಪುತ್ರಿಗೆ ಮಂಜೂರಾಗಿದ್ದ ಸೈಟ್​ ರದ್ದು| High court

ಬೆಂಗಳೂರು: ಮಾಜಿ ಸಂಸದ ಡಿ.ಬಿ. ಚಂದ್ರೇಗೌಡ ಅವರ ಪುತ್ರಿ ಪಲ್ಲವಿ ರಾಮ್​ ಅವರಿಗೆ ಗೆದ್ದಲಹಳ್ಳಿಯಲ್ಲಿ ಜಿ&ಕೆಟಗರಿ ನಿವೇಶನ ಮಂಜೂರು ಮಾಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 2010ರಲ್ಲಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್​ ರದ್ದುಗೊಳಿಸಿದ್ದು, ಬಿಡಿಎ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ತಮಗೆ ಸೇರಿದ್ದ ನಿವೇಶನದ ಭಾಗವನ್ನು ಪಲ್ಲವಿ ರಾಮ್​ ಅವರಿಗೆ ಬಿಡಿಎ ಮಂಜೂರು ಮಾಡಿದೆ ಎಂದು ಆಕ್ಷೇಪಿಸಿ ಮಲ್ಲೇಶ್ವರಂನ ಕೆ.ಎನ್​. ಪ್ರಕಾಶ್​ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್​ ಮತ್ತು ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ರಾಜಕೀಯ ಪ್ರಭಾವ ಮತ್ತು ಸ್ವಜನ ಪಕ್ಷಪಾತದ ಆಧಾರದಲ್ಲಿ ಬಿಡಿಎ ಸೈಟ್​ ಹಂಚಿಕೆ ಮಾಡಿದೆ. ಉನ್ನತ ಸಾರ್ವಜನಿಕ ಹುದ್ದೆಯಲ್ಲಿರುವವರು ಸಾರ್ವಜನಿಕ ಒಳಿತಿಗಾಗಿ ಶ್ರಮಿಸಬೇಕೇ ಹೊರತು, ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿಯಲ್ಲ. ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ತಾವೇನು ಮಾಡುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. 
ಸಂಸದರಾಗಿದ್ದ ಡಿ.ಬಿ. ಚಂದ್ರೇಗೌಡ ಅವರು ತಮ್ಮ ಪುತ್ರಿ ಪಲ್ಲವಿ ರಾಮ್​ ಸಾರ್ವಜನಿಕ ಜೀವನದಲ್ಲಿದ್ದು, ಶಾಲೆಯೊಂದನ್ನು ನಡೆಸುತ್ತಿದ್ದಾರೆ ಎಂಬ ಕಾರಣ ನೀಡಿ "ಜಿ' ಕೆಟಗರಿ ಅಡಿಯಲ್ಲಿ ನಿವೇಶನ ನೀಡುವಂತೆ ಮುಖ್ಯಮಂತ್ರಿಗೆ 2009ರಲ್ಲಿ ಪತ್ರ ಬರೆದಿದ್ದರು. ಅದರಂತೆ 2010ರಲ್ಲಿ ಬಿಡಿಎ ಪಲ್ಲವಿ ಅವರಿಗೆ ನಿವೇಶನ ಹಂಚಿಕೆ ಮಾಡಿತ್ತು. ಬಿಡಿಎ ನಿಯಮಗಳ ಪ್ರಕಾರ ಬೆಂಗಳೂರಿನಲ್ಲಿ ಸ್ವಂತ ನಿವೇಶನ ಹೊಂದಿರುವವರಿಗೆ ನಿವೇಶನ ನೀಡಲು ಸಾಧ್ಯವಿಲ್ಲ. ಆದರೆ, ಪಲ್ಲವಿ ಅವರ ಕುಟುಂಬಕ್ಕೆ ಸ್ವಂತ ನಿವೇಶನ ಇದ್ದರೂ ಕೂಡ ನಿಯಮ ಉಲ್ಲಂಘಿಸಿ, ಕುಟುಂಬದ ರಾಜಕಿಯ ಹಿನ್ನಲೆ ನೋಡಿ ನಿವೇಶನ ಮಂಜೂರು ಮಾಡಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. 

ದರೋಡೆಕೋರರ ಕೂಟವಲ್ಲದೆ ಮತ್ತೇನು?:

ತೀರ್ಪಿನಲ್ಲಿ 5ನೇ ಶತಮಾನದ ದಾರ್ಶನಿಕ ಸೈಂಟ್​ ಆಗಸ್ಟಿನ್​ ಅವರ ಹೇಳಿಕೆಯೊಂದನ್ನು ಉಲ್ಲೇಖಿಸಿರುವ ನ್ಯಾಯಪೀಠ, "ನ್ಯಾಯವಿಲ್ಲದೆ ಹೋದರೆ, ಈ ರಾಜ್ಯವು ಕೇವಲ ಒಂದು ದೊಡ್ಡ ದರೋಡೆಕೋರರ ಕೂಟವಲ್ಲದೆ ಮತ್ತೇನು?' ಎಂದು ಸರ್ಕಾರಿ ವ್ಯವಸ್ಥೆಯ ವಿರುದ್ಧ ಅತ್ಯಂತ ಕಠಿಣ ಪದಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.  ಹಾಲಿ ಸಂಸದರ ಮಗಳು ಎಂಬ ಏಕೈಕ ಕಾರಣಕ್ಕೆ ಬಿಡಿಎ ನಿವೇಶನ ಮಂಜೂರು ಮಾಡಿದೆ. ಇದು ನಾಚಿಕೆಗೇಡಿನ ನಡೆ ಎಂದು ಎಂದು ಹೇಳಿದೆ.
ℹ️

ದಾಖಲೆಗಳಿಲ್ಲದ ಕಾಲ್ಪನಿಕ ನಿವೇಶನ 

ಅರ್ಜಿದಾರರು 1989ರಲ್ಲಿ ಗೆದ್ದಲಹಳ್ಳಿಯಲ್ಲಿ ವಸತಿ ನಿವೇಶನ ಖರೀದಿಸಿದ್ದರು. ಬಿಡಿಎ ಅಧಿಕಾರಿಗಳು ಅವರ ನಿವೇಶನದ ಮೇಲೆ "ಸೈಟ್​ ನಂ. 253ಎ' ಎಂದು ಹೊಸ ನಿವೇಶನವನ್ನು ಸೃಷ್ಟಿಸಿದ್ದರು. 2010ರ ಜೂ. 7ರಂದು ಪಲ್ಲವಿ ಅವರಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಆದರೆ, ಬಿಡಿಎ ಕಮಿಷನರ್​ ಲೇಔಟ್​ ಪ್ಲಾನ್​ನಲ್ಲಿ "ಸೈಟ್​ ನಂ. 253ಎ' ಅನ್ನು ಅಧಿಕೃತವಾಗಿ ರಚಿಸಲು ಅ. 12ರಂದು ಸಹಿ ಹಾಕಿದ್ದರು. ಅಂದರೆ, ಲೇಔಟ್​ ನಕಾಶೆಯಲ್ಲೇ ಇಲ್ಲದ ನಿವೇಶನವನ್ನು ಮಂಜೂರು ಮಾಡಿ ನಂತರ ಹಂಚಿಕೆ ಮಾಡಲಾಗಿದೆ. ಇದು ರಾಜಕೀಯ ಪ್ರಭಾವದಿಂದ ಅಧಿಕಾರಿಗಳು ಸೃಷ್ಟಿಸಿದ ದಾಖಲೆಗಳಿಲ್ಲದ ಕಾಲ್ಪನಿಕ ನಿವೇಶನ ಎಂದು ಹೈಕೋರ್ಟ್​ ಪರಿಗಣಿಸಿದೆ.