ಮಾಣಿಕನಗರದ ಗುರುಗಂಗಾ ಹಳ್ಳಕ್ಕೆ ಹರಿದಿರುವ ರಾಸಾಯನಿಕಯುಕ್ತ ತ್ಯಾಜ್ಯದಿಂದ ನೀರು ಮಲಿನಗೊಂಡಿರುವುದು.
- ಭಕ್ತರ ಆಕ್ರೋಶ
- ಮಾಣಿಕನಗರದ ಗುರುಗಂಗಾ ಉಳಿಸಿ ಅಭಿಯಾನಕ್ಕೆ ಆನಂದರಾಜ ಪ್ರಭು ಕರೆ
ಹುಮನಾಬಾದ್: ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದ ಕೆಲ ಕಾರ್ಖಾನೆಗಳಿಂದ ಸಂಸ್ಕರಣೆ ಮಾಡದ ರಾಸಾಯನಿಕಯುಕ್ತ ವಿಷ ತ್ಯಾಜ್ಯವನ್ನು ಮತ್ತೆ ಮಾಣಿಕನಗರದ ಮಾಣಿಕಪ್ರಭು ದೇವಸ್ಥಾನ ಸಮೀಪದ ಗುರುಗಂಗಾ ಹಳ್ಳಕ್ಕೆ ಹರಿಬಿಟ್ಟಿದ್ದರಿಂದ ಪರಿಸರ ಮಾಲಿನ್ಯ ಮರುಕಳಿಸಿದ್ದು, ಸಾರ್ವಜನಿಕರು ಹಾಗೂ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ತ್ಯಾಜ್ಯ ಹರಿಬಿಟ್ಟಿದ್ದರಿಂದ ಗುರುಗಂಗಾ ಹಳ್ಳದ ನೀರು ಕಪ್ಪು ಬಣ್ಣಕ್ಕೆ ತಿರುಗಿ ಸಂಪೂರ್ಣ ಮಲಿನಗೊಂಡಿದ್ದು, ದುರ್ವಾಸನೆ ವ್ಯಾಪಿಸಿದೆ. ಪವಿತ್ರ ಕ್ಷೇತ್ರಕ್ಕೆ ಆಗಮಿಸುವ ಸಾವಿರಾರು ಭಕ್ತರು ಹಾಗೂ ಸ್ಥಳಿಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪರಿಸರ ಜತೆಗೆ ಜನ&ಜಾನುವಾರುಗಳ ಆರೋಗ್ಯಕ್ಕೂ ಅಪಾಯ ಎದುರಾಗುವ ಭೀತಿ ಕಾಡುತ್ತಿದೆ.
ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಗಳಿಂದ ಅನಧಿಕೃತವಾಗಿ ಹಳ್ಳಕ್ಕೆ ರಾಸಾಯನಿಕ ಮಿಶ್ರಿತ ತ್ಯಾಜ್ಯ ಹರಿಬಿಡುತ್ತಿರುವುದು ಇಂದು&ನಿನ್ನೆಯ ಸಮಸ್ಯೆಯಲ್ಲ. ಹಲವು ವರ್ಷಗಳಿಂದ ನಡೆಯುತ್ತಿದ್ದು, ತ್ಯಾಜ್ಯ ಭೂಮಿಯೊಳಗೆ ಸೇರಿ ಈ ಭಾಗದ ಅಂತರ್ಜಲವೂ ಮಾಲಿನ್ಯಗೊಳಿಸುತ್ತಿದೆ. ಇಲ್ಲಿನ ನೀರು ಕುಡಿಯಲು ಯೋಗ್ಯವಿಲ್ಲ ಎಂದು ಈ ಹಿಂದೆ ಆರೋಗ್ಯ ಇಲಾಖೆ ವರದಿ ನೀಡಿದೆ. ಈ ಭಾಗದ ಜನರು ಚರ್ಮರೋಗ, ಬಂಜೆತನ ಸೇರಿ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಜಾನುವಾರುಗಳಲ್ಲೂ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಹಲವು ಬಾರಿ ಹೋರಾಟ ನಡೆದಿದ್ದರೂ ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಆಡಳಿತದ ಕಾರ್ಯವೈಖರಿ ಪ್ರಶ್ನಿಸುವಂತೆ ಮಾಡಿದೆ.
ಇತ್ತೀಚೆಗೆ ವಿವಿಧ ಇಲಾಖೆ ಹಿರಿಯ ಹಾಗೂ ಲೋಕಾಯುಕ್ತ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಬಂದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಜನರ ಆಕ್ರೋಶ ಹೆಚ್ಚಾದಾಗ ಮಾತ್ರ ದಾಳಿ ನಡೆಸುವ ಅಧಿಕಾರಿಗಳು ನಂತರ ಈ ಸಮಸ್ಯೆಯತ್ತ ಹಣಕಿಯೂ ಹಾಕುವುದಿಲ್ಲ ಎಂದು ಸಾರ್ವಜನಿಕರು ಕಿಡಿಕಾರುತ್ತಾರೆ.
ಸಂಬಂಧಿತ ಕೈಗಾರಿಕೆ, ಪರಿಸರ ಇಲಾಖೆ ಹಾಗೂ ಜಿಲ್ಲಾಡಳಿತ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳದ್ದರಿಂದ ಸಮಸ್ಯೆ ಪದೇಪದೆ ಮರುಕಳಿಸುತ್ತಿದೆ. ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಈ ಭಾಗದ ಜನರ ಆರೋಗ್ಯ ಮತ್ತಷ್ಟು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂಬ ಆತಂಕವನ್ನು ಸ್ಥಳಿಯರು ವ್ಯಕ್ತಪಡಿಸಿದ್ದಾರೆ.
ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ನಡುವೆ ಕೈಗಾರಿಕಾ ಪ್ರದೇಶದ ಕೆಲ ಕಾರ್ಖಾನೆಗಳು ಹಳ್ಳಕ್ಕೆ ರಾಸಾಯನಿಕಯುಕ್ತ ವಿಷತ್ಯಾಜ್ಯ ಹರಿಬಿಟ್ಟು ನೀರನ್ನು ಮಲಿನಗೊಳಿಸಿವೆ. ಜಲಚರಗಳು ಅಸುನೀಗುತ್ತಿದ್ದು, ಜನ&ಜಾನುವಾರುಗಳ ಆರೋಗ್ಯಕ್ಕೂ ಅಪಾಯ ಎದುರಾಗಿದೆ ಎಂದು ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಶ್ರೀ ಆನಂದರಾಜ ಪ್ರಭು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ಹರಿಬಿಟ್ಟಿರುವ ಅವರು, ಹಲವು ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ವಿಷಯ ತಂದರೂ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಗುರುಗಂಗಾ ಉಳಿಸಿ ಅಭಿಯಾನಕ್ಕೆ ಸಾರ್ವಜನಿಕರು ಕೈಜೋಡಿಸಬೇಕು. ಪವಿತ್ರ ಹಳ್ಳವನ್ನು ಮಾಲಿನ್ಯಮುಕ್ತ ಮಾಡುವುದು ಪ್ರತಿಯೊಬ್ಬರ ಹೊಣೆ ಎಂದು ಕರೆ ನೀಡಿದ್ದಾರೆ.
ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಮಾಣಿಕನಗರದ ಗುರುಗಂಗಾ ಹಳ್ಳ ಸೇರಿ ಯಾವುದೇ ಸ್ಥಳಕ್ಕೆ ತ್ಯಾಜ್ಯ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು. ಪರಿಸರ ನಿಯಮ ಉಲ್ಲಂಘಿಸುವ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ಸಂಸ್ಕರಣಾ ಘಟಕಗಳ ಕಾರ್ಯನಿರ್ವಹಣೆಯನ್ನು ನಿರಂತರ ಪರಿಶೀಲಿಸಬೇಕು. ರ್ನಿಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಪವಿತ್ರ ಧಾರ್ಮಿಕ ಕ್ಷೇತ್ರವಾದ ಮಾಣಿಕನಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪರಿಸರ ಸಂರಕ್ಷಣೆಗೆ ಶಾಶ್ವತ ಯೋಜನೆ ರೂಪಿಸಬೇಕೆಂದು ಸಾರ್ವಜನಿಕರು ಹಾಗೂ ಭಕ್ತರು ಆಗ್ರಹಿಸಿದ್ದಾರೆ.