ಕಲಬುರಗಿ ಎಸ್ಬಿಆರ್ ಕಾಲೇಜಿನಲ್ಲಿ ಗುರುವಾರ ನಡೆದ ವಿಶ್ವಪುಸ್ತಕ, ಹಕ್ಕುಸ್ವಾಮ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಟಿ.ವಿ.ಶಿವಾನಂದನ್, ಶ್ರೀಶೈಲ್ ಹೊಗಾಡೆ ಇತರರಿದ್ದರು.
- ಡೀನ್ ಟಿ.ವಿ.ಶಿವಾನಂದನ್ ಅನಿಸಿಕೆ
- ಎಸ್ಬಿಆರ್ ಕಾಲೇಜಿನಲ್ಲಿ ವಿಶ್ವ ಹಕ್ಕುಸ್ವಾಮ್ಯ ದಿನಾಚರಣೆ
ಕಲಬುರಗಿ: ಪುಸ್ತಕಗಳು ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುವುದರ ಜತೆಗೆ ಭಾಷಾ ಕೌಶಲ ಅಭಿವೃದ್ಧಿಪಡಿಸುತ್ತವೆ ಎಂದು ಶರಣಬಸವ ವಿಶ್ವವಿದ್ಯಾಲಯದ ಡೀನ್ ಟಿ.ವಿ.ಶಿವಾನಂದನ್ ಹೇಳಿದರು.
ನಗರದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಸ್ತಕಗಳು ಜೀವನ ಸಮೃದ್ಧಗೊಳಿಸುತ್ತವೆ ಎಂದರು.
ವಿಶ್ವ ಪುಸ್ತಕ ದಿನ ಹಾಗೂ ಕಾಪಿರೈಟ್ ದಿನವನ್ನು ಯುನೆಸ್ಕೋ ಸಂಸ್ಥೆ ಪ್ರಾರಂಭಿಸಿದ್ದು, ಓದು, ಪ್ರಕಾಶನ ಹಾಗೂ ಕಾಪಿರೈಟ್ ಮೂಲಕ ಬೌದ್ಧಿಕ ಸಂಪತ್ತಿನ ರಣೆ ಉತ್ತೇಜಿಸುವ ಉದ್ದೇಶ ಹೊಂದಿದೆ. ವಿಶೇಷವಾಗಿ ಯುವ ಜನರಲ್ಲಿ ಓದುವ ಅಭಿರುಚಿ ಬೆಳೆಸುವ ಮತ್ತು ಸಮಾಜ ನಿರ್ಮಾಣದಲ್ಲಿ ಪುಸ್ತಕಗಳ ಮಹತ್ವ ಅರಿವಿಗೆ ತರುವ ಉದ್ದೇಶದಿಂದ ಈ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು.
ಅಧ್ಯತೆ ವಹಿಸಿದ್ದ ಹಿಂದಿ ವಿಭಾಗದ ಮುಖ್ಯಸ್ಥ ಡಾ.ಚಂದ್ರಕಾಂತ ಪಾಟೀಲ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ದ. ರಾ.ಬೇಂದ್ರೆ ಅವರು ಉತ್ತಮ ಗ್ರಂಥಾಸಕ್ತರಾಗಿದ್ದು, ವೈಯಕ್ತಿಕ ಗ್ರಂಥಾಲಯ ಹೊಂದಿದ್ದರು. ವಿದ್ಯಾರ್ಥಿಗಳು ಪುಸ್ತಕ ಖರೀದಿಸುವ ಹಾಗೂ ಉಡುಗೊರೆಯಾಗಿ ನೀಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳು ನಮ್ಮ ಜೀವನವನ್ನು ರೂಪಿಸುವುದಲ್ಲದೆ ಆತಂಕ ಹಾಗೂ ನಿರಾಸೆ ದೂರ ಮಾಡುವಲ್ಲಿ ನೆರವಾಗುತ್ತವೆ ಎಂದು ಹೇಳಿದರು.
ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆ ಮತ್ತು ಪಿಯು ಕಾಲೇಜಿನ ಸುಮಾರು 40 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪುಸ್ತಕ ವಿಮರ್ಶೆ, ಕವನ ವಾಚನ, ಕಥೆ ಹೇಳಿಕೆ ಹಾಗೂ ಭಾಷಣಗಳು ನಡೆದವು. ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಪುಸ್ತಕವನ್ನು ಸ್ಮರಣಿಕೆಯಾಗಿ ನೀಡಲಾಯಿತು.
ಕಾಲೇಜಿನ ಪ್ರಾಚಾರ್ಯ ಎನ್.ಎಸ್.ದೇವರಕಲ್ ಮಾರ್ಗದರ್ಶನದಂತೆ ನಡೆದ ಕಾರ್ಯಕ್ರಮದಲ್ಲಿ ಸಂಪದಾ ಮತ್ತು ಕುಲ್ಸುಮ್ ನಿರೂಪಣೆ ಮಾಡಿದರು. ಅಂಕಿತಾ ಅತಿಥಿ ಪರಿಚಯ ಮಾಡಿದರು.