ಖಿಳೇಗಾಂವ ಗ್ರಾಮದಲ್ಲಿ ವಿಭೂತಿ ತಯಾರಿಸುತ್ತಿರುವ ಹೊನಗೋಳ ಕುಟುಂಬಸ್ಥರು.
ಅಥಣಿ ತಾಲೂಕಿನ ಖಿಳೇಗಾಂವದಲ್ಲಿ ತಯಾರಿಸುವ ವಿಭೂತಿ ಸುಪ್ರಸಿದ್ಧಿ ಪಡೆದಿದ್ದು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿ ದೇಶದ ವಿವಿಧ ಪ್ರಮುಖ ದೇವಾಲಯಗಳಿಗೂ
ಬಸವಣ್ಣನ ದೇವಸ್ಥಾನದಿಂದ ಹೆಸರುವಾಸಿಯಾಗಿರುವ ಖಿಳೇಗಾಂವ ಗ್ರಾಮದಲ್ಲಿ ವಿಭೂತಿ ಹೊನಗೋಳ ಕುಟುಂಬಸ್ಥರು ಎರಡು ತಲೆಮಾರುಗಳಿಂದ ತಯಾರಿಸುತ್ತ ಬಂದಿದ್ದಾರೆ. ಪ್ರಸ್ತುತ ಗಣೇಶ, ಸಂದೀಪ, ಬಸಪ್ಪ, ಧರೆಪ್ಪ ಸೇರಿ ಏಳು ಹೊನಗೋಳ ಕುಟುಂಬಗಳು ವಿಭೂತಿ ತಯಾರಿಕೆಯಲ್ಲಿ ನಿರತವಾಗಿವೆ.
ಕಚ್ಚಾ ವಸ್ತು ಆಮದು: ವಿಭೂತಿ ತಯಾರಿಸುವುದು ಸುಲಭದ ಕೆಲಸವೇನಲ್ಲ. ಅದರ ತಯಾರಿಕೆಗೆ ವಿವಿಧೆಡೆಯಿಂದ ಕಚ್ಚಾವಸ್ತುಗಳನ್ನು ತರಿಸಿಕೊಳ್ಳಬೇಕಾಗುತ್ತದೆ. ಆಂಧ್ರಪ್ರದೇಶದ ಕರ್ನೂಲ್, ಗುಂಟೂರಿನಿಂದ ಬಿಳಿಪುಡಿ ಹಾಗೂ ಮಹಾರಾಷ್ಟ್ರದ ವಳಸಂಗ ಗ್ರಾಮದಿಂದ ಬಿಳಿಕಲ್ಲನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ವಿಭೂತಿ ಸಿದ್ಧತೆ ಪ್ರಕ್ರಿಯೆ: ಬಿಳಿಕಲ್ಲನ್ನು ಸುಟ್ಟು ಪುಡಿ ಮಾಡಿ, ನಂತರ ಅದರೊಂದಿಗೆ ಬಿಳಿಪುಡಿ, ಗೋಮೂತ್ರ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ 4 ದಿನ ನೆನೆ ಇಡಲಾಗುತ್ತದೆ. ಬಳಿಕ ಉಂಡೆ ಮಾಡಿ ಒಣಗಿಸಿ, ಬೇಕಾದ ಆಕಾರ ನೀಡಿ ವಿವಿಧ ಗಾತ್ರದ ವಿಭೂತಿ ತಯಾರಿಸಲಾಗುತ್ತದೆ. ಗಾತ್ರಕ್ಕೆ ಅನುಗುಣವಾಗಿ ವಿಭೂತಿಗೆ ಕನಿಷ್ಠ 5 ರೂ.ದಿಂದ 5,000 ರೂ.ವರೆಗೂ ಬೆಲೆ ನಿಗದಿಪಡಿಸಲಾಗುತ್ತದೆ.
ಪ್ರಮುಖ ದೇವಾಲಯಗಳಿಗೆ ಪೂರೈಕೆ: ಖಿಳೇಗಾಂವನಲ್ಲಿ ತಯಾರಿಸುವ ಪವಿತ್ರ ವಿಭೂತಿ ನರಸೋಬಾವಾಡಿ ದತ್ತ, ಶಿಖರ್ ಸಿಂಗನಾಪುರ ಮಹಾದೇವ, ಯಡೂರು ವೀರಭದ್ರೇಶ್ವರ, ಶ್ರೀಶೈಲ ಮಲ್ಲಿಕಾರ್ಜುನ, ತಿರುಪತಿ ದೇವಸ್ಥಾನ, ರತ್ನಾಗಿರಿ ಖಂಡೋಬಾ, ಜತ್ತ ಬಸವಣ್ಣ, ಕೂಡಲಸಂಗಮದ ಸಂಗಮನಾಥ ಸೇರಿ ಹಲವು ಪ್ರಮುಖ ದೇವಸ್ಥಾನಗಳಿಗೆ ಪೂರೈಸಲಾಗುತ್ತದೆ. ವರ್ಷಕ್ಕೆ 60 ಟನ್ ವಿಭೂತಿ ಮಾರಾಟವಾಗುತ್ತದೆ.
ಸರ್ಕಾರದ ಸಹಾಯ: ವಿಭೂತಿ ತಯಾರಿಕೆಯನ್ನೇ ಕುಲಕಸುಬಾಗಿ ಮಾಡಿಕೊಂಡಿರುವ ಹೊನಗೋಳ ಕುಟುಂಬಸ್ಥರು ಸರ್ಕಾರ ಹಾಗೂ ಯಾವುದೇ ಸಂ&ಸಂಸ್ಥೆಯ ಸಹಾಯವಿಲ್ಲದೆ ವಿಭೂತಿ ತಯಾರಿಸಿಕೊಂಡು ಬರುತ್ತಿದ್ದಾರೆ. ಆದರೆ, ಈಚೆಗೆ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ ಆರ್ಥಿಕವಾಗಿ ಹೊರೆಯಾಗುತ್ತಿದೆ. ಬಿಳಿ ಪೌಡರ್ಗೆ ಒಂದು ಕೆಜಿಗೆ 50 ರೂ. ಪಾವತಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂ&ಸಂಸ್ಥೆಗಳು ಸಹಾಯಹಸ್ತ ನೀಡಬೇಕು ಎಂದು ಹೊನಗೋಳ ಕುಟುಂಬಸ್ಥರು ಕೋರಿದ್ದಾರೆ.
ಹಲವು ವರ್ಷಗಳಿಂದ ವಿಭೂತಿ ತಯಾರಿಸುತ್ತಿದ್ದೇವೆ. ಈವರೆಗೂ ಸರ್ಕಾರದಿಂದ ಯಾವುದೇ ಸಹಾಯ ದೊರೆತಿಲ್ಲ. ಸಹಾಯ ಮಾಡುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಹಲವು ಬಾರಿ ಕೋರಿದ್ದೇವೆ.
> ಸಂದೀಪ ಹೊನಗೋಳ ವಿಭೂತಿ ತಯಾರಕ